ಐಪಿಎಫ್‌ಟಿ ಉಪಾಧ್ಯಕ್ಷ ಅನಂತ ದೆಬ್ಬರ್ಮಾ ಕಾಂಗ್ರೆಸ್‌ಗೆ ಸೇರ್ಪಡೆ, ಬಿಜೆಪಿಗೆ ಹಿನ್ನಡೆ
ಅಗರ್ತಲಾ,ಎ.8: ತ್ರಿಪುರಾ ಮೂಲನಿವಾಸಿಗಳ ರಂಗ(ಐಪಿಎಫ್‌ಟಿ)ದ ಅಧ್ಯಕ್ಷ ಎನ್.ಸಿ.ದೆಬ್ಬರ್ಮಾ ಅವರು ಬುಡಕಟ್ಟು ಜನರ ಹಿತಾಸಕ್ತಿಗಳಿಗೆ ವಿರುದ್ಧವಾದ ನೀತಿಗಳನ್ನು ರೂಪಿಸುತ್ತಿರುವ ಕೆಲವು ಬೇಜವಾಬ್ದಾರಿಯುತ ಯುವ ನಾಯಕರ ವಿರುದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಸಮರ್ಥರಾಗಿದ್ದಾರೆ ಎಂದು ಉಪಾಧ್ಯಕ್ಷ ಅನಂತ ದೆಬ್ಬರ್ಮಾ ಅವರು ಸೋಮವಾರ ಇಲ್ಲಿ ಆರೋಪಿಸಿದರು. ಇದೇ ಸಂದರ್ಭ ಅವರು ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಅವರೊಂದಿಗೆ ಪಕ್ಷದ ನಾಲ್ವರು ವಿಭಾಗೀಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳೂ ಕಾಂಗ್ರೆಸ್ ಮಡಿಲು ಸೇರಿದರು.
ಐಪಿಎಫ್‌ಟಿಯು ಪೌರತ್ವ ತಿದ್ದುಪಡಿ ಮಸೂದೆಯನ್ನು ಆಕ್ಷೇಪಿಸದಿರುವುದು ತನಗೆ ಅಸಮಾಧಾನವನ್ನುಂಟು ಮಾಡಿತ್ತು ಎಂದ ಅವರು, ಎನ್.ಸಿ.ದೆಬ್ಬರ್ಮಾ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಮತ್ತು ಪ್ರಧಾನ ಕಾರ್ಯದರ್ಶಿ ಮೇವಾರ ಕುಮಾರ ಜಮತಿಯಾ ಅವರು ಪ್ರಾಬಲ್ಯವನ್ನು ಮೆರೆಯುತ್ತಿದ್ದಾರೆ ಎಂದು ಆರೋಪಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬುಡಕಟ್ಟು ಮತಗಳನ್ನು ಪಡೆಯುವುದಿಲ್ಲ. ತ್ರಿಪುರಾದ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದರು. .