ಬಿಜೆಪಿ ಪ್ರಣಾಳಿಕೆ; ಅದೇ ಸುಳ್ಳಿನ ಕಂತೆ

Update: 2019-04-09 18:30 GMT

ಕಳೆದ ಐದು ವರ್ಷಗಳ ಕಾಲ ನಿಚ್ಚಳ ಬಹುಮತದೊಂದಿಗೆ ಈ ದೇಶದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿಗೆ ತನ್ನ ಪ್ರಣಾಳಿಕೆಯನ್ನು ಸರಿಯಾಗಿ ಜಾರಿಗೆ ತರಲು ಆಗಿಲ್ಲವಂತೆ, ಅದಕ್ಕಾಗಿ ಮತ್ತೆ ಐದು ವರ್ಷಗಳ ಕಾಲ ಅಧಿಕಾರ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದ್ದಾರೆ. ಸೋಮವಾರ ಅವರ ಭಾರತೀಯ ಜನತಾ ಪಕ್ಷ 'ಸಂಕಲ್ಪಪತ್ರ' ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕಳೆದ ಐದು ವರ್ಷಗಳಲ್ಲಿ ಜನತೆಗೆ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಲಾಗದೇ ಬರೀ ಬುರುಡೆ ಬಿಡುತ್ತ ಬಂದ ಬಿಜೆಪಿ ಈ ಪ್ರಣಾಳಿಕೆಗೆ 'ಸಂಕಲ್ಪಪತ್ರ' ಎನ್ನುವ ಬದಲು 'ಕ್ಷಮಾಯಾಚನೆ ಪತ್ರ' ಎಂದು ಕರೆದಿದ್ದರೆ ಸೂಕ್ತವಾಗುತ್ತಿತ್ತು ಎಂದು ವಿಪಕ್ಷ ಹೇಳಿರುವುದು ಸರಿಯಾಗಿದೆ. ಜನತೆಗೆ ನೀಡಿದ ಯಾವ ಭರವಸೆಯನ್ನ್ನೂ ಈಡೇರಿಸಲು ಸಾಧ್ಯವಾಗದಾಗ ಜನರ ಕ್ಷಮೆ ಕೇಳಿದರೆ ತಪ್ಪಿಲ್ಲ.

ಬಿಜೆಪಿಯ ಈ ಚುನಾವಣಾ ಪ್ರಣಾಳಿಕೆಯನ್ನು 'ಹೊಸ ಬಾಟಲಿಯಲ್ಲಿ ಹಳೆಯ ಮದ್ಯ' ಎಂದು ವ್ಯಾಖ್ಯಾನಿಸಿದರೆ ಅತಿಶಯೋಕ್ತಿಯೇನಲ್ಲ. ಕಳೆದ ಅಂದರೆ 2014ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಯಾವ್ಯಾವ ಭರವಸೆಯನ್ನು ನೀಡಿತ್ತು, ಆ ಭರವಸೆಗಳಲ್ಲಿ ಯಾವುದನ್ನು ಈಡೇರಿಸಲು ಸಾಧ್ಯವಾಗಿದೆ ಎಂಬ ಬಗ್ಗೆ ಪರಾಮರ್ಶೆ ಮಾಡಿ ಹೊಸ ಪ್ರಣಾಳಿಕೆ ಬಿಡುಗಡೆ ಮಾಡಬೇಕಾಗಿತ್ತು. ಕಳೆದ ಚುನಾವಣೆಯಲ್ಲಿ ರೈತರನ್ನು ಸಾಲದ ಬಲೆಯಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ರೈಲು ಬಿಟ್ಟಿತ್ತು. ವರ್ಷಕ್ಕೆ ಎರಡು ಕೋಟಿಯಂತೆ ಐದು ವರ್ಷಗಳಲ್ಲಿ ಹತ್ತು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರ ಇದರಲ್ಲಿ ಸಂಪೂರ್ಣ ವಿಫಲವಾಗಿದೆ. ಇದಕ್ಕಿಂತ ಘೋರ ಸಂಗತಿ ಅಂದರೆ ಕಳೆದ ಐವತ್ತು ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಹಿಂದೆಂದೂ ಇಷ್ಟು ಭಯಾನಕ ಸ್ವರೂಪ ತಾಳಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಪ್ರಧಾನಮಂತ್ರಿಗಳು ಪಕೋಡಾ ಮಾರಿ ಹೊಟ್ಟೆ ಹೊರೆಯಲು ಯುವಕರಿಗೆ ಒಣ ಉಪದೇಶ ನೀಡುತ್ತಾರೆ. ಆದರೆ ಪ್ರಣಾಳಿಕೆಯಲ್ಲಿ ಮಾತ್ರ ಪಕೋಡಾ ಪ್ರಸ್ತಾಪವಿಲ್ಲ. ಈಗ ಮತ್ತೆ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನ ಮಂತ್ರಿಗಳು ಜನರ ಕಿವಿಯ ಮೇಲೆ ಹೂ ಇಡುತ್ತಿದ್ದಾರೆ.

ಉಳಿದಂತೆ ರೈತರಿಗೆ ಬಿಜೆಪಿ ನೀಡಿದ ಭರವಸೆ ಬರೀ ಸುಳ್ಳಿನ ಕಂತೆ. ಸಾಲ ಮನ್ನಾದ ಬಗ್ಗೆ ಪ್ರಸ್ತಾಪವಿಲ್ಲ. ಸ್ವಾಮಿನಾಥನ್ ಆಯೋಗ ಜಾರಿಯ ಬಗ್ಗೆ ಅದು ಮೌನ ತಾಳಿದೆ. ರೈತಾಪಿ ವರ್ಗಕ್ಕೆ ಹಿಂದೆ ನೀಡಿದ ಯಾವ ಭರವಸೆಗಳನ್ನೂ ಬಿಜೆಪಿ ಈಡೇರಿಸಲಿಲ್ಲ. ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕಳೆದ ಎಂಟು ತಿಂಗಳುಗಳಿಂದ ಮಾಡಿದ ಕೆಲಸಕ್ಕೆ ಸಂಬಳ ಪಾವತಿ ಮಾಡಿಲ್ಲ. ಈಗ 60 ವರ್ಷ ದಾಟಿದ ರೈತರಿಗೆ ಪಿಂಚಣಿ ಬಗ್ಗೆ ಬುರುಡೆ ಬಿಡುತ್ತಿದೆ.

 ಜನರಿಗೆ ನೀಡಿರುವ ಭರವಸೆಗಳು ಒತ್ತಟ್ಟಿಗೆ ಇರಲಿ, ತನ್ನದೇ ಪಕ್ಷದ ಪರಿವಾರದ ಬಹುದಿನಗಳ ಬೇಡಿಕೆಯಾದ ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ರದ್ದು ಈ ಯಾವುದನ್ನೂ ಕಳೆದ ಐದು ವರ್ಷಗಳಲ್ಲಿ ಈಡೇರಿಸಲು ಸಾಧ್ಯವಾಗಲಿಲ್ಲ. ಹಿಂದೆಲ್ಲ ಬಿಜೆಪಿಗೆ ಕೇಂದ್ರದಲ್ಲಿ ಬಹುಮತ ಇಲ್ಲ, ನಿಚ್ಚಳ ಬಹುಮತ ಬಂದರೆ ಇವನ್ನೆಲ್ಲ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಹೇಳಿತ್ತು. ಆದರೆ ಕಳೆದ ಐದು ವರ್ಷಗಳ ಕಾಲ ಅದು ನಿಚ್ಚಳ ಬಹುಮತದಿಂದ ದೇಶವನ್ನು ಆಳಿತು. ಆದರೆ ಅಯೋಧ್ಯೆಯ ಮಂದಿರ ಏಕೆ ಕಟ್ಟಲಾಗಲಿಲ್ಲ? ಸಮಾನ ನಾಗರಿಕ ಸಂಹಿತೆ ಏಕೆ ಜಾರಿಗೆ ತರಲಾಗಲಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಕೊಡದೆ ಮತ್ತೆ ಅದೇ ಅಯೋಧ್ಯೆ ಮಂದಿರ, ಸಮಾನ ನಾಗರಿಕ ಸಂಹಿತೆ ಮಾತಾಡುವುದು ವೋಟಿಗಾಗಿ ಜನರನ್ನು ವಂಚಿಸುವ ಹಲಾಲುಕೋರತನವಲ್ಲದೆ ಬೇರೇನೂ ಅಲ್ಲ. ಈಗ ಇವುಗಳ ಜೊತೆಗೆ ಕೇರಳದ ಶಬರಿಮಲೆಯಲ್ಲಿ ಧಾರ್ಮಿಕ ಆಚರಣೆಯ ರಕ್ಷಣೆ ಹೆಸರಿನಲ್ಲಿ ಮಹಿಳೆಯರ ದೇವಾಲಯ ಪ್ರವೇಶದ ಹಕ್ಕನ್ನು ಅಪಹರಿಸುವ ಅಂಶ ಬಿಜೆಪಿ ಪ್ರಣಾಳಿಕೆಯಲ್ಲಿದೆ. ಇದೆಲ್ಲ ಜನ ವಂಚನೆಯ ಪ್ರಹಸನವಲ್ಲದೆ ಬೇರೇನೂ ಅಲ್ಲ.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೋಟು ಅಮಾನ್ಯೀಕರಣದಿಂದ ಜನ ಸಾಮಾನ್ಯರಿಗಾದ ತೊಂದರೆ, ಜಿಎಸ್‌ಟಿ ಪರಿಣಾಮ, ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಬೇಕಾಗಿತ್ತು. ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನು ಮೋದಿ ನೇತೃತ್ವದ ಬಿಜೆಪಿ ಸರಕಾರ ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಮೇಕ್ ಇನ್ ಇಂಡಿಯಾ ಘೋಷಣೆ ಅಪಹಾಸ್ಯಕ್ಕೀಡಾಗಿದೆ. ಬ್ಯಾಂಕಿಂಗ್ ವಲಯ ಪತನದ ಅಂಚಿಗೆ ಬಂದು ನಿಂತಿದೆ. ಕೃಷಿ ಬಿಕ್ಕಟ್ಟು ತೀವ್ರಗೊಂಡಿದೆ. ಜನಾಂಗೀಯ ದ್ವೇಷದ ಬೆಂಕಿಗೆ ಪ್ರಧಾನಿಯ ಪಕ್ಷದವರೇ ಪೆಟ್ರೋಲ್ ಹಾಕುತ್ತಿದ್ದಾರೆ. ದನ ರಕ್ಷಣೆ ಹೆಸರಿನಲ್ಲಿ ಅಮಾಯಕರ ಹತ್ಯೆಗಳು ನಡೆದಿವೆ. ಆದರೂ ನಮ್ಮ ಪ್ರಧಾನ ಮಂತ್ರಿಗಳು ಸಶಕ್ತ ಭಾರತದ ಮಾತನ್ನು ಆಡುತ್ತಿದ್ದಾರೆ. ಸಾರ್ವಜನಿಕ ಉದ್ಯಮ ರಂಗವನ್ನು ನಾಶ ಮಾಡಿ ಅಂಬಾನಿ ಅದಾನಿಗಳಂತಹ ಕಾರ್ಪೊರೇಟ್ ಬಂಡವಾಳಶಾಹಿಯನ್ನು ಬೆಳೆಸಲು ಹೊರಟವರಿಂದ ಸಶಕ್ತ ಭಾರತ ನಿರ್ಮಾಣ ಸಾಧ್ಯವಿಲ್ಲ.

ಬಿಜೆಪಿಯ ಈ ಚುನಾವಣಾ ಪ್ರಣಾಳಿಕೆ 2019ರ ಚುನಾವಣಾ ಪ್ರಣಾಳಿಕೆ ಎಂದು ಕರೆಯಲಾಗಿದ್ದರೂ ಇದು 2014 ರ ಚುನಾವಣಾ ಪ್ರಣಾಳಿಕೆಯನ್ನೇ ಇಸವಿಯನ್ನು ಬದಲಿಸಿ ಮುದ್ರಿಸಿ ಮತದಾರರ ಕಣ್ಣಿಗೆ ಮಣ್ಣೆರಚಿ 2019 ಪ್ರಣಾಳಿಕೆ ಎಂದು ನಂಬಿಸುವ ಹುನ್ನಾರವಲ್ಲದೇ ಬೇರೇನೂ ಅಲ್ಲ.

ಪ್ರಜಾಪ್ರಭುತ್ವದಲ್ಲಿ ಒಂದು ರಾಜಕೀಯ ಪಕ್ಷಕ್ಕೆ ಯಾವುದೋ ಒಂದು ಊರಿನಲ್ಲಿ ಮಂದಿರ ನಿರ್ಮಿಸುವುದು; ಒಂದು ಧರ್ಮದ ಆಚರಣೆಯ ಹೆಸರಿನಲ್ಲಿ ಮಹಿಳೆಯರ ಆರಾಧನಾ ಸ್ವಾತಂತ್ರ್ಯ ಹರಣ ಮಾಡುವುದು ಪ್ರಣಾಳಿಕೆಯ ಮುಖ್ಯ ಅಂಶವಾಗಬಾರದು. ಆದರೆ ಯಾವುದೇ ಆರ್ಥಿಕ, ಸಾಮಾಜಿಕ ಕಾರ್ಯಕ್ರಮವಿಲ್ಲದೆ ಗುಡಿ ಗುಂಡಾರದ ಹೆಸರಿನಲ್ಲಿ ಅಧಿಕಾರ ಕಬಳಿಸಲು ಹೊರಟಿರುವ ಪಕ್ಷಕ್ಕೆ ಬೇರೆ ಬಂಡವಾಳ ಇರುವುದಿಲ್ಲ

ನ್ಯಾಯವಾಗಿ ಚುನಾವಣಾ ಆಯೋಗ ಇಂಥ ಕೋಮುವಾದಿ ಪಕ್ಷಗಳ ಮಾನ್ಯತೆಯನ್ನು ರದ್ದುಗೊಳಿಸಬೇಕು. ಆದರೆ ನಮ್ಮ ಜನತಂತ್ರ ವ್ಯವಸ್ಥೆ ಎಷ್ಡು ದುರ್ಬಲವಾಗಿದೆ ಅಂದರೆ ಚುನಾವಣಾ ಆಯೋಗ ಹಲ್ಲು ಕಿತ್ತ ಹಾವಿನಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರೇ ಪ್ರಜಾಪ್ರಭುತ್ವ ರಕ್ಷಣೆಗೆ ಸಂಕಲ್ಪತೊಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News