ಉ.ಪ್ರದೇಶ: ಪೂರಕ ಪ್ರಣಾಳಿಕೆ ಹೊರತರಲು ಕಾಂಗ್ರೆಸ್ ನಿರ್ಧಾರ
ಲಕ್ನೊ, ಎ.9: ಭಾರತದ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಜ್ಯವಾಗಿರುವ ಉತ್ತರಪ್ರದೇಶದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ಗಮನ ಹರಿಸುವ ಉದ್ದೇಶದಿಂದ ಶೀಘ್ರವೇ ಪೂರಕ ಪ್ರಣಾಳಿಕೆಯನ್ನು ಹೊರತರಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಗುತ್ತಿಗೆ ಶಿಕ್ಷಕರಿಗೆ ಸಂಬಂಧಿಸಿದ ವಿಷಯ, ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಆರಂಭಿಸುವುದು, ರೈತರಿಗೆ, ತಾತ್ಕಾಲಿಕ ಸಿಬ್ಬಂದಿಗಳಿಗೆ , ಆಶಾ ಕಾರ್ಯಕರ್ತೆಯರಿಗೆ, ಅಡುಗೆ ಸಿಬ್ಬಂದಿಗಳಿಗೆ ನೆರವು, ಪೊಲೀಸ್ ನೇಮಕಾತಿ, ಮದ್ರಸಗಳ ಆಧುನೀಕರಣ ಮುಂತಾದ ವಿಷಯಗಳನ್ನು ರಾಜ್ಯ ಪ್ರಣಾಳಿಕೆ ಹೊಂದಿರುತ್ತದೆ.
ಉತ್ತರಪ್ರದೇಶಕ್ಕೆ ಮಾತ್ರ ಸಂಬಂಧಿಸಿದ ಕೆಲವು ವಿಷಯಗಳಿದ್ದು ಅವನ್ನು ರಾಷ್ಟ್ರೀಯ ಪ್ರಣಾಳಿಕೆಯಲ್ಲಿ ಸೇರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡ ಅಜಯ್ ಕುಮಾರ್ ಲಲ್ಲು ಅವರು ವಿವಿಧ ಕ್ಷೇತ್ರಗಳ ಮುಖಂಡರನ್ನು ಒಳಗೊಂಡ ನಿಯೋಗದ ಜೊತೆ ಪ್ರಿಯಾಂಕ ಗಾಂಧಿಯನ್ನು ಭೇಟಿಮಾಡಿ ಚರ್ಚಿಸಿದ ಪರಿಣಾಮ ಪೂರಕ ಪ್ರಣಾಳಿಕೆ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ತಿಳಿಸಿದೆ.