ಸ್ವೀಡನ್ ನಾದ್ಯಂತ ‘ವಿಮಾನದಲ್ಲಿ-ಹೋಗಲಾರೆ’ ಚಳವಳಿ!: ಕಾರಣವೇನು ಗೊತ್ತಾ?

Update: 2019-04-11 17:34 GMT

ಸ್ಟಾಕ್ಹೋಮ್ (ಸ್ವೀಡನ್), ಎ. 11: ವರ್ಷದ ಹೆಚ್ಚಿನ ಅವಧಿಯಲ್ಲಿ ತೀವ್ರ ಚಳಿಯಿಂದ ಆವೃತವಾಗಿರುವ ಸ್ವೀಡನ್ನ ಜನರು ಬೆಚ್ಚಗಿನ ವಾತಾವರಣವನ್ನು ಅರಸಿ ಹೊರಗೆ ಹೋಗುವುದು ದಶಕಗಳಿಂದಲೂ ನಡೆದು ಬಂದ ಪದ್ಧತಿ. ಹೀಗೆ ಹೊರಗೆಹೋಗುವಾಗ ಅವರು ಹೆಚ್ಚಾಗಿ ವಿಮಾನಗಳನ್ನೇ ಬಳಸುತ್ತಾರೆ. ಆದರೆ, ವಿಮಾನಗಳ ಹಾರಾಟವು ಹವಾಮಾನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಅಲ್ಲಿನ ಜನರು ಈಗ ತಮ್ಮ ಪ್ರಯಾಣ ಶೈಲಿಯನ್ನೇ ಬದಲಿಸಿದ್ದಾರೆ.

‘ಫ್ಲೈಟ್ಶೇಮ್’ ಎನ್ನುವ ಪದ ಅಲ್ಲೀಗ ಎಲ್ಲರ ಬಾಯಲ್ಲಿ ಹರಿದಾಡುತ್ತಿದೆ. ಅಂದರೆ, ವಿಮಾನ ಹಾರಾಟವು ಪರಿಸರದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಕ್ಕಾಗಿ ತಪ್ಪಿತಸ್ಥ ಭಾವನೆಯನ್ನು ಹೊಂದುವುದು. ಈಗ ಸ್ವೀಡನ್ನ ಹೆಚ್ಚೆಚ್ಚು ಯುವಜನರು ತಮ್ಮಆತ್ಮಸಾಕ್ಷಿಯನ್ನು ಉಳಿಸಿಕೊಳ್ಳುವುದಕ್ಕಾಗಿ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

‘ವಿಮಾನದ ಬದಲು ರೈಲಿನಲ್ಲಿ ಹೋಗುವ’ ಚಳವಳಿಯ ನೇತೃತ್ವವನ್ನು ವಹಿಸಿದವರು ಸ್ವೀಡನ್ನ 16 ವರ್ಷದ ವಿದ್ಯಾರ್ಥಿನಿ ಗ್ರೆಟಾ ತನ್ರ್ಬ್. ಅವರು ಡಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಶೃಂಗಸಮ್ಮೇಳನ ಮತ್ತು ಪೋಲ್ಯಾಂಡ್ನಕ್ಯಾಟೊವಿಸ್ನಲ್ಲಿ ನಡೆದ ಪರಿಸರ ಶೃಂಗ ಸಮ್ಮೇಳನಗಳಿಗೆ ವಿಮಾನದಲ್ಲಿ ಪ್ರಯಾಣಿಸಲು ನಿರಾಕರಿಸಿ ರೈಲಿನಲ್ಲೇ ಹೋದರು.
 
ವಿಮಾನ ಹೊಗೆ 61 ಶೇ. ಅಧಿಕ

ಸ್ವೀಡನ್‌ ನ ಅಂತರ್ರಾಷ್ಟ್ರೀಯ ವಿಮಾನ ಯಾನಗಳಿಂದ ಹೊರಸೂಸುವ ಹೊಗೆಯು 1990ರ ದಿನಗಳಿಗೆ ಹೋಲಿಸಿದರೆ ಇಂದು 61 ಶೇಕಡದಷ್ಟು ಹೆಚ್ಚಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

‘ಫ್ಲೈಟ್ಶೇಮ್’ ಅಭಿಯಾನದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ವಿದೇಶಗಳಿಗೆ ಕಲಿಯಲು ಹೋಗುವ ಅವಕಾಶಗಳನ್ನೇ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News