10ನೇ ತರಗತಿಯ ಇತಿಹಾಸದ ಪಠ್ಯಪುಸ್ತಕದಿಂದ 3 ಅಧ್ಯಾಯಗಳನ್ನು ಕೈಬಿಟ್ಟ ಎನ್‌ಸಿಇಆರ್‌ಟಿ

Update: 2019-04-08 15:21 GMT

ಹೊಸದಿಲ್ಲಿ, ಎ.8: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಆಡಳಿತದಡಿ ಕೈಗೊಳ್ಳಲಾಗಿರುವ ದ್ವಿತೀಯ ಪಠ್ಯಪುಸ್ತಕ ಪುನರ್‌ಪರಿಶೀಲನೆಯ ಅಂಗವಾಗಿ 'ಭಾರತ ಮತ್ತು ಸಮಕಾಲೀನ ಜಗತ್ತು-II' ಶೀರ್ಷಿಕೆಯ 10ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿಯ ಮೂರು ಅಧ್ಯಾಯಗಳನ್ನು ತೆಗೆದುಹಾಕಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ)ಯು ನಿರ್ಧರಿಸಿದೆ.

ಮೂರು ಅಧ್ಯಾಯಗಳನ್ನು ಕೈಬಿಡುವ ನಿರ್ಧಾರವು ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ತಗ್ಗಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಆರಂಭಿಸಿದ್ದ ಪಠ್ಯಕ್ರಮ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿದೆ ಎಂದು ಹೇಳಲಾಗಿದೆ. 72 ಪುಟಗಳು ಕಡಿಮೆಯಾಗಿರುವ ಪರಿಷ್ಕೃತ ಪಠ್ಯಪುಸ್ತಕವು ಈ ತಿಂಗಳು ಆರಂಭಗೊಂಡಿರುವ ನೂತನ ಶೈಕ್ಷಣಿಕ ವರ್ಷದಿಂದ ಅನ್ವಯಗೊಳ್ಳಲಿದೆ.

ಕಳೆದ ತಿಂಗಳು ಎನ್‌ಸಿಇಆರ್‌ ಟಿಯು ಒಂಭತ್ತನೇ ತರಗತಿಯ ಇತಿಹಾಸದ ಪಠ್ಯಪುಸ್ತಕದಿಂದ ಜಾತಿ ಹೋರಾಟಗಳು,ಕ್ರಿಕೆಟ್‌ನ ಇತಿಹಾಸ ಮತ್ತು ಗ್ರಾಮೀಣ ಸಮುದಾಯಗಳ ಮೇಲೆ ವಸಾಹತುಶಾಹಿಯ ಪರಿಣಾಮಕ್ಕೆ ಸಂಬಂಧಿಸಿದ ಮೂರು ಅಧ್ಯಾಯಗಳನ್ನು ಕೈಬಿಟ್ಟಿತ್ತು.

 ಈ ಹಿಂದೆ ವಿದ್ಯಾರ್ಥಿಗಳಿಗೆ ಬೋಧಿಸಲು 10ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ವಿವಿಧ ವಿಭಾಗಗಳಡಿ ಎಂಟು ಅಧ್ಯಾಯಗಳ ಪೈಕಿ ಐದು ಅಧ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳುವ ವಿವೇಚನಾಧಿಕಾರವನ್ನು ಶಾಲೆಗಳು ಹೊಂದಿದ್ದವು.

ನ್ಯಾಷನಲಿಸ್ಟ್ ಮೂವ್‌ಮೆಂಟ್ ಇನ್ ಇಂಡೋ-ಚೈನಾ, ವರ್ಕ್ ಲೈಫ್ ಆ್ಯಂಡ್ ಲೀಸರ್ ಮತ್ತು ನಾವೆಲ್ಸ್, ಸೊಸೈಟಿ ಆ್ಯಂಡ್ ಹಿಸ್ಟರಿ ಇವು 10ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಿಂದ ಕೈಬಿಡಲಾಗಿರುವ ಮೂರು ಅಧ್ಯಾಯಗಳಾಗಿವೆ.

ಎಲ್ಲ ವಿಷಯಗಳಲ್ಲಿ ಪಠ್ಯಕ್ರಮವನ್ನು ಶೇ.50ರಷ್ಟು ಕಡಿತಗೊಳಿಸಲು ಜಾವಡೇಕರ್ ಶಿಫಾರಸು ಮಾಡಿದ್ದರೆ,ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ತೆಗೆಯಲಾಗಿರುವ ವಿಷಯದ ಪ್ರಮಾಣವು ಗಣಿತ ಮತ್ತು ವಿಜ್ಞಾನ ಪಠ್ಯಪುಸ್ತಕಗಳಿಗೆ ಹೋಲಿಸಿದರೆ ಹೆಚ್ಚಿದೆ.

 ಇತಿಹಾಸ ಮತ್ತು ಗಣಿತಕ್ಕೆ ಹೋಲಿಸಿದರೆ 100 ಅಂಕಗಳ ಸಮಾಜ ವಿಜ್ಞಾನ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಬಹಳಷ್ಟು ಓದಬೇಕಿತ್ತು ಎನ್ನುವುದು ಈ ಕ್ರಮಕ್ಕೆ ಕಾರಣ. ಇತಿಹಾಸ, ಭೂಗೋಳಶಾಸ್ತ್ರ, ರಾಜಕೀಯ ವಿಜ್ಞಾನ ಮತ್ತು ಅರ್ಥಶಾಸ್ತ್ರಗಳನ್ನೊಳಗೊಂಡ ಸಮಾಜ ವಿಜ್ಞಾನವು ಸಾಮಾನ್ಯ ವಿಷಯವಾಗಿದ್ದು,ಇತಿಹಾಸದ ಪುಸ್ತಕಗಳು ಹೆಚ್ಚಿನ ವಿಷಯಗಳನ್ನು ಹೊಂದಿದ್ದವು. ಇದೇ ಕಾರಣದಿಂದ ಇತಿಹಾಸದಲ್ಲಿ ಕೈಬಿಟ್ಟಿರುವ ವಿಷಯಗಳ ಪ್ರಮಾಣ ತುಲನಾತ್ಮಕವಾಗಿ ಹೆಚ್ಚಿದೆ ಎಂದು ಎನ್‌ಸಿಇಆರ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿಯ 'ಗುಜರಾತ್‌ನ ಮುಸ್ಲಿಂ ವಿರೋಧಿ ದಂಗೆಗಳು' ಎಂಬ ಉಲ್ಲೇಖವನ್ನು 'ಗುಜರಾತ್ ದಂಗೆಗಳು' ಎಂದು ಪರಿವರ್ತಿಸಲು ಮತ್ತು ಹಿಂದುತ್ವ ವ್ಯಾಖ್ಯಾನವನ್ನು ಬದಲಿಸಲು ಎನ್‌ಸಿಇಆರ್‌ಟಿ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ವರದಿಯಾದ ಬಳಿಕ ನರೇಂದ್ರ ಮೋದಿ ಸರಕಾರವು ಪಠ್ಯಕ್ರಮವನ್ನು,ವಿಶೇಷವಾಗಿ ಇತಿಹಾಸದ ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸುತ್ತಿದೆ ಎಂದು ಆರೋಪಿಸಲಾಗಿತ್ತು. ಪುಸ್ತಕದಲ್ಲಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸಿದ್ಧ ಉಕ್ತಿ 'ರಾಜಧರ್ಮ' ಕೂಡ ಅನಗತ್ಯವೆಂದು ಪರಿಗಣಿಸಲಾಗಿತ್ತು ಎಂದೂ ವರದಿಯು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News