ಜಲಿಯನ್‌ವಾಲಾಬಾಗ್ ಹತ್ಯಾಕಾಂಡ: ಬ್ರಿಟನ್ ಪ್ರಧಾನಿಯಿಂದ ತೀವ್ರ ವಿಷಾದ

Update: 2019-04-11 03:50 GMT

ಲಂಡನ್ : 1919ರಲ್ಲಿ ನಡೆದ ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚನೆಗೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಥೆರೇಸಾಮೇ, ಬುಧವಾರ ಈ ಘಟನೆಯ ಬಗ್ಗೆ ಸರ್ಕಾರ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಪುನರುಚ್ಚರಿಸಿದ್ದಾರೆ. 

ಆದರೆ ಈ ಬಗ್ಗೆ ಬ್ರಿಟನ್ ಪ್ರಧಾನಿ ಕ್ಷಮೆ ಯಾಚಿಸಿಲ್ಲ. ಈ ಘಟನೆ ಇತಿಹಾಸದಲ್ಲಿ "ಭಯಾನಕ ಮತ್ತು ನಾಚಿಕೆಗೇಡಿನ ಘಟನೆ" ಎಂದು ಬಣ್ಣಿಸಿದ್ದಾರೆ.

ಸಾಮಾನ್ಯವಾಗಿ ದೇಶದ ಪರವಾಗಿ ಪ್ರಧಾನಿ ಕ್ಷಮೆ ಯಾಚಿಸುತ್ತಾರೆ. ಆದರೆ ವಿದೇಶಾಂಗ ಸಚಿವಾಲಯದ ಸಚಿವ ಮಾರ್ಕ್ ಫೀಲ್ಡ್, ಕ್ಷಮೆಯಾಚನೆಗೆ ಪಟ್ಟು ಹಿಡಿದಿರುವ ಸಂಸದರನ್ನು ಉದ್ದೇಶಿಸಿ ಮಾತನಾಡಿ, "ಕ್ಷಮೆ ಯಾಚಿಸುವುದು ನಾನಲ್ಲ; ಆದರೆ ಈ ಬಗ್ಗೆ ಪ್ರಕ್ರಿಯೆ ಚಾಲನೆಯಲ್ಲಿದೆ" ಎಂದು ಹೇಳಿದರು.

ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರಧಾನಿ ಪ್ರಶ್ನೆಗಳ ವೇಳೆ ಸಂಕ್ಷಿಪ್ತ ಉತ್ತರ ನೀಡಿದ ಥೆರೇಸಾ, "1919ರಲ್ಲಿ ನಡೆದ ಜಲಿಯನ್‌ವಾಲಾಬಾಗ್ ದುರಂತ ಬ್ರಿಟಿಷ್ - ಭಾರತದ ಇತಿಹಾಸದಲ್ಲೇ ಅತ್ಯಂತ ನಾಚಿಕೆಗೇಡು ಎನಿಸುವ ಗಾಯದ ಗುರುತು. 1997ರಲ್ಲಿ ಜಲಿಯನ್‌ವಾಲಾಬಾಗ್‌ಗೆ ಭೇಟಿ ನೀಡುವ ಮುನ್ನ ರಾಣಿ, ಭಾರತದ ಜತೆಗಿನ ಹಿಂದಿನ ಇತಿಹಾಸದಲ್ಲಿ ಇದು ಬಹುವಾಗಿ ಕಾಡುವ ಘಟನೆ ಎಂದು ಬಣ್ಣಿಸಿದ್ದರು" ಎಂದು ಸ್ಪಷ್ಟಪಡಿಸಿದರು.

"ನಡೆದ ಘಟನೆ ಬಗ್ಗೆ ಮತ್ತು ಆಗಿರುವ ಸಾವು ನೋವಿನ ಬಗ್ಗೆ ತೀವ್ರ ವಿಷಾದವಿದೆ. ಇಂದು ಭಾರತ- ಬ್ರಿಟನ್ ನಡುವೆ ಸಹಭಾಗಿತ್ವ, ಪಾಲುದಾರಿಕೆ, ಸಮೃದ್ಧಿ ಮತ್ತು ಭದ್ರತೆಯ ಸಂಬಂಧ ಏರ್ಪಟ್ಟಿರುವುದಕ್ಕೆ ಅತೀವ ಸಂತಸವಿದೆ" ಎಂದು ಹೇಳಿದರು.

ಭಾರತೀಯ ಸಮುದಾಯ ಬ್ರಿಟನ್‌ಗೆ ಅದ್ಭುತ ಕೊಡುಗೆ ನೀಡಿದೆ. ಈ ಅಧಿವೇಶನದ ವೇಳೆ ಈ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಹೇಳಿದರು. ಆದರೆ ಕಾರ್ಮಿಕ ಮುಖಂಡ ಜೆರೆಮಿ ಕಾರ್ಬಿಯನ್ ಘಟನೆಗೆ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News