ಗಡಿಪಾರು ಮಾಡಿದರೆ ನನ್ನನ್ನು ‘ಬಲಿಪಶು’ ಮಾಡುತ್ತಾರೆ: ಮಲ್ಯ

Update: 2019-04-11 17:16 GMT

ಲಂಡನ್, ಎ. 11: ಭಾರತಕ್ಕೆ ಗಡಿಪಾರು ಮಾಡಿದರೆ ನನ್ನನ್ನು ‘ಬಲಿಪಶು’ ಮಾಡಲಾಗುವುದು ಎಂಬುದಾಗಿ ಉದ್ಯಮಿ ವಿಜಯ್ ಮಲ್ಯ ಹೇಳಿರುವುದು ವರದಿಯಾಗಿದೆ.
ಬ್ರಿಟನ್ ಗೃಹ ಕಾರ್ಯದರ್ಶಿ ಫೆಬ್ರವರಿ 4ರಂದು ಹೊರಡಿಸಿದ ಗಡಿಪಾರು ಆದೇಶವನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅನುಮತಿ ಕೋರಿ ಲಂಡನ್ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಮಲ್ಯ ಈ ಕಾರಣ ಹಾಗೂ ಇತರ ಕಾರಣಗಳನ್ನುನೀಡಿದ್ದರು.

ಆದರೆ ಹೈಕೋರ್ಟ್ ನ್ಯಾಯಾಧೀಶ ವಿಲಿಯಮ್ ಡೇವಿಸ್ ಈ ಎಲ್ಲ ಕಾರಣಗಳನ್ನು ತಿರಸ್ಕರಿಸಿದ್ದಾರೆ. ಹಾಗಾಗಿ, ಈಗ ವಿಜಯ್ ಮಲ್ಯರ ಮುಂದೆ ಸೀಮಿತ ಅವಕಾಶಗಳು ಮಾತ್ರ ಇವೆ. ಎಪ್ರಿಲ್ 5ರಂದು ನೀಡಿದ ಐದು ಪುಟಗಳ ತೀರ್ಪಿನಲ್ಲಿ, ನ್ಯಾಯಾಧೀಶರು ಮೇಲ್ಮನವಿ ಸಲ್ಲಿಸಲು ಮಲ್ಯಗೆ ಅನುಮತಿ ನಿರಾಕರಿಸಿದ್ದಾರೆ.
ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆ ಎಮ್ಮಾ ಆರ್ಬತ್ನಾಟ್ ಕಳೆದ ವರ್ಷದ ಡಿಸೆಂಬರ್ನಲ್ಲಿ ಆದೇಶವೊಂದನ್ನು ನೀಡಿ, ವಿಜಯ ಮಲ್ಯ ಗಡಿಪಾರಿಗೆ ಯಾವುದೇ ತಡೆ ಹೇರಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಲು ಮಲ್ಯ ಹಲವು ಕಾರಣಗಳನ್ನು ನೀಡಿದ್ದರು.

ಭಾರತ-ಬ್ರಿಟನ್ ಗಡಿಪಾರು ಒಪ್ಪಂದದ ಬಾಧ್ಯತೆಗಳನ್ನು ಭಾರತ ಪೂರೈಸುವುದಿಲ್ಲ ಎನ್ನುವುದು ಈ ಪೈಕಿ ಒಂದು ಕಾರಣವಾಗಿತ್ತು. ಆದರೆ ಈ ಎಲ್ಲ ಕಾರಣಗಳನ್ನು ಹೈಕೋರ್ಟ್ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.

ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಕೋರಿ ಅರ್ಜಿ ಸಲ್ಲಿಸಲು ಮಲ್ಯಗೆ ಶುಕ್ರವಾರದವರೆಗೆ ಸಮಯಾವಕಾಶವಿದೆ. ಅರ್ಜಿ ಸಲ್ಲಿಸಿದರೆ, ಹೈಕೋರ್ಟ್ ನ್ಯಾಯಾಧೀಶರೊಬ್ಬರು ವಿಚಾರಣೆ ನಡೆಸುತ್ತಾರೆ. ಆದರೆ, ಗಡಿಪಾರನ್ನು ವಿರೋಧಿಸಲು ಮಲ್ಯರಕಾನೂನು ಅವಕಾಶಗಳು ಕಡಿಮೆಯಾಗಿವೆ ಎಂಬುದಾಗಿ ಪರಿಣತರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News