ಪ್ರಥಮ ಹಂತದ ಮತದಾನ: ಹಲವೆಡೆ ಮತಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆ

Update: 2019-04-11 17:56 GMT

  ಹೊಸದಿಲ್ಲಿ,ಎ.11: 17ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ದೇಶಾದ್ಯಂತ 91 ಕ್ಷೇತ್ರಗಳಲ್ಲಿ ನಡೆದಿರುವಂತೆಯೇ, ಹಲವೆಡೆ ಮತ ಪಟ್ಟಿಯಿಂದ ಮತದಾರರ ಹೆಸರು ನಾಪತ್ತೆಯಾಗಿರುವ ಅಥವಾ ತೆಗೆದುಹಾಕಲಾಗಿರುವ ಪ್ರಕರಣಗಳು ವರದಿಯಾಗಿದೆ. ಅಭೂತಪೂರ್ವವಾದ ಪ್ರಮಾಣದಲ್ಲಿ ‘ಮತಗಳನ್ನು ಅಳಿಸಿಹಾಕಲಾಗಿದೆ’ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಲವು ಬಾರಿ ಟ್ವೀಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಅಪೊಲೋ ಆಸ್ಪತ್ರೆ ಸಮೂಹದ ಉಪಾಧ್ಯಕ್ಷೆ ಶೋಭನಾ ಕಾಮಿನೇನಿ ಅವರ ಹೆಸರು ಮತದಾರಪಟ್ಟಿಯಿಂದ ನಾಪತ್ತೆಯಾಗಿದೆ. ತಾನು ಹೈದರಾಬಾದ್‌ನಲ್ಲಿರುವ ಮತಗಟ್ಟೆಗೆ ಮತದಾನಕ್ಕೆ ತೆರಳಿದಾಗ, ತನ್ನ ಹೆಸರನ್ನು ಮತದಾರಪಟ್ಟಿಯಿಂದ ತೆಗೆದುಹಾಕಲಾಗಿದೆಯೆಂದು ಚುನಾವಣಾ ಸಿಬ್ಬಂದಿ ತನಗೆ ತಿಳಿಸಿದ್ದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ‘‘ಭಾರತೀಯ ಪೌರಳಾಗಿ ಇದು ನನ್ನ ಬದುಕಿನ ಅತ್ಯಂತ ಕೆಟ್ಟ ದಿನವಾಗಿದೆ ’’ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ. ಶೋಭನಾ ಕಾಮಿನೇನಿ, ಅಪೋಲೊ ಆಸ್ಪತ್ರೆ ಸಮೂಹದ ಅಧ್ಯಕ್ಷ ಹಾಗೂ ಚೆವೆಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಸಿ.ರೆಡ್ಡಿ ಅವರ ಪುತ್ರಿ.

  ಕಳೆದ ಡಿಸೆಂಬರ್‌ನಲ್ಲಿ ನಡೆದ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಾನು ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾಗಿಯೂ ಆಕೆ ತಿಳಿಸಿದ್ದಾರೆ.

 ಹೈದರಾಬಾದ್‌ನ ಇನ್ನೋರ್ವ ಮತದಾರ ಅತುಲ್ ಜೈನ್‌ ಎಂಬವರು ಕೂಡಾ, ತನ್ನ ಕುಟುಂಬದ ಹಲವಾರು ಸದಸ್ಯರ ಹೆಸರುಗಳು ಮತದಾರ ಪಟ್ಟಿಯಿಂದ ಕಾಣೆಯಾಗಿರುವುದಾಗಿ ಆರೋಪಿಸಿದ್ದಾರೆ. ತಮ್ಮ ಕುಟುಂಬ ಕಳೆದ ತೆಲಂಗಾಣ ವಿಧಾನ ಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ್ದಾಗಿ ಅವರು ಟ್ವೀಟ್ ಮಾಡಿದ್ದಾರೆ. ಬಯೋಕೊನ್ ಕಂಪೆನಿಯ ಮುಖ್ಯಸ್ಥೆಕಿರಣ್ ಮಝಂದಾರ್ ಶಾ ಅವರ ತಾಯಿ ಕೂಡಾ ಮತದಾನದಿಂದ ವಂಚಿತರಾಗಿದ್ದಾರೆ. ತನ್ನ ತಾಯಿಯವರ ಹೆಸರನ್ನು ಕುಂಟು ನೆಪಹೇಳಿ, ಮತಪಟ್ಟಿಯಿಂದ ತೆಗೆದುಹಾಕಲಾಗಿದೆಯೆಂದು ಕಿರಣ್ ಮಝುಂದಾರ್ ಟ್ವೀಟ್ ಮಾಡಿದ್ದಾರೆ.

  ಅದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೇಶಾದ್ಯಂತ ಅಭೂತಪೂರ್ವ ಪ್ರಮಾಣದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿರುವ ಬಗ್ಗೆ ವರದಿಗಳು ಹರಿದುಬರುತ್ತಿವೆ ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News