ಭಾರತದ ಲೋಕಸಭೆ ಮತ್ತು ಮುಸ್ಲಿಮರ ಪ್ರತಿನಿಧಿತ್ವ

Update: 2019-04-09 18:31 GMT

ಭಾಗ-3

ನಮ್ಮ ದೇಶದ ವಿವಿಧ ಲೋಕಸಭಾ ಕ್ಷೇತ್ರಗಳು ಹಂಚಿಕೆಯಾಗಿರುವ ಜಿಲ್ಲೆಗಳ ಪೈಕಿ ಶೇ. 30ಕ್ಕಿಂತ ಹೆಚ್ಚು ಮುಸ್ಲಿಮರ ಜನಸಂಖ್ಯೆ 46 ಜಿಲ್ಲೆಗಳನ್ನು ಗುರುತಿಸಲಾಗಿದೆ ಅವುಗಳ ವಿವರ ಹೀಗಿದೆ: (ಕೋಷ್ಟಕ ನೋಡಿ)

ಇದರ ಜೊತೆಗೆ, ಶೇ. 5-10 ಜನಸಂಖ್ಯೆ ಇರುವ 183 ಲೋಕಸಭಾ ಕ್ಷೇತ್ರಗಳಿವೆ ಎಂದು ಅಂದಾಜಿಸಲಾಗಿದ್ದು ಮುಸ್ಲಿಂ ಮತದಾರರು ಈ ಕ್ಷೇತ್ರಗಳ ಗೆಲುವಿನ ಮೇಲೆ ಪ್ರಭಾವ ಬೀರಬಲ್ಲರು. ಮೇಲಿನ ಅಂಕಿಅಂಶಗಳನ್ನು ಪರಿಶೀಲಿಸಿದರೆ ವಾಸ್ತವಗಳು ಬೇರೆಯೇ ಇವೆ. ಶೇ. 30ಕ್ಕಿಂತ ಹೆಚ್ಚು ಮುಸ್ಲಿಂ ಮತದಾರರಿರುವ ಕ್ಷೇತ್ರಗಳಲ್ಲೂ ಮುಸ್ಲಿಂ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಉತ್ತರ ಪ್ರದೇಶದ ಫಲಿತಾಂಶ ಇದಕ್ಕೆ ಸ್ಪಷ್ಟವಾದ ಉತ್ತರವನ್ನು ನೀಡಿದೆ. ಕೆಲವು ಅಧ್ಯಯನಗಳ ಪ್ರಕಾರ ಮುಸ್ಲಿಂ ಮತದಾರರು ಗಣನೀಯ ಪ್ರಮಾಣದಲ್ಲಿರುವ ಲೋಕಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಮತ್ತದರ ಮಿತ್ರಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಾರೆ. ಇಲ್ಲಿ ಮುಸ್ಲಿಂ ಮತದಾರರ ವೋಟುಗಳು ವಿವಿಧ ಸೆಕ್ಯುಲರ್ ಪಕ್ಷಗಳಿಗೆ ಹಂಚಿಕೆಯಾಗಿವೆ.
ಕರ್ನಾಟಕದ ಸ್ಥಿತಿಗತಿ:


ಕರ್ನಾಟಕ ರಾಜ್ಯದಿಂದ ಲೋಕಸಭೆಗೆ ಜನರಿಂದ ಆಯ್ಕೆಯಾಗಿ ಹೋದವರಲ್ಲಿ ದಿ. ಸಿ.ಕೆ.ಜಾಫರ್ ಷರೀಫ್‌ರವರನ್ನು ಮರೆಯುವಂತಿಲ್ಲ. ಸತತವಾಗಿ 5 ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ವಿವಿಧ ಮಂತ್ರಿಹುದ್ದೆಗಳನ್ನು ಪಡೆದಿದ್ದರೂ ಅವರು ಹೆಸರು ಮಾಡಿದ್ದು ರೈಲ್ವೇ ಮಂತ್ರಿಯಾಗಿ. ಒಮ್ಮೆ ಸೋತಕಾರಣಕ್ಕಾಗಿ ಮೂಲೆಗುಂಪಾದರು. ಇತರ ಸಮುದಾಯದವರು ಒಮ್ಮೆ ಗೆದ್ದು ಮತ್ತೊಮ್ಮೆ ಸೋತರೂ ಸಹ ಅವರಿಗೆ ಪ್ರಾಮುಖ್ಯತೆ ಕೊಡುವಂತಹ ರಾಜಕೀಯ ಪಕ್ಷಗಳು ಮುಸ್ಲಿಂ ರಾಜಕಾರಣಿಗಳ ಬಗ್ಗೆ ಹೊಂದಿರುವ ಧೋರಣೆ ಬಹಳ ವಿಚಿತ್ರವಾದದ್ದು. ಕರ್ನಾಟಕದಿಂದ ರಾಜ್ಯಸಭೆಗೆ ಮುಸ್ಲಿಂ ರಾಜಕಾರಣಿಗಳು ಹೆಚ್ಚಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ ಕಾರಣವೂ ಇದೆ, ಮುಸ್ಲಿಮರು ಚುನಾವಣೆಗೆ ನಿಂತರೆ ಗೆಲ್ಲಿಸಿಕೊಳ್ಳಲಾಗದ ಪಕ್ಷಗಳು ಪರೋಕ್ಷವಾಗಿ ಸಮಾಧಾನ ಪಡಿಸಲು ರಾಜ್ಯ ಸಭೆಗೆ ಆಯ್ಕೆಮಾಡಿ ಕಳಿಸುತ್ತಾರೆ. ಅಧಿಕಾರಕ್ಕೆ ಬಂದಾಗ ಒಂದೋ ಎರಡೋ ಮಂತ್ರಿ ಪದವಿಯೂ ಸಿಗುತ್ತದೆ. ನಮ್ಮ ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳು 30 ಜಿಲ್ಲೆಗಳಲ್ಲಿ ಹಂಚಿಕೆಯಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಮುಸ್ಲಿಮರ ಜನಸಂಖ್ಯೆಯ ಪ್ರಮಾಣ ಹೀಗಿವೆ: (ಕೋಷ್ಟಕ 2 ನೋಡಿ)
ರಾಜ್ಯದಲ್ಲಿ ಹರಡಿಕೊಂಡಿರುವ ಮುಸ್ಲಿಂ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರದಲ್ಲೂ ಅಷ್ಟೇ ಪ್ರಮಾಣದ ಮತದಾರರು ಇರುತ್ತಾರೆಂದು ಹೇಳಲು ಆಗುವುದಿಲ್ಲ. ಕಾರಣ ಜನ ಸಂಖ್ಯೆಯನ್ನು ಗಣತಿ ಮಾಡಿರುವುದು ಒಂದು ಭೌಗೋಳಿಕ ವ್ಯಾಪ್ತಿಯಲ್ಲಿ. ಅಂದರೆ ಜಿಲ್ಲಾವಾರು ಜನಂಖ್ಯೆಯನ್ನು ಗಣತಿಯ ಅಧಾರದ ಮೇಲೆ ಮಾಡಲಾಗುತ್ತದೆ. ಆದರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಜನ ಸಂಖ್ಯೆ ಮತ್ತು ಮೀಸಲಾತಿ ಕ್ಷೇತ್ರಗಳನ್ನು ಸೇರಿಕೊಂಡಂತೆ ಇರುವುದರಿಂದ ಭೌಗೋಳಿಕ ವ್ಯಾಪ್ತಿಯೂ ಬೇರೆಯಾಗುತ್ತದೆ. ಸಾಕಷ್ಟು ಬಾರಿ ಎರಡನ್ನೂ ಒಂದೇ ರೀತಿಯಲ್ಲಿ ಅರ್ಥೈಸುವ ಅಪಾಯವಿದೆ. ಉದಾಹರಣೆಗೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಬರುವುದರಿಂದ ಶೇ. 30-50 ರಷ್ಟಿರುವ ಮುಸ್ಲಿಂ ಮತದಾರರಿರುವ ವಿಧಾನ ಸಭಾ ಕ್ಷೇತ್ರಗಳು ಮೂರು ಲೋಕಸಭಾ ಕ್ಷೇತ್ರಗಳಿಗೂ ಹಂಚಿಕೆಯಾಗಿವೆ. ಇದರಿಂದಾಗಿ ಮುಸ್ಲಿಮರ ಮತಗಳು ಸಹ ವಿಂಗಡನೆಯಾಗಿ ಮತದಾರರ ಪ್ರಮಾಣ ಶೇ. 15-25ಕ್ಕೆ ಇಳಿಕೆಯಾಗಿದೆ. ಉದಾಹರಣೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮುಸ್ಲಿಂ ಮತದಾರರ ಸಂಖ್ಯೆಯನ್ನು ಶೇ. 16 ಎಂದು ಅಂದಾಜಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ 22, ಬೀದರ್ 19 ಧಾರವಾಡ 18 ಹಾವೇರಿ 15 ಮತ್ತು ಮೈಸೂರು 14 ಶೇಕಡಾ ಮತದಾರರಿದ್ದಾರೆಂದು ಅಂದಾಜಿಸಬಹುದು.

ಮುಂದುವರಿಯುವುದು....

Writer - ಎಸ್. ಬಾಬುಖಾನ್

contributor

Editor - ಎಸ್. ಬಾಬುಖಾನ್

contributor

Similar News

ಜಗದಗಲ
ಜಗ ದಗಲ