×
Ad

ಯುಪಿಎಸ್ಸಿ ಪರೀಕ್ಷೆ: ಜುನೈದ್ ಅಹ್ಮದ್ ದೇಶಕ್ಕೆ ತೃತೀಯ

Update: 2019-04-05 23:51 IST

ಹೊಸದಿಲ್ಲಿ,ಎ.5: ಶಾರದಾ ವಿವಿಯಲ್ಲಿ ತನ್ನ ಇಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿದ ಪ್ರತಿಷ್ಠಿತ ಅಲಿಗಡ ಮುಸ್ಲಿಂ ವಿವಿಯ ಹಳೆಯ ವಿದ್ಯಾರ್ಥಿ ಜುನೈದ್ ಅಹ್ಮದ್(27) ಅವರು 2018ನೇ ಸಾಲಿನ ನಾಗರಿಕ ಪರೀಕ್ಷೆಗಳ ಅಂತಿಮ ಪರೀಕ್ಷೆಯಲ್ಲಿ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಫಲಿತಾಂಶಗಳನ್ನು ಶುಕ್ರವಾರ ಸಂಜೆ ಘೋಷಿಸಲಾಗಿದೆ.

ಪರೀಕ್ಷೆಗಾಗಿ ಭೂಗೋಳ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದ ಜುನೈದ್ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಎನ್‌ಜಿಒ ಝಕಾತ್ ಪ್ರತಿಷ್ಠಾನದಿಂದ ಮಾರ್ಗದರ್ಶನ ಪಡೆದಿದ್ದರು. ಅವರು 2013ರಿಂದಲೂ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದರು.

ಈ ಹಿಂದೆ ನಾನು ವೈಫಲ್ಯವನ್ನು ಕಂಡಿದ್ದೆ ಮತ್ತು ಇಂದು ನನ್ನನ್ನು ಹಿಡಿಯುವವರು ಇಲ್ಲ. ಈ ಸಾಧನೆಯ ಸಂಭ್ರಮವು ಹೊಣೆಗಾರಿಕೆಯ ಹೊರೆಯೊಂದಿಗೇ ಬಂದಿದೆ. ಇನ್ನೀಗ ನಾನು ಜನತೆಗಾಗಿ ಕೆಲಸ ಮಾಡಬೇಕು ಮತ್ತು ಸರಕಾರದ ಯೋಜನೆಗಳು ಫಲಾನುಭವಿಗಳನ್ನು ತಲುಪುವಂತೆ ನೋಡಿಕೊಳ್ಳಬೇಕಿದೆ ಎಂದು ಜುನೈದ್ ಹೇಳಿದರು.

ಜುನೈದ್ ಅವರ ತಂದೆ ವಕೀಲರಾಗಿದ್ದು,ತಾಯಿ ಗೃಹಿಣಿಯಾಗಿದ್ದಾರೆ. ಉ.ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ಪಟ್ಟಣದ ಸೇಂಟ್ ಮೇರಿಸ್ ಸ್ಕೂಲ್‌ನಲ್ಲಿ ಓದಿದ್ದ ಅವರಿಗೆ ಇಬ್ಬರು ಸೋದರಿಯರು ಮತ್ತು ಓರ್ವ ಕಿರಿಯ ಸೋದರ ಇದ್ದಾರೆ.

‘‘ನಾನು ಮಧ್ಯಮ ವರ್ಗದ ಹಿನ್ನೆಲೆಯ ಕುಟುಂಬದಿಂದ ಬಂದಿದ್ದೇನೆ. ತಮ್ಮ ಮಗು ಐಎಎಸ್ ಅಧಿಕಾರಿಯಾಗಬೇಕು ಎಂದು ಭಾರತದಲ್ಲಿನ ಪ್ರತಿ ಹೆತ್ತವರೂ ಬಯಸುತ್ತಾರೆ ಮತ್ತು ನನ್ನ ಹೆತ್ತವರೂ ಇದಕ್ಕೆ ಭಿನ್ನರಾಗಿರಲಿಲ್ಲ. ನನಗೆ ಆಸಕ್ತಿಯಿರಲಿಲ್ಲ, ಆದರೆ ಕಾಲಕ್ರಮೇಣ ನಾನು ಅದನ್ನು ಸಾಧಿಸಬಲ್ಲೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೆ ಮತ್ತು ಅದಕ್ಕಾಗಿ ನನ್ನನ್ನು ಸಜ್ಜುಗೊಳಿಸಿಕೊಂಡಿದ್ದೆ ’’ ಎಂದು ಜುನೈದ್ ಹೇಳಿದರು.

ಮುಸ್ಲಿಂ ಸಮುದಾಯದ ಹೆಚ್ಚಿನ ಯುವಜನರು ಯುಪಿಎಸ್‌ಸಿ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತಾನು ಶ್ರಮಿಸುವುದಾಗಿ ಹೇಳಿದ ಅವರು,‘‘ಹೆಚ್ಚಿನ ಮುಸ್ಲಿಮರು ಈ ಪರೀಕ್ಷೆಗಳಿಗೆ ಹಾಜರಾಗಲು ಬಯಸುತ್ತಿಲ್ಲ,ಪರೀಕ್ಷೆಯಲ್ಲಿ ತಮ್ಮ ವಿರುದ್ಧ ತಾರತಮ್ಯ ನಡೆಯುತ್ತದೆ ಎಂದು ಅವರು ಭಾವಿಸಿದ್ದಾರೆ. ಮಹತ್ವದ್ದೆಂದರೆ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯು ಉತ್ತಮವಾಗಿಲ್ಲ. ಸಮುದಾಯದ ಹೆಚ್ಚಿನವರಿಗೆ ಸ್ಫೂರ್ತಿ ನೀಡಲು ಮತ್ತು ಪರೀಕ್ಷೆಗೆ ಹಾಜರಾಗುವಂತೆ ಪ್ರೇರೇಪಿಸಲು ನನ್ನ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇನೆ ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News