ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿ ಸಿಂಧು

Update: 2019-04-09 02:06 GMT

ಸಿಂಗಾಪುರ, ಎ.8: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ತಮ್ಮ ಹಳೆಯ ನಿರಾಸೆಗಳನ್ನು ಮರೆತು ಮಂಗಳವಾರದಿಂದ ಇಲ್ಲಿ ಆರಂಭವಾಗಲಿರುವ 3,55,000 ಡಾಲರ್ (ಸುಮಾರು 2 ಕೋ.43 ಲಕ್ಷ ರೂ.) ನಗದು ಬಹುಮಾನ ಮೊತ್ತದ ಸಿಂಗಾಪುರ ಓಪನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲು ಸಿದ್ಧವಾಗಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿಶ್ವ ಟೂರ್ ಫೈನಲ್ಸ್ ಗೆದ್ದುಕೊಂಡಿದ್ದ ಸಿಂಧು, ಕಳೆದ ಕೆಲವು ವಾರಗಳಿಂದ ತಮ್ಮ ಆಟದ ರಂಗು ಕಳೆದುಕೊಂಡಿದ್ದಾರೆ.

ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಪ್ರಥಮ ಸುತ್ತಿನಲ್ಲಿ ಹಾಗೂ ಮಲೇಶ್ಯ ಓಪನ್‌ನಲ್ಲಿ ದ್ವಿತೀಯ ಸುತ್ತಿನಲ್ಲಿ ಸಿಂಧು ಹೊರಬಿದ್ದಿದ್ದರು. ಉಭಯ ಟೂರ್ನಿಗಳಲ್ಲಿ ಅವರು ಕೊರಿಯದ ಸಂಗ್ ಜಿ ಹ್ಯೂನ್ ವಿರುದ್ಧ ಸೋಲನ್ನಪ್ಪಿದ್ದರು. ಇಂಡಿಯಾ ಓಪನ್‌ನಲ್ಲಿ ಸೆಮಿಫೈನಲ್‌ವರೆಗೂ ತಲುಪಿ ಚೀನಾದ ಹೆ ಬಿಂಗ್‌ಜಿಯಾವೊಗೆ ಶರಣಾಗಿದ್ದರು. ಸಿಂಗಾಪುರ ಓಪನ್‌ನ ಪ್ರಥಮ ಸುತ್ತಿನ ಪಂದ್ಯದಲ್ಲಿ ಸಿಂಧು, ಇಂಡೋನೇಶ್ಯದ ಲೈಯಾನ್ನಿ ಅಲೆಸ್ಸಾಂಡ್ರಾ ಮೈನಾಕಿ ಅವರ ಸವಾಲನ್ನು ಎದುರಿಸಲಿದ್ದಾರೆ. ಇನ್ನೊಂದೆಡೆ ಭಾರತದ ಮತ್ತೋರ್ವ ತಾರೆ ಸೈನಾ ನೆಹ್ವಾಲ್ ಇಂಡೋನೇಶ್ಯ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಈ ಋತುವಿನಲ್ಲಿ ಮೊದಲ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದಾರೆ. ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲೂ ಸೈನಾ ಕ್ವಾರ್ಟರ್‌ಫೈನಲ್‌ವರೆಗೂ ತಲುಪಿದ್ದರು. ಸೈನಾ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್ ನ ಉದಯೋನ್ಮುಖ ತಾರೆ ಹಾಜ್‌ಮಾರ್ಕ್ ಜಾರ್ಸ್‌ಫೆಲ್ಟ್ ಅವರ ಸವಾಲಿಗೆ ಸಜ್ಜಾಗಲಿದ್ದಾರೆ.

ಮಲೇಶ್ಯ ಓಪನ್‌ನ ಪುರುಷರ ಡಬಲ್ಸ್ ನಲ್ಲಿ ಕ್ವಾರ್ಟರ್‌ಫೈನಲ್‌ವರೆಗೂ ತಲುಪಿದ್ದ ಭಾರತದ ತಾರೆ ಕಿಡಂಬಿ ಶ್ರೀಕಾಂತ್, ಸಿಂಗಾಪುರ ಓಪನ್‌ನ ತಮ್ಮ ಮೊದಲ ಪಂದ್ಯದಲ್ಲಿ ಕ್ವಾಲಿಫೈಯರ್ ಆಟಗಾರನ ವಿರುದ್ಧ ಸ್ಪರ್ಧಿಸಲಿದ್ದಾರೆ.

ಅದೃಷ್ಟ ಪರೀಕ್ಷೆಗೆ ಸಜ್ಜಾಗಿರುವ ಹಲವು ಭಾರತೀಯರು

ಇತರ ಭಾರತೀಯ ಆಟಗಾರರ ಪೈಕಿ ಎಚ್.ಎಸ್.ಪ್ರಣಯ್ ಅವರು ಫ್ರಾನ್ಸ್‌ನ ಬ್ರೈಸ್ ಲೆವೆರ್ಡೆಝ್ ಹಾಗೂ ಸ್ವಿಸ್ ಓಪನ್ ಫೈನಲಿಸ್ಟ್ ಬಿ.ಸಾಯಿ ಪ್ರಣೀತ್ ಅವರು ಕಠಿಣ ಸವಾಲು ಎದುರಿಸಲಿದ್ದು, ವಿಶ್ವ ನಂ.1 ಆಟಗಾರ, ಅಗ್ರ ಶ್ರೇಯಾಂಕದ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಸಮೀರ್ ವರ್ಮಾ ಕೂಡ ಕ್ವಾಲಿಫೈಯರ್ ಆಟಗಾರನನ್ನು ಎದುರುಗೊಳ್ಳುವರು. ಇನ್ನು ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ-ಎನ್.ಸಿಕ್ಕಿ ರೆಡ್ಡಿ, ಮಹಿಳಾ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ಹಾಗೂ ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ- ಬಿ. ಸುಮಿತ್ ರೆಡ್ಡಿ ಜೋಡಿ ದೇಶದ ಪರ ಕಣಕ್ಕಿಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News