ಬಡ್ಗೆ ವಿಚಾರಣೆಯ ಹಾದಿಯಲ್ಲಿ...

Update: 2019-04-10 06:57 GMT

ಭಾಗ-20

ಬಡ್ಗೆ ತನ್ನ ಸಾಕ್ಷದಲ್ಲಿ ದಿನಾಂಕ 20 ಜನವರಿಯಂದು ಬಿರ್ಲಾ ಗೃಹಕ್ಕೆ ಹೋಗುವವರೆಗೆ ಏನಾಯಿತೆಂಬುದನ್ನು ವಿವರವಾಗಿ ನ್ಯಾಯಾಲಯಕ್ಕೆ ತಿಳಿಸಿದ. ಹೆಸರುಗಳನ್ನು ಬದಲಾಯಿಸಿದ್ದು, ಸುಳ್ಳು ಹೆಸರುಗಳನ್ನಿಟ್ಟುಕೊಂಡದ್ದು, ಬೇರೆ ಪೋಷಾಕು ಧರಿಸಿದ್ದು, ಯಾರ್ಯಾರ ಕೈಯಲ್ಲಿ ಯಾವ ಯಾವ ಆಯುಧ ಇರಬೇಕೆಂದು ನಿರ್ಧರಿಸಿದ್ದು... ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ನಿವೇದಿಸಿದ.

‘‘ಹಿಂದೂ ಮಹಾಸಭಾ ಕಚೇರಿಯಿಂದ ನಾವು ಶಿವಾಜಿ ಪಾರ್ಕ್‌ನಲ್ಲಿ ವಾಸಿಸುತ್ತಿದ್ದ ಸಾವರ್ಕರ್‌ರ ಮನೆಗೆ ಹೋದೆವು. ಆಪ್ಟೆ ನನ್ನಿಂದ ಚೀಲವನ್ನು ಇಸಿದುಕೊಂಡು ನನಗಾಗಿ ಇಲ್ಲಿ ಕಾದಿರು ಎಂದು ಹೇಳಿ ಗೋಡ್ಸೆೆ ಜೊತೆಗೂಡಿ ಸಾವರ್ಕರ್‌ರ ಮನೆಯೊಳಗೆ ಹೋದ. ಐದು-ಹತ್ತು ನಿಮಿಷಗಳ ನಂತರ ಅವರು ಹೊರಗೆ ಬಂದರು. ‘ಮಾಲು’ ಇದ್ದ ಚೀಲವನ್ನೂ ಆಪ್ಟೆ ಹಿಡಿದುಕೊಂಡಿದ್ದ. ನಾವು ಮೂವರೂ ಹಿಂದೂ ಮಹಾಸಭೆ ಕಚೇರಿಗೆ ಹಿಂದಿರುಗಿದೆವು. ನಾನು ಶಂಕರನನ್ನು ಕರೆದು ನಮ್ಮೆಡನೆ ಬಾ ಎಂದು ಹೇಳಿದೆ. ಆಪ್ಟೆ ಒಂದು ಟ್ಯಾಕ್ಸಿ ಗೊತ್ತು ಮಾಡಿದ. ನಾವು ನಾಲ್ವರೂ ದೀಕ್ಷಿತ್ ಮಹಾರಾಜರ ಮನೆಯಿರುವ ಭುಲೇಶ್ವರಕ್ಕೆ ಹೋದೆವು. 1940-41ರಿಂದಲೂ ದೀಕ್ಷಿತ್ ಮಹಾರಾಜರನ್ನು ನಾನು ಬಲ್ಲೆ. ನಾವು ನಾಲ್ವರೂ ಅವರ ಮನೆಯೊಳಗೆ ಹೋದೆವು. ಆಗ 10:30 ಗಂಟೆ. ದೀಕ್ಷಿತ್ ಮಹಾರಾಜರು ಮಲಗಿದ್ದರು. ಶಂಕರನನ್ನು ಬಾಗಿಲೊಳಗಿನ ಪಡಸಾಲೆಯಲ್ಲಿ ಬಿಟ್ಟು ಮನೆಯೊಳಕ್ಕೆ ಹೋದೆವು. ದೀಕ್ಷಿತ್‌ರ ಸೇವಕರಿಗೆ ಆ ಚೀಲವನ್ನು ಕೊಟ್ಟು ಅದನ್ನು ಜತನವಾಗಿಟ್ಟುಕೊಂಡಿರಲು ಹೇಳಿದೆವು. ಮರುದಿನ ಬೆಳಗ್ಗೆ ಬಂದು ಅದನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿದೆವು...

***

(ಒಂದೆರಡು ದಿನಗಳ ನಂತರ ದೀಕ್ಷಿತ್‌ರ ಮನೆಗೆ ಬಂದು)

ತಮ್ಮ ಸೇವಕರಿಗೆ (ನಾವು ಕೊಟ್ಟಿದ್ದ) ಚೀಲವನ್ನು ತರಲು ಹೇಳಬೇಕೆಂದು ದೀಕ್ಷಿತ್ ಮಹಾರಾಜರನ್ನು ಕೇಳಿದೆವು. ಅವನು ಅದನ್ನು ಕೂಡಲೇ ತರಲಿಲ್ಲ. ಒಂದು ಗಂಟೆಯ ನಂತರ ತಂದ. ಚೀಲವನ್ನು ಅದರೊಳಗಿದ್ದ ಎಲ್ಲ ಮಾಲನ್ನು ತೋರಿಸಿದೆ. ಆಮೇಲೆ ಆಪ್ಟೆಗೆ ಕೊಟ್ಟೆ. ಅಪ್ಟೆ ಅದನ್ನು ಕರ್ಕರೆಗೆ ಕೊಟ್ಟ. ಫ್ರಾಂಟಿಯಾರ್ ಮೈಲ್ ಹಿಡಿದು ಮದನ್‌ಲಾಲ್‌ನೊಡನೆ ದಿಲ್ಲಿಗೆ ಹೋಗೆಂದು ಹೇಳಿದೆ. ಕರ್ಕರೆ ಮದನ್‌ಲಾಲ್‌ನಿಗೆ ಆ ಚೀಲದನ್ನು ಕೊಟ್ಟು ಅದನ್ನು ತನ್ನ ಹಾಸಿಗೆ ಸುರುಳಿಯಲ್ಲಿ ಅಡಗಿಸಿಡಬೇಕೆಂದು ತಿಳಿಸಿದ. ಕರ್ಕರೆ ಮತ್ತು ಮದನ್‌ಲಾಲ್ ದೀಕ್ಷಿತ್ ಮಹಾರಾಜರ ಮನೆಯಿಂದ ಹೊರಟರು.
‘‘ಗಾಂಧಿ, ನೆಹರೂ, ಸುಹ್ರವರ್ದಿ ಅವರನ್ನು ಮುಗಿಸಿಬಿಡಿ’’
ಉಳಿದ ನಾವು ದೀಕ್ಷಿತ್ ಮಹಾರಾಜರ ಕೊಠಡಿಯಲ್ಲಿ ಮಾತನಾಡತೊಡಗಿದೆವು. ನಾವೊಂದು ಮಹತ್ವದ ಕಾರ್ಯ ನಿಮಿತ್ತ ನಾವೆಲ್ಲ ದಿಲ್ಲಿಗೆ ಹೋಗುವುದಾಗಿ ಆಪ್ಟೆ, ದೀಕ್ಷಿತ್ ಮಹಾರಾಜರಿಗೆ ಹೇಳಿದ. ತಮಗೆ ಒಂದೆರಡು ರಿವಾಲ್ವರ್ ಕೊಡಬೇಕೆಂದು ಅವರನ್ನು ಕೇಳಿದ. ತನ್ನಲ್ಲಿ ಒಂದು ಚಿಕ್ಕ ರಿವಾಲ್ವರ್ ಇರುವುದಾಗಿಯೂ ಅದನ್ನು ಕೊಡಲಾಗುವುದಿಲ್ಲವೆಂದು ದೀಕ್ಷಿತ್ ಮಹಾರಾಜ ಹೇಳಿದರು. ಆಪ್ಟೆ - ಕನಿಷ್ಠ ಒಂದು ರಿವಾಲ್ವರ್ ಆದರೂ ದೊರಕಿಸಿಕೊಡಬೇಕೆಂದು ಒತ್ತಾಯ ಮಾಡಿದ. ದೀಕ್ಷಿತ್ ಮಹಾರಾಜರು ಒಂದು ರಿವಾಲ್ವರ್ ದೊರಕಿಸಲು ಪ್ರಯತ್ನಿಸುವುದಾಗಿ ಹೇಳಿದರು. ಆಗ ನಾವು ಎದ್ದುನಿಂತು ದೀಕ್ಷಿತ್ ಮಹಾರಾಜರ ಮನೆಯಿಂದ ನಡೆಯಲು ಅಂಗಳಕ್ಕೆ ಬಂದೆವು. ಆಗ ಆಪ್ಟೆ ನನ್ನನ್ನು ದಿಲ್ಲಿಗೆ ತಮ್ಮೆಡನೆ ಬರುತ್ತೀಯಾ ಎಂದು ಕೇಳಿದ. ನಾನೇಕೆ ಬರಬೇಕು? ಎಂದು ಕೇಳಿದೆ. ಆಗ ಆಪ್ಟೆ ಸಾವರ್ಕರ್‌ರು ಗಾಂಧೀಜಿ, ಜವಾಹರಲಾಲ್ ನೆಹರೂ, ಸುಹ್ರವರ್ದಿ ಅವರನ್ನು ಮುಗಿಸಲು ಆಪ್ಟೆ ಮತ್ತು ಗೋಡ್ಸೆಗೆ ವಹಿಸಿದ್ದಾರೆ. ನಾನು ಅವರೊಡನೆ ಹೋಗುವುದಾದರೆ ನನ್ನ ಖರ್ಚನ್ನು ಭರಿಸುವುದಾಗಿ ಆಪ್ಟೆ ಹೇಳಿದ.... ಜನವರಿ 17ನೇ ತಾರೀಕು ಬೆಳಗ್ಗೆ ವಿಕ್ಟೋರಿಯಾ ಟರ್ಮಿನಸ್ ನಿಲ್ದಾಣದಲ್ಲಿ ಅವರನ್ನು ಸಂಧಿಸಬೇಕೆಂದು ಆಪ್ಟೆ ಹೇಳಿದ.
ಆ ಸಂಜೆ ನಾನು ಮದನ್‌ಲಾಲ್‌ನನ್ನು ಹಿಂದೂ ಮಹಾಸಭೆಯ ಕಚೇರಿಯ ಮುಂದೆ ಕಂಡೆ. ಆ ಬೆಳಗ್ಗೆ ಗಾಡಿ ತಪ್ಪಿದ್ದರಿಂದ ಮೊದಲು ನಿರ್ಧರಿಸಿದಂತೆ ದಿಲ್ಲಿಗೆ ಹೋಗಲಾಗಲಿಲ್ಲ ಎಂದು ಹೇಳಿದ. ಕರ್ಕರೆ ರೈಲ್ವೆ ನಿಲ್ದಾಣದಲ್ಲಿ ಅವನಿಗಾಗಿ ಕಾಯುತ್ತಿದ್ದಾನೆಂದು..... ಇಂದು ರಾತ್ರಿ ಗಾಡಿಗೆ ದಿಲ್ಲಿಗೆ ತೆರಳುವರೆಂದು ಹೇಳಿದ.
17ನೇ ತಾರೀಕು ಬೆಳಗಿನ ಜಾವ 2:40ಕ್ಕೆ ನಾನು ಮುಂಬೈ ತಲುಪಿದೆ. ಅಂದು ಬೆಳಗ್ಗೆ ಆಪ್ಟೆ ಮತ್ತು ನಾಥೂರಾಮ್ ಗೋಡ್ಸೆ ಅವರನ್ನು ವಿಕ್ಟೋರಿಯಾ ಟರ್ಮಿನಸ್ ರೈಲ್ವೆ ಪ್ಲಾಟ್ ಫಾರಂ ಹೊರಗೆ ಸ್ವಲ್ಪ ದೂರದಲ್ಲಿ ಆಪ್ಟೆ ಮತ್ತು ಗೋಡ್ಸೆ ಅವರನ್ನು ಭೆಟ್ಟಿಯಾದೆ. ದಿಲ್ಲಿಗೆ ಹೊರಡುವ ಮುನ್ನ ಒಂದಿಷ್ಟು ಹಣಸಂಗ್ರಹ ಮಾಡಬೇಕೆಂದು ಆಪ್ಟೆ ಹೇಳಿದ. ಒಂದು ಟ್ಯಾಕ್ಸಿಯನ್ನು ಗೊತ್ತುಮಾಡಿಕೊಂಡು ಬಾಂಬೆ ಡೈಯಿಂಗ್ ವರ್ಕ್ಸ್ ಬಳಿಯಿದ್ದ ಗೌರ್ನಮೆಂಟ್ ಗೇಟ್ ರೋಡ್ ಕಡೆ ಹೋದೆವು. ನಾವು ಬಾಂಬೆ ಡೈಯಿಂಗ್ ವರ್ಕ್ಸ್ ಮೂಲಕ ಚರಣದಾಸ್ ಮೇಘಜಿ ಮಧುರದಾಸರನ್ನು ಕಂಡೆವು. ಅವರನ್ನು ನಾನು ಗೋಡ್ಸೆ ಮತ್ತು ಆಪ್ಟೆಗೆ ಪರಿಚಯಿಸಿದೆ.


 ಸಾವರ್ಕರ್‌ರ ಆಶೀರ್ವಾದ
ಅಲ್ಲಿಂದ ನಾವು ದಾದರ್‌ನ ಹಿಂದೂ ಮಹಾಸಭಾ ಕಚೇರಿಗೆ ಬಂದೆವು. ಅಲ್ಲಿ ಶಂಕರ ಕ್ರಿಸ್ಟಯ್ಯನನ್ನು ಕಾರಿನಲ್ಲಿ ಹತ್ತಿಸಿಕೊಂಡೆವು. ನಾವೆಲ್ಲ ಕಾರಿನಲ್ಲಿ ಕುಳಿತುಕೊಂಡ ಮೇಲೆ ಗೋಡ್ಸೆ ಸಾವರ್ಕರ್‌ರ ಕೊನೆಯ ಆಶೀರ್ವಾದ ಪಡೆಯಬೇಕೆಂದು ಸೂಚಿಸಿದ. ಆದ್ದರಿಂದ ಸಾವರ್ಕರ್‌ರ ಸದನಕ್ಕೆ ಹೋದೆವು. ಶಂಕರನಿಗೆ ಟ್ಯಾಕ್ಸಿಯಲ್ಲೇ ಕುಳಿತಿರುವಂತೆ ಹೇಳಿ ನಾವು ಮೂವರೂ ಸಾವರ್ಕರ್‌ರ ಮನೆಗೆ ಹೋದೆವು. ಮನೆಯೊಳಗೆ ನೆಲ ಅಂತಸ್ತಿನಲ್ಲಿ (ground floor) ಒಂದು ಕೊಠಡಿಯಲ್ಲಿ ನನ್ನನ್ನು ಕುಳ್ಳಿರಿಸಿ ಅವರಿಬ್ಬರು (ಗೋಡ್ಸೆ ಮತ್ತು ಆಪ್ಟೆ) ಮೊದಲಿನ ಮಹಡಿ ಮೇಲಕ್ಕೆ ಹೋದರು. ಐದು-ಹತ್ತು ನಿಮಿಷಗಳಲ್ಲಿ ಅವರು ಸಾವರ್ಕರ್‌ರೊಡನೆ ಹಿಂದಿರುಗಿದರು, ಅವರು ಗೋಡ್ಸೆಯನ್ನು ಉದ್ದೇಶಿಸಿ; ಯಶಸ್ವಿ ಹೊ ಯಾ(ಯಶಸ್ವಿಯಾಗಿ ಹಿಂದಿರುಗಿ ಬನ್ನಿ) ಎಂದರು. ನಾವು ಅಲ್ಲಿಂದ ಅದೇ ಟ್ಯಾಕ್ಸಿಯಲ್ಲಿ ರೂಯಿಯಾ ಕಾಲೇಜ್ ಕಡೆಗೆ ಹೊರಟೆವು. ದಾರಿಯಲ್ಲಿ ಆಪ್ಟೆ; ‘‘ತಾತ್ಯಾರಾವ್‌ಣಿ ಅಸೆ ಭವಿಷ್ಯ ಕೇಲೆ ಆಹೆ ಕಿ ಅಚಿ ಗಾಂಧೀಜಿ ಶಂಬರ್ ವರ್ಷ ಭರ್ಲಿ. ಅಚಿ ಕಾಹಿ ಸನ್ವಷ್ಯೆ ನಹಿ ಕಿ ಆಪ್ಲೆ ಕಾಮ್ ಯಶಸ್ವಿ ಹೋನಾರ್ ಎಂದು ಹೇಳಿದ. ‘‘ತಾತ್ಯಾರಾವ್(ಸಾವರ್ಕರ್) ಇಲ್ಲಿಗೆ ಗಾಂಧೀಜಿಯ ನೂರುವರ್ಷ ತುಂಬಿ ಬಂದಿದೆ ಎಂದು ಭವಿಷ್ಯ ನುಡಿದಿದ್ದಾರೆ.’’
(ಆಪ್ಟೆ ಈ ಮಾತುಗಳನ್ನು ಮರಾಠಿಯಲ್ಲಿ ಹೇಳಿದ್ದ; ‘‘ಗಾಂಧೀಜಿ ಶಂಬರ್ ವರ್ಷ ಭರ್ಲಿ’’ ನ್ಯಾಯಾಲಯಕ್ಕೆ ಮರಾಠಿ ಮಾತುಗಳು ಸರಿಯಾಗಿ ದಾಖಲಾಗಬೇಕೆಂದು ಆ ಮಾತುಗಳನ್ನು ರೋಮನ್ ಲಿಪಿಯಲ್ಲಿ ಇದ್ದಕ್ಕಿದ್ದ ಹಾಗೆ ಗೋಡ್ಸೆ ವಕೀಲ ಓಕ್ ಅವರ ಕೈಯಿಂದ ಮುಖ್ಯ ಪ್ರಾಸಿಕ್ಯೂಟರ್ ದಫ್ತರಿ ಅವರು ತದೇಕ ಗಮನವಿಟ್ಟು ನೋಡುತ್ತ ಬರೆಸಿದರು.)
***
‘‘ಜನವರಿ 19ರಂದು ಬೆಳಗ್ಗೆ 9:30ಕ್ಕೆ ದಿಲ್ಲಿ ತಲುಪಿದೆವು. ಒಂದು ಟಾಂಗಾದಲ್ಲಿ ಹಿಂದೂ ಮಹಾಸಭಾ ಕಚೇರಿಗೆ ಹೋದೆವು. ಅಲ್ಲಿ ಮದನಲಾಲ್ ಇನ್ನೊಬ್ಬನೊಡನೆ ಹಾಲ್‌ನಲ್ಲಿ ಕುಳಿತಿದ್ದ. ಮದನಲಾಲ್ ಅವನನ್ನು ನಾಥೂರಾಮ್ ಗೋಡ್ಸೆಯ ಸೋದರ ಗೋಪಾಲ ಗೋಡ್ಸೆ ಎಂದು ಪರಿಚಯಿಸಿದ. ಸ್ವಲ್ಪ ಹೊತ್ತಿನಲ್ಲಿಯೇ ಆಪ್ಟೆ, ಕರ್ಕರೆ ಮತ್ತು ಗೋಡ್ಸೆ ಅಲ್ಲಿಗೆ ಬಂದರು. ನಾವು (ಶಂಕರ್, ಮದನಲಾಲ್ ಮತ್ತು ನಾನು) ಆ ರಾತ್ರಿ ಅಲ್ಲಿಯೇ ಮಲಗಲು ಹೇಳಿ ಮರುದಿನ ಬೆಳಗ್ಗೆ ಅವರು ಮರಳಿ ಬರುವುದಾಗಿ ಹೇಳಿ ಹೊರಟುಹೋದರು.
ಜನವರಿ 20 ಬೆಳಗ್ಗೆ 8:30ಕ್ಕೆ ಆಪ್ಟೆ, ಕರ್ಕರೆ ಹಿಂದೂ ಮಹಾಸಭಾ ಕಚೇರಿಗೆ ಬಂದರು. ಸೌದೆ ಕೊಳ್ಳಲು ಮದನ್‌ಲಾಲ್‌ನಿಗೆ ಸ್ವಲ್ಪ ಹಣಕೊಟ್ಟು ಹೋದರು. ಅರ್ಧಗಂಟೆ ನಂತರ ಆಪ್ಟೆ ಹಿಂದಿರುಗಿ ಬಂದು ಶಂಕರ ಮತ್ತು ನಾನು ಅವರೊಡನೆ ಬಿರ್ಲಾ ಗೃಹಕ್ಕೆ ಬರಬೇಕೆಂದು ಕರೆದ. ನಾವು ಅವನೊಡನೆ ಬಂದು ಕಾರಿನಲ್ಲಿ ಹೋಗಿ ಬಿರ್ಲಾ ಗೃಹದ ಹೆಬ್ಬಾಗಿಲ ಮುಂದೆ ಇಳಿದೆವು. ನಾನು, ಆಪ್ಟೆ ಒಳಗೆ ಹೋಗಲು ಪ್ರಯತ್ನಿಸಿದಾಗ ಕಾವಲುಗಾರ ನಮ್ಮನ್ನು ತಡೆದ. ಆಪ್ಟೆ; ‘ನಾವು ಗಾಂಧೀಜಿಯ ಕಾರ್ಯದರ್ಶಿಯನ್ನು ನೋಡಲು ಬಂದಿದ್ದೇವೆ’ ಎಂದು ಹೇಳಿದ. ಆಗ ಕಾವಲುಗಾರ ನಮ್ಮ ಹೆಸರುಗಳನ್ನು, ಬಂದಿದ್ದ ಕಾರಣವನ್ನು ಒಂದು ಚೀಟಿಯಲ್ಲಿ ಬರೆದು ಕೊಡಲು ಹೇಳಿದ. ಆಪ್ಟೆ ಏನನ್ನೋ ಒಂದು ಚೀಟಿಯಲ್ಲಿ ಗೀಚಿ ಅವನ ಕೈಗೆ ಕೊಟ್ಟ. ಆ ಬಳಿಕ ತೆಗೆದುಕೊಂಡು ಕಾವಲುಗಾರ ಒಳಗೆ ಹೋದ. ಆಗ ಕಪ್ಪು ಸ್ಯೂಟ್ ಧರಿಸಿದ್ದ ಒಬ್ಬಾತ ಹೊರಗೆ ಬಂದ. ಆಪ್ಟೆ ಆ ವ್ಯಕ್ತಿಯನ್ನು ತೋರಿಸಿ ಆತನೇ ಸುಹ್ರವರ್ದಿ. ಪ್ರಾರ್ಥನಾ ಸಮಯದಲ್ಲಿ ಗಾಂಧೀಜಿಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ ಎಂದು ಪಿಸುಗುಟ್ಟಿದ.
ಅಷ್ಟು ಹೊತ್ತಿಗೆ ಕಾವಲುಗಾರ ಹಿಂದಿರುಗಿ ಬಂದ. ನಾನು, ಆಪ್ಟೆ ಬಿರ್ಲಾ ಗೃಹದ ಕಾಂಪೌಂಡಿನೊಳಗೆ ಹೋದೆವು. ಪ್ರಾರ್ಥನಾ ಸಭೆ ನಡೆಸುತ್ತಿದ್ದ ಹುಲ್ಲು ಮೈದಾನದ ಹಿಂಭಾಗಕ್ಕೆ ಹೋದೆವು. ಅಲ್ಲೊಂದು ಜಾಗ ತೋರಿಸಿ ಅಲ್ಲಿಯೇ ಗಾಂಧೀಜಿ ಮತ್ತು ಸುಹ್ರವರ್ದಿ ಕುಳಿತುಕೊಳ್ಳುವರೆಂದು ಹೇಳಿದ. ಆಪ್ಟೆ ಅಲ್ಲೊಂದು ಕಿಟಕಿಯನ್ನು (ವೆಂಟಿಲೇಟರ್) ತೋರಿಸಿದ. ಅದಕ್ಕೆ ಉಕ್ಕಿನ ಜಾಲರಿ ಬೆಸೆದಿತ್ತು. ಆ ಜಾಲರಿಯನ್ನು ಆಪ್ಟೆ ಅಳತೆ ಮಾಡಿದ. ಆ ಜಾಲಂಧ್ರದ ದೊಡ್ಡ ತೂತಿನ ಮೂಲಕ ಕೈ ತೂರಿಸಿ ರಿವಾಲ್ವರಿನಿಂದ ಗುಂಡು ಹಾರಿಸಬಹುದೆಂದೂ, ಕೈಬಾಂಬು ಎಸೆಯಬಹುದೆಂದೂ ಸಾಧ್ಯವಾದ ಮಟ್ಟಿಗೆ ಮೊದಲನೇ ಏಟಿನಲ್ಲಿಯೇ ಗಾಂಧೀಜಿ ಮತ್ತು ಸುಹ್ರವರ್ದಿಯನ್ನೂ ಮುಗಿಸಿಬಿಡಬೇಕೆಂದು ಹೇಳಿದ.’’
ಬಡ್ಗೆ ಮುಂದೆ ಸಾಕ್ಷದಲ್ಲಿ ದಿನಾಂಕ 20 ಜನವರಿಯಂದು ಬಿರ್ಲಾ ಗೃಹಕ್ಕೆ ಹೋಗುವವರೆಗೆ ಏನಾಯಿತೆಂಬುದನ್ನು ವಿವರವಾಗಿ ನ್ಯಾಯಾಲಯಕ್ಕೆ ತಿಳಿಸಿದ. ಹೆಸರುಗಳನ್ನು ಬದಲಾಯಿಸಿದ್ದು, ಸುಳ್ಳು ಹೆಸರುಗಳನ್ನಿಟ್ಟುಕೊಂಡದ್ದು, ಬೇರೆ ಪೋಷಾಕು ಧರಿಸಿದ್ದು, ಯಾರ್ಯಾರ ಕೈಯಲ್ಲಿ ಯಾವ ಯಾವ ಆಯುಧ ಇರಬೇಕೆಂದು ನಿರ್ಧರಿಸಿದ್ದು... ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ನಿವೇದಿಸಿದ. ಮೊದಲು ಮಾಡಿದ್ದ - ಬಡ್ಗೆ ಪ್ರಾರ್ಥನಾ ಸ್ಥಳದ ಹಿಂದಿದ್ದ ಕೊಠಡಿಯೊಳಗೆ ಹೋಗಿ ಕೈಬಾಂಬು ಎಸೆದು ವೆಂಟಿಲೇಟರ್ ಮೂಲಕ ಕೈತೂರಿಸಿ ರಿವಾಲ್ವರ್‌ನಿಂದ ಗಾಂಧೀಜಿಗೆ ಗುಂಡಿಕ್ಕುವುದು- ಎಂಬ ಯೋಜನೆಯ ಬದಲು ಕೊನೆಯ ಘಳಿಗೆಯಲ್ಲಿ ಬಡ್ಗೆ ಪ್ರಾರ್ಥನೆ ಮಾಡುವಾಗ ಸಭೆಯಲ್ಲಿ ಗಾಂಧೀಜಿಯ ಮುಂದೆ ನಿಂತೇ ಗುಂಡಿಕ್ಕುವುದಾಗಿ ಸೂಚಿಸಿದ. ಮದನಲಾಲ್ ಕಾಟನ್ -ಗನ್-ಸ್ಲಾಬ್ ಸ್ಫೋಟಿಸಿದ ಕೂಡಲೇ ಬಡ್ಗೆ ಗಾಂಧೀಜಿ ಎದೆಗೆ ಗುಂಡಿಕ್ಕಿದರೆ ಅವರಿಬ್ಬರೂ ಕೂಡಲೇ ಸಿಕ್ಕಿ ಬೀಳುವರೆಂದೂ ಆಪ್ಟೆ, ನಾಥೂರಾಮ್, ಕರ್ಕರೆ ಯಾರಿಗೂ ಕಾಣದೆ ಅಲ್ಲಿಂದ ತಪ್ಪಿಸಿಕೊಳ್ಳಬಹುದೆಂದು ಗಾಂಧೀ ಹತ್ಯೆ ಪ್ರಮುಖ ಪಿತೂರಿಗಾರರು ಸುಲಭವಾಗಿ ತಪ್ಪಿಸಿಕೊಳ್ಳಬಹುದೆಂದೇ (ಆಪ್ಟೆ, ಗೋಡ್ಸೆ) ಕೊನೆ ಘಳಿಗೆಯ ಈ ಬದಲಾವಣೆಗೆ ಸಮ್ಮತಿಸಿದರು. ಆದರೆ ಕರ್ಕರೆ ಪ್ರಾರ್ಥನಾ ಸಭೆಗೆ ಬರಲು ಇಪ್ಪತ್ತು ನಿಮಿಷ ವಿಳಂಬ ಮಾಡಿದ. ಇವರೆಲ್ಲರೂ ಬರುವುದರ ಒಳಗಾಗಿ ಆಗಲೇ ಪ್ರಾರ್ಥನಾ ಸಭೆ ಪ್ರಾರಂಭವಾಗಿತ್ತು. ಮುಂದೆ ಏನಾಯಿತೆಂಬುದನ್ನು ಬಡ್ಗೆ ಸಾಕ್ಷ ನುಡಿದ. ಮದನ್‌ಲಾಲ್‌ನನ್ನು ಪೋಲಿಸರು ಹಿಡಿದು ಕೊಂಡ ಕೂಡಲೇ ಬಡ್ಗೆ ಅಲ್ಲಿಂದ ಕಾಲ್ಕಿತ್ತ. ಹಿಂದೂ ಮಹಾಸಭಾ ಭವನಕ್ಕೆ ಓಡಿಹೋದ. ಈ ಎಲ್ಲ ಘಟನಾವಳಿಗಳನ್ನು ನಾವು ಈ ಹಿಂದೆ ಗಮನಿಸಿದ್ದೇವೆ.

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News

ಜಗದಗಲ
ಜಗ ದಗಲ