ಜಪಾನ್ ಕಂಪೆನಿಗೆ ಬಾಕಿ ಪಾವತಿಸದೇ ಇದ್ದರೆ ಜೈಲು: ರ್ಯಾನ್‌ ಬಾಕ್ಸಿ ಪ್ರವರ್ತಕರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Update: 2019-04-05 17:34 GMT

ಹೊಸದಿಲ್ಲಿ, ಎ. 5: ಸಿಂಗಪುರ ಟ್ರಿಬ್ಯೂನಲ್ ನಿರ್ದೇಶನದಂತೆ ಜಪಾನ್‌ನ ಕಂಪೆನಿ ದೈಚಿ ಸಾಂಕ್ಯೊಗೆ 4,000 ಕೋ. ರೂ. ಪಾವತಿಸಲು ಮೂರ್ತರೂಪದ ಯೋಜನೆ ಸಲ್ಲಿಸುವಂತೆ ಮಾರ್ಚ್ 14ರಂದು ನೀಡಿದ ನಿರ್ದೇಶನಕ್ಕೆ ಪ್ರತಿಕ್ರಿಯೆಯಾಗಿ ರ್ಯಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಮಾಲ್ವಿಂದರ್ ಸಿಂಗ್ ಶಿವಿಂದರ್ ಸಿಂಗ್ ನೀಡಿದ ಪ್ರತಿಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.

  ದೈಚಿ ಸಾಂಕ್ಯೊಗೆ ಹಣ ಪಾವತಿಸದೇ ಇರುವುದಕ್ಕೆ ಸಂಬಂಧಿಸಿ ಸಿಂಗ್ ಸಹೋದರರ ವಿರುದ್ಧದ ನ್ಯಾಯಾಂಗ ನಿಂದನೆ ದೂರನ್ನು ಕೂಡಲೇ ಆಲಿಸಬಹುದು ಹಾಗೂ ತನ್ನ ಆದೇಶ ಉಲ್ಲಂಘಿಸಿದ್ದರೆ, ಅವರನ್ನು ಜೈಲಿಗೆ ಕಳುಹಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ.

ರ್ಯಾನ್‌ಬಾಕ್ಸಿ ಪ್ರವರ್ತಕರ ವಿರುದ್ಧ ಜಪಾನ್ ಕಂಪೆನಿ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರನ್ನು ಕೂಡ ಒಳಗೊಂಡ ಪೀಠ ಎಪ್ರಿಲ್ 11ಕ್ಕೆ ನಿಗದಿಪಡಿಸಿದೆ.

ಸಿಂಗಾಪುರ ಟ್ರಿಬ್ಯೂನಲ್ ನಿರ್ದೇನದಂತೆ ಸಿಂಗ್ ಸಹೋದರರು 4000 ಕೋಟಿ ರೂಪಾಯಿ ಪಾವತಿಸದ ಹಿನ್ನೆಲೆಯಲ್ಲಿ ಜಪಾನ್ ಕಂಪೆನಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News