ಪಾಕಿಸ್ತಾನದ ಎಫ್-16 ಹೊಡೆದುರುಳಿಸಿರುವುದಕ್ಕೆ ಪುರಾವೆ ಇದೆ: ಭಾರತೀಯ ವಾಯು ಪಡೆ

Update: 2019-04-05 18:24 GMT

ಹೊಸದಿಲ್ಲಿ, ಎ. 5: ಫೆಬ್ರವರಿ 27ರಂದು ನಡೆದ ವೈಮಾನಿಕ ಘರ್ಷಣೆಯಲ್ಲಿ ಪಾಕಿಸ್ತಾನ ವಾಯು ಪಡೆಯ ಎಪ್-16 ವಿಮಾನವನ್ನು ಹೊಡೆದುರುಳಿಸಿರುವುದನ್ನು ಭಾರತೀಯ ವಾಯು ಪಡೆ ಶುಕ್ರವಾರ ಸಮರ್ಥಿಸಿಕೊಂಡಿದೆ.

 ‘‘ವೈಮಾನಿಕ ಘರ್ಷಣೆಯ ಸಂದರ್ಭ ನೌಶೇರಾ ವಲಯದಲ್ಲಿ ಭಾರತೀಯ ವಾಯು ಪಡೆಯ ಮಿಗ್ 21 ಬಿಸನ್ ಪಾಕಿಸ್ತಾನ ವಾಯು ಪಡೆಯ ಎಫ್-16 ವಿಮಾನವನ್ನು ಹೊಡೆದುರುಳಿಸಿದೆ’’ ಎಂದು ಭಾರತೀಯ ವಾಯು ಪಡೆಯ ಹೇಳಿಕೆ ತಿಳಿಸಿದೆ.

 ಅಮೆರಿಕದ ಮ್ಯಾಗಝಿನ್ ‘ಫಾರಿನ್ ಪಾಲಿಸಿ’ಯಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾದ ಬಳಿಕ ಭಾರತೀಯ ವಾಯುಪಡೆ ಈ ಸ್ಪಷ್ಟನೆ ನೀಡಿದೆ.

 ಅಮೆರಿಕದ ಅಧಿಕಾರಿಗಳು ಇತ್ತೀಚೆಗೆ ಪಾಕಿಸ್ತಾನದ ಎಫ್-16 ವಿಮಾನಗಳನ್ನು ಲೆಕ್ಕಹಾಕಿದ್ದಾರೆ. ಯಾವುದೇ ವಿಮಾನ ನಾಪತ್ತೆಯಾಗಿಲ್ಲ ಎಂದು ‘ಫಾರಿನ್ ಪಾಲಿಸಿ’ಗೆ ಸನ್ನಿವೇಶದ ಬಗ್ಗೆ ಖಚಿತ ಮಾಹಿತಿ ಇರುವ ಅಮೆರಿಕ ರಕ್ಷಣಾ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಗುರುವಾರ ‘ಫಾರಿನ್ ಪಾಲಿಸಿ’ಯಲ್ಲಿ ಪ್ರಕಟಗೊಂಡ ವರದಿಯಲ್ಲಿ ಹೇಳಲಾಗಿತ್ತು.

  ಕಾಶ್ಮೀರದಲ್ಲಿರುವ ಭಾರತೀಯ ಸೇನಾ ಸ್ಥಾವರವನ್ನು ಗುರಿಯಾಗಿರಿಸಿ ವೈಮಾನಿಕ ದಾಳಿ ನಡೆಸಿದ ಸಂದರ್ಭ ಪಾಕಿಸ್ತಾನ ಅಮೆರಿಕ ನಿರ್ಮಿತ ಯುದ್ಧ ವಿಮಾನವನ್ನು ಬಳಸಿತ್ತು ಎಂದು ಸಾಬೀತು ಮಾಡಲು ನಿರ್ಣಾಯಕ ಪುರಾವೆಯಾಗಿ ಪಾಕಿಸ್ತಾನ ಉಡಾಯಿಸಿದ ಎಎಂಆರ್‌ಎಎಎಂ ಕ್ಷಿಪಣಿಯ ತುಂಡನ್ನು ಭಾರತೀಯ ವಾಯು ಪಡೆ ಫೆಬ್ರವರಿ 28ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿತ್ತು.

ಆದರೆ, ಎಫ್-16 ಯುದ್ಧ ವಿಮಾನಗಳನ್ನು ಬಳಸಿಲ್ಲ ಎಂದು ಪಾಕಿಸ್ತಾನ ಖಚಿತವಾಗಿ ಹೇಳಿತ್ತು ಹಾಗೂ ಭಾರತೀಯ ವಾಯು ಪಡೆ ತನ್ನ ವಿಮಾನವನ್ನು ಹೊಡೆದುರುಳಿಸಿರುವುದನ್ನು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News