ಉದ್ಯಮಶೀಲತೆ, ಉದ್ಯೋಗ ಸೃಷ್ಟಿ: 2013ರಲ್ಲಿ ಮೋದಿ ಹೇಳಿದ್ದೇನು ?, ಸರಕಾರ ಮಾಡಿದ್ದೇನು ?

Update: 2019-04-09 08:06 GMT

2013ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಸರಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆಗಳು ಮತ್ತು ಆ ಆಶ್ವಾಸನೆಗಳ ಸ್ಥಿತಿ-ಗತಿ, ಆಶ್ವಾಸನೆ ಈಡೇರಿಸುವಲ್ಲಿ ಮೋದಿ ನೇತೃತ್ವದ ಸರಕಾರ ಸಫಲವಾಗಿದೆಯೇ ಇಲ್ಲವೇ ಎನ್ನುವ ಬಗ್ಗೆ caravanmagazine.in ‘ಮೋದಿ ಮೀಟರ್’ ಎನ್ನುವ ವರದಿ ಸರಣಿಯನ್ನು ಪ್ರಕಟಿಸಿದೆ.

ಹಾಲಿ ಇರುವ ಯೋಜನೆಗಳು ಹಾಗೂ ನೀತಿಗಳಿಗೆ ಎನ್ ಡಿಎ ಸರಕಾರ ಬದಲಾವಣೆಗಳನ್ನು ತಂದಿದ್ದರೂ  ಅವುಗಳ ಪರಿಣಾಮ  ಸೀಮಿತವಾಗಿದ್ದು, ಫಲಿತಾಂಶ ಕೂಡ ಗೌಣವಾಗಿದೆ. ಮಾರ್ಚ್ 16, 2015ರಂದು ಹೊಸ ಅನ್ವೇಷಣೆ, ಗ್ರಾಮೀಣ ಕೈಗಾರಿಕೆಗಳು ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ರೂ 210 ಕೋಟಿ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯಂಗವಾಗಿ  ಉದ್ಯಮಶೀಲತೆಯನ್ನು  ಹಾಗೂ  ಗ್ರಾಮೀಣ ಹಾಗೂ ಕೃಷಿ ಆಧರಿತ ಕೈಗಾರಿಕೆಗಳಲ್ಲಿ ಸ್ಟಾರ್ಟ್-ಅಪ್ ಸಂಸ್ಥೆಗಳನ್ನು ಉತ್ತೇಜಿಸಲು  ತಂತ್ರಜ್ಞಾನ ಮತ್ತು ಇಂಕ್ಯುಬೇಶನ್  ಸೆಂಟರ್ ಗಳ ಜಾಲ ಸ್ಥಾಪಿಸುವ ಉದ್ದೇಶವಿತ್ತು. ಈ  ಯೋಜನೆಗೆ  ಬಜೆಟಿನಿಲ್ಲಿ ಮೀಸಲಿರಿಸಲಾದ ಮೊತ್ತವನ್ನು 2018-19ರಲ್ಲಿ ರೂ 232 ಕೋಟಿಗೆ ಏರಿಸಿ  100 ಬಿಸಿನೆಸ್ ಇಂಕ್ಯುಬೇಟರ್ ಹಾಗೂ 20 ಟೆಕ್ನಾಲಜಿ ಬಿಸಿನೆಸ್ ಇಂಕ್ಯುಬೇಟರ್ ಸ್ಥಾಪಿಸುವ ಗುರಿ ಹೊಂದಲಾಗಿತ್ತು.

►ಅಟಲ್ ಇನ್ನೊವೇಶನ್ ಮಿಷನ್ ಹಾಗೂ ಸೆಲ್ಫ್-ಎಂಪ್ಲಾಯ್ಮೆಂಟ್ ಆ್ಯಂಡ್ ಟ್ಯಾಲೆಂಟ್ ಯುಟಿಲೈಸೇಶನ್  ಯೋಜನೆಯನ್ನು  ನೀತಿ ಆಯೋಗ  ಆರಂಭಿಸಿತ್ತಲ್ಲದೆ ಅವುಗಳಿಗೆ ತಲಾ ರೂ. 500 ಕೊಟಿ ಹಾಗೂ ರೂ. 1,000 ಕೋಟಿ ಹಣಕಾಸು ಸೌಲಭ್ಯ ಮೀಸಲಿರಿಸಿ ಹೊಸ ಅನ್ವೇಷಣೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿತ್ತು.

►ಸ್ಟಾರ್ಟ್-ಅಪ್ ಸಂಸ್ಥೆಗಳಿಗೆ ಬ್ಯಾಂಕ್ ಸಾಲ ಸೌಲಭ್ಯ ನೀಡುವ ಸಲುವಾಗಿ ಎಪ್ರಿಲ್ 5, 2016ರಲ್ಲಿ ಸ್ಟಾರ್ಟ್-ಅಪ್ ಇಂಡಿಯಾ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆ 2.5 ಲಕ್ಷ  ಮಂದಿಗೆ  ಸಹಾಯ ಮಾಡುವ  ನಿರೀಕ್ಷೆಯಿತ್ತು. ಈ ಯೋಜನೆಯ ಪರಿಣಾಮಕಾರಿ ಜಾರಿಗೆ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ  ಈ ಯೋಜನೆಯ ಗುರಿ ತಲುಪಲು ಕೇಂದ್ರ ಇನ್ನೂ ಬಹಳಷ್ಟು ದೂರು ಸಾಗಬೇಕಿದೆ. ಉದಾಹರಣೆಗೆ  ಮಾನ್ಯತೆ ಪಡೆದ 11,422 ಸ್ಟಾರ್ಟ್-ಅಪ್ ಸಂಸ್ಥೆಗಳ ಪೈಕಿ ಕೇವಲ 88 ಮಾತ್ರ ತೆರಿಗೆ  ವಿನಾಯಿತಿ ಪಡೆದಿವೆ.

►ಸಣ್ಣ ಹಾಗೂ ಹೊಸ ಕೈಗಾರಿಕೆಗಳ ಸ್ಥಾಪನೆಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ಪ್ರಕ್ರಿಯೆಯನ್ನು ಸುಲಭವಾಗಿಸುವ ನಿಟ್ಟಿನಲ್ಲೂ ಇನ್ನೂ ಬಹಳ ದೂರ ಸಾಗಬೇಕಿದೆ. ಆರು ಆಸನಗಳ ವಿಮಾನವನ್ನು ನಿರ್ಮಿಸಿದ ಕ್ಯಾಪ್ಟನ್ ಅಮೋಲ್ ಯಾದವ್ ಅವರಿಗೆ  ಈ ವಿಮಾನವನ್ನು ವಿಮಾನಯಾನ ಮಹಾನಿರ್ದೇಶಕರಲ್ಲಿ ನೋಂದಣಿಗೊಳಿಸಲು, ಅದು ಕೂಡ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಹಸ್ತಕ್ಷೇಪ ನಡೆಸಿದ ಹೊರತಾಗಿಯೂ  ಆರು ವರ್ಷಗಳೇ ತಗಲಿದ್ದ ಬಗ್ಗೆ ದಿ ಇಕನಾಮಿಕ್ ಟೈಮ್ಸ್ ವರದಿ ಮಾಡಿತ್ತು. ಅಂತೆಯೇ ಎನ್‍ ಡಿಟಿವಿ ವರದಿಯೊಂದರ ಪ್ರಕಾರ ಭಾರತದಲ್ಲಿ ಡ್ರೋನ್ ಗಳ ತಯಾರಿ ನಡೆಸುವ  ಸೌರಭ್ ಅಹುಜ  ಅವರ ಉದ್ದಿಮೆ ಬಹಳ ಕಷ್ಟ ಪಡಬೇಕಾಗಿ ಬಂದಿತ್ತಲ್ಲದೆ, ಹಲವರಿಗೆ ಲಂಚ ಕೂಡ ನೀಡಬೇಕಾಗಿ  ಬಂದಿತ್ತು. ಅವರು 900 ಡಾಲರ್ ನಷ್ಟು ಹಣವನ್ನು ತೆರಿಗೆ ಹಾಗೂ ಲಂಚದ ರೂಪದಲ್ಲಿ  600 ಡಾಲರ್ ವೆಚ್ಚದ 3ಡಿ ಪ್ರಿಂಟರ್ ಆಮದಿಗೆ ನೀಡಬೇಕಾಗಿ ಬಂದಿತ್ತು. ತಮ್ಮಂತಹ ಸಣ್ಣ ಉದ್ದಿಮೆಗಳಿಗೆ ಪರಿಸ್ಥಿತಿ ಸರಳೀಕರಣಗೊಂಡಿಲ್ಲ ಎಂದು ಅವರು ಹೇಳಿದ್ದರು. ಲೋಕಲ್  ಸರ್ಕಲ್ಸ್ ಎಂಬ ಸೋಶಿಯಲ್ ನೆಟ್ವರ್ಕಿಂಗ್ ವೇದಿಕೆ 2017ರಲ್ಲಿ ನಡೆಸಿದ ಸಮೀಕ್ಷೆ ಸುಮಾರು 30,000 ಸ್ಟಾರ್ಟ್ -ಅಪ್ ಗಳ ಅಭಿಪ್ರಾಯ ಸಂಗ್ರಹಿಸಿದಾಗ ತಿಳಿದು ಬಂದ ಮಾಹಿತಿಯಲ್ಲಿ  ಶೇ. 50ರಷ್ಟು ಸ್ಟಾರ್ಟ್-ಅಪ್ ಗಳು ಭ್ರಷ್ಟಾಚಾರ ಅಥವಾ ಅಧಿಕಾರಿ ಮಟ್ಟದಲ್ಲಿನ  ಸಮಸ್ಯೆಗಳನ್ನು ದೊಡ್ಡ ಅಡ್ಡಿಯೆಂದು ಅಂದುಕೊಂಡಿದ್ದರೆ ಶೇ  80 ಮಂದಿ ತಾವು ಸ್ಟಾರ್ಟ್-ಅಪ್ ಯೋಜನೆಯಿಂದ ಪ್ರಯೋಜನ ಪಡೆದಿಲ್ಲ ಎಂದಿದ್ದಾರೆ.

►ಈ ಯೋಜನೆಗಳು ದೇಶದ ಉದ್ಯೋಗ ಪರಿಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತೋರುತ್ತದೆ. ಬಿಸಿನೆಸ್ ಸ್ಟ್ಯಾಂಡರ್ಡ್ ನಲ್ಲಿ ಸೋರಿಕೆಯಾದ ಎನ್‍ಎಸ್‍ಎಸ್‍ಒ ವರದಿಯಲ್ಲಿ ತಿಳಿದು ಬಂದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಉದ್ಯೋಗ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 2011-12ರಲ್ಲಿ  ಗ್ರಾಮೀಣ ಯುವಕ, ಯುವತಿಯರಲ್ಲಿ ನಿರುದ್ಯೋಗ ಪ್ರಮಾಣ ಕ್ರಮವಾಗಿ ಶೇ 5 ಹಾಗೂ ಶೇ 4.8 ಆಗಿತ್ತು. 2017-18ರಲ್ಲಿ ಈ  ಸಂಖ್ಯೆ ಗ್ರಾಮೀಣ ಪುರುಷರು ಹಾಗೂ ಮಹಿಳೆಯರಲ್ಲಿ  ಶೇ 17.4 ಹಾಗೂ ಶೇ 13.6 ಆಗಿತ್ತು. ಅಂತೆಯೇ ನಗರ ಪ್ರದೇಶದ ಯುವ ಜನತೆಯಲ್ಲಿ ನಿರುದ್ಯೋಗ ಪ್ರಮಾಣ 2011-12ರಲ್ಲಿ  ಯುವಕರಲ್ಲಿ ಶೇ 8. ಹಾಗೂ ಯುವತಿಯರಲ್ಲಿ ಶೇ 13.1 ಆಗಿತ್ತು. 2017-18ರಲ್ಲಿ ಈ ಸಂಖ್ಯೆಗಳು  ಯುವಕರಲ್ಲಿ ಶೇ 18.7 ಆಗೂ ಯುವತಿಯರಲ್ಲಿ  ಶೇ 27.2ಗೆ ಏರಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News