ಡೆಲ್ಲಿಗೆ ಮಣ್ಣುಮುಕ್ಕಿಸಿದ ಹೈದರಾಬಾದ್

Update: 2019-04-04 18:45 GMT

ದಿಲ್ಲಿ, ಎ.4: ಇಲ್ಲಿನ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ 16ನೇ ಐಪಿಎಲ್ ಪಂದ್ಯದಲ್ಲಿ ಗುರುವಾರ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್‌ಗಳ ಜಯ ಸಾಧಿಸಿದೆ.

 ಡೆಲ್ಲಿ ನೀಡಿದ 130 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 18.3 ಓವರ್‌ಗಳಲ್ಲಿ 5 ವಿಕೆಟ್‌ಗೆ 131 ರನ್ ಮಾಡಿತು. ಜಾನಿ ಬೈರ್‌ಸ್ಟೋ (48, 28 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ (10, 18 ಎಸೆತ ) ಮೊದಲ ವಿಕೆಟ್‌ಗೆ 64 ರನ್ ಜಮಾ ಮಾಡಿದರು. ಆ ಬಳಿಕ ಇವರಿಬ್ಬರೂ ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು. ವಿಜಯ್ ಶಂಕರ್ (16), ದೀಪಕ್ ಹೂಡಾ (10), ಮನೀಷ್ ಪಾಂಡೆ (10), ಯುಸೂಫ್ ಪಠಾಣ್ (ಅಜೇಯ 9) ಹಾಗೂ ಮುಹಮ್ಮದ್ ನಬಿ (ಅಜೇಯ 17) ಅಲ್ಪಕಾಣಿಕೆಗಳನ್ನು ನೀಡಿ ತಮ್ಮ ತಂಡವನ್ನು ಗೆಲುವಿನ ಗುರಿ ತಲುಪಿಸಿದರು.

ಇದಕ್ಕೂ ಮೊದಲು ಹೈದರಾಬಾದ್ ತಂಡ ಟಾಸ್ ಗೆದ್ದು ಡೆಲ್ಲಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ ಡೆಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಮಾಡಿತ್ತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಯುವ ಆಟಗಾರ ಪೃಥ್ವಿ ಶಾ (11, 11 ಎಸೆತ, 2 ಬೌಂಡರಿ) ಹಾಗೂ ಶಿಖರ್ ಧವನ್ (12, 14 ಎಸೆತ, 1 ಬೌಂಡರಿ ) ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 14 ರನ್ ಗಳಿಸಿದರು. ಆ ಬಳಿಕ ನಾಯಕ ಶ್ರೇಯಸ್ ಅಯ್ಯರ್(43, 41 ಎಸೆತ, 3 ಬೌಂಡರಿ, 1 ಸಿಕ್ಸರ್) ಜೊತೆಗೂಡಿದ ಸ್ಫೋಟಕ ಹೊಡೆತಗಳ ಆಟಗಾರ ರಿಷಭ್ ಪಂತ್ (5) ಇನಿಂಗ್ಸ್ ಕಟ್ಟುವ ಕಾಯಕದಲ್ಲಿ ತೊಡಗಿದರು. ಪಂತ್ ವಿಕೆಟ್ ಪತನದ ನಂತರ ಬಂದ ರಾಹುಲ್ ತೆವಾಟಿಯ (5) ಕೂಡ ಸಂದೀಪ್ ಶರ್ಮಾ ಎಸೆತದಲ್ಲಿ ನಬಿಗೆ ಕ್ಯಾಚ್ ನೀಡಿದಾಗ ಡೆಲ್ಲಿ ತಂಡದ ಮೊತ್ತ ಕೇವಲ 61 ರನ್. ಆ ಬಳಿಕ ಬ್ಯಾಟಿಂಗ್‌ಗೆ ಇಳಿದ ಕಾಲಿನ್ ಇನ್‌ಗ್ರಾಂ (5) ಶೀಘ್ರ ವಿಕೆಟ್ ಒಪ್ಪಿಸಿದರು. ತಾಳ್ಮೆಯಿಂದ ಆಡುತ್ತಿದ್ದ ನಾಯಕ ಶ್ರೇಯಸ್ ಅಯ್ಯರ್ ತಂಡದ ಆರನೇ ವಿಕೆಟ್ ಆಗಿ ಪೆವಿಲಿಯನ್ ಸೇರಿದರು. ಆಲ್‌ರೌಂಡರ್ ಅಕ್ಷರ್ ಪಟೇಲ್ (23) ಡೆಲ್ಲಿ ಪರ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಹೈದರಾಬಾದ್ ಪರ ನಬಿ (21ಕ್ಕೆ 2), ನಾಯಕ ಭುವನೇಶ್ವರ (27ಕ್ಕೆ 2) ಹಾಗೂ ರಶೀದ್ ಖಾನ್ (18ಕ್ಕೆ 1) ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News