ಭಾರತಕ್ಕೆ ವಾಯುಮಾರ್ಗವನ್ನು ಭಾಗಶಃ ತೆರೆದ ಪಾಕ್

Update: 2019-04-07 17:43 GMT

ಹೊಸದಿಲ್ಲಿ,ಎ.7: ಪಾಕಿಸ್ತಾನವು ಗುರುವಾರದಿಂದ ತನ್ನ ವಾಯುಪ್ರದೇಶವನ್ನು ಭಾರತಕ್ಕೆ ಭಾಗಶಃ ತೆರೆದಿದ್ದು, ದೇಶದ ಸಾರ್ವಜನಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳು ಆ ಮಾರ್ಗವಾಗಿ ಹಾರಾಟವನ್ನು ಆರಂಭಿಸಿರುವುದಾಗಿ ಮೂಲಗಳು ತಿಳಿಸಿವೆ.

ಇದರಿಂದಾಗಿ ಏರ್‌ಇಂಡಿಯಾ ವಿಮಾನಗಳಿಗೆ ಸಮಯ ಹಾಗೂ ಇಂಧನದಲ್ಲಿ ಭಾರೀ ಉಳಿತಾಯವಾಗಲಿದೆಯೆಂದು ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿ 26ರಂದು ಭಾರತೀಯ ವಾಯುಪಡೆಯ ವಿಮಾನಗಳು  ಬಾಲಕೋಟ್‌ನಲ್ಲಿ ವಾಯುದಾಳಿ ನಡೆಸಿದ ಬಳಿಕ, ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಭಾಗಶಃ ಮುಚ್ಚಿಬಿಟ್ಟಿತ್ತು. ಪಾಕಿಸ್ತಾನದ ಈ ನಡೆಯಿಂದ ಭಾರತದಿಂದ ಆಗಮಿಸುವ ಹಾಗೂ ನಿರ್ಗಮಿಸುವ ಅಂತಾರಾಷ್ಟ್ರೀಯ ವಿಮಾನಗಳಿಗೆ ಭಾರೀ ತೊಂದರೆಯಾಗಿತ್ತು.

ಫೆಬ್ರವರಿ 27ರಂದು ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ವಾಯುಸೀಮೆಯ ಮುಚ್ಚುಗಡೆಯನ್ನು ಘೋಷಿಸಿದ ಬಳಿಕ, ಜಗತ್ತಿನಾದ್ಯಂತ ಭಾರತಕ್ಕೆ ಆಗಮಿಸುವ ವಿಮಾನಗಳು ತಮ್ಮ ಪಥವನ್ನು ಬದಲಾಯಿಸಿದ್ದವು.

ಅಮೆರಿಕಕ್ಕೆ 33 ಹಾಗೂ ಯುರೋಪ್‌ಗೆ 66 ವಿಮಾನ ಹಾರಾಟಗಳನ್ನು ನಡೆಸುತ್ತಿದ್ದ ಏರ್‌ಇಂಡಿಯಾವು, ಪಾಕ್ ವಾಯುಪ್ರದೇಶದ ಮುಚ್ಚುಗಡೆಯ ಬಳಿಕ ತನ್ನ ಹಾರಾಟಗಳಲ್ಲಿ ಕಡಿತವುಂಟು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News