ಪಾಕ್ ವಿಮಾನ ಹೊಡೆದುರುಳಿಸಿದ್ದಕ್ಕೆ ಸಾಕ್ಷಿ ನೀಡಿದ ಐಎಎಫ್: ಅದೇನು ಗೊತ್ತಾ?

Update: 2019-04-08 15:43 GMT

ಹೊಸದಿಲ್ಲಿ, ಎ. 8: ಫೆಬ್ರವರಿ 27ರಂದು ನಡೆದ ವೈಮಾನಿಕ ಘರ್ಷಣೆಯಲ್ಲಿ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನವನ್ನು ಕಳೆದುಕೊಂಡಿಲ್ಲ ಎಂಬ ಪಾಕಿಸ್ತಾನದ ಪ್ರತಿಪಾದನೆಯನ್ನು ಭಾರತದ ವಾಯು ಪಡೆ ಸೋಮವಾರ ರಾಡರ್ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಅಲ್ಲಗಳೆದಿದೆ.

ವೈಮಾನಿಕ ಘರ್ಷಣೆಯಲ್ಲಿ ಪಾಕಿಸ್ತಾನ ವಾಯು ಪಡೆ ಎಫ್-16 ವಿಮಾನವನ್ನು ಕಳೆದುಕೊಂಡಿದೆ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ವಿಶ್ವಾಸಾರ್ಹ ಪುರಾವೆಗಳು ಲಭ್ಯವಿದೆ ಎಂದು ಭಾರತೀಯ ವಾಯು ಪಡೆ ಹೇಳಿದೆ. ಆದರೆ, ಭದ್ರತೆ ಹಾಗೂ ಗೌಪ್ಯತೆ ದೃಷ್ಟಿಯಿಂದ ಈ ಮಾಹಿತಿ ಬಹಿರಂಗಗೊಳಿಸುವುದನ್ನು ಭಾರತೀಯ ವಾಯು ಪಡೆ ನಿರ್ಬಂಧಿಸಿದೆ ಎಂದು ವಾಯು ಪಡೆ ಸಿಬ್ಬಂದಿ (ಕಾರ್ಯಾಚರಣೆ)ಯ ಅಸಿಸ್ಟೆಂಟ್ ಚೀಪ್ ಏರ್ ವೈಸ್ ಮಾರ್ಷಲ್ ಆರ್.ಜಿ.ಕೆ. ಕಪೂರ್ ಹೇಳಿದ್ದಾರೆ.

ಪಾಕಿಸ್ತಾನ ವಾಯು ಪಡೆಯ ಎಫ್-16 ದಾಳಿಯ ರೇಡಿಯೊ-ಟೆಲಿಫೋನಿ ಇಂಟರ್‌ಸೆಪ್ಟ್‌ಗಳ ಹಾಗೂ ಗ್ರೌಂಡ್ ವಯರ್‌ಲೆಸ್ ಇಂಟರ್‌ಸೆಪ್ಟ್‌ಗಳ ಮಾದರಿಯ ಪುರಾವೆಗಳು ಕೂಡ ವಾಯು ಪಡೆಯಲ್ಲಿದೆ. ಆದರೆ, ಇದನ್ನು ಭದ್ರತೆ ಹಾಗೂ ಗೌಪ್ಯತೆ ಕಾರಣದಿಂದ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಬಾಲಕೋಟ್‌ನಲ್ಲಿರುವ ಉಗ್ರರ ಶಿಬಿರಗಳ ಮೇಲೆ ಯಶಸ್ವಿ ದಾಳಿ ನಡೆಸುವ ಮೂಲಕ ಹಾಗೂ ಭಾರತೀಯ ಸೇನಾ ಸ್ಥಾವರಗಳ ಮೇಲೆ ದಾಳಿ ನಡೆಸಿರುವುದಕ್ಕೆ ಪಾಕ್ ವಾಯು ಪಡೆಯ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಮೂಲಕ ಭಾರತೀಯ ವಾಯು ಪಡೆ ತನ್ನ ಗುರಿ ಸಾಧಿಸಿದೆ ಎನ್ನುವುದು ಸತ್ಯ ಎಂದು ವೈಸ್ ಮಾರ್ಷಲ್ ಕಪೂರ್ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಪಶ್ಚಿಮದಲ್ಲಿ ವೈಮಾನಿಕ ಘರ್ಷಣೆ ನಡೆದಿರುವುದು, ಅಭಿನಂದನ್ ವರ್ಧಮಾನ್ ವಿಮಾನದ ಎದುರು ಎಫ್-16ನ ಗುಂಪು ವಿಮಾನಗಳು ಇರುವುದು ಎಡಬ್ಲುಎಸಿಎಸ್ ರಾಡರ್‌ನ ಒಂದನೇ ಚಿತ್ರದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. 10 ಸೆಕೆಂಡ್‌ಗಳ ಬಳಿಕ ತೆಗೆಯಲಾದ 2ನೇ ಚಿತ್ರದಲ್ಲಿ ಎಫ್-16 ವಿಮಾನ ನಾಪತ್ತೆಯಾಗಿರುವುದು ದಾಖಲಾಗಿದೆ. ಅದುವೇ ಪಾಕಿಸ್ತಾನ ವಾಯು ಪಡೆ ಕಳೆದುಕೊಂಡ ಎಫ್-16 ವಿಮಾನ ಎಂದು ಕಪೂರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News