ಜಲಿಯನ್ ವಾಲಾಬಾಗ್ ಹತ್ಯಾಕಾಂಡ: ಬ್ರಿಟನ್ ಕ್ಷಮೆಯಾಚನೆಗೆ ಒತ್ತಾಯಿಸುವ ಮುನ್ನ....

Update: 2019-04-12 04:16 GMT

ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ನೂರು ತುಂಬಿದೆ. ಭಾರತದ ಸ್ವಾತಂತ್ರ ಹೋರಾಟಕ್ಕೆ ಮಹತ್ತರ ತಿರುವು ನೀಡಿದ ಬರ್ಬರ ಹಿಂಸಾಚಾರ ಜಲಿಯನ್ ವಾಲಾಬಾಗ್‌ನಲ್ಲಿ ನಡೆಯಿತು. ಈ ಹತ್ಯಾಕಾಂಡ ಭಾರತದಲ್ಲಿ ಬ್ರಿಟಿಷರು ಎಸಗುತ್ತಿದ್ದ ಕ್ರೌರ್ಯವನ್ನು ವಿಶ್ವ ಮಟ್ಟಕ್ಕೆ ತಲುಪಿಸಿತು. ಈ ಹತ್ಯಾಕಾಂಡದ ಪರಿಣಾಮವಾಗಿ ಸ್ವಾತಂತ್ರ ಹೋರಾಟ ಚಳವಳಿಯಲ್ಲಿ ಹಲವು ಕ್ರಾಂತಿಕಾರಿಗಳು ಹುಟ್ಟಿದರು. ಭಗತ್ ಸಿಂಗ್‌ನಂತಹ ಯುವ ನಾಯಕರು ಬ್ರಿಟಿಷರ ವಿರುದ್ಧ ತಿರುಗಿ ನಿಂತು ಹುತಾತ್ಮರಾದರು. ಬ್ರಿಟಿಷರು ಭಾರತ ಬಿಟ್ಟು ತೊಲಗಿ ಹಲವು ದಶಕಗಳು ಸಂದಿವೆಯಾದರೂ ಈ ಕೃತ್ಯಕ್ಕಾಗಿ ಅವರು ಸದಾ ತಲೆತಗ್ಗಿಸಲೇ ಬೇಕಾದಂತಹ ಸನ್ನಿವೇಶ ನಿರ್ಮಾಣವಾಯಿತು. ಘಟನೆಗೆ ನೂರು ವರ್ಷ ಸಂದಿರುವ ಈ ಸಂದರ್ಭದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಬ್ರಿಟಿಷ್ ಸಂಸತ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಮತ್ತೆ ಸದ್ದು ಮಾಡಿದೆ. ಈ ಭೀಕರ ಘಟನೆಗಾಗಿ ಕ್ಷಮೆಯಾಚಿಸಬೇಕು ಎಂದು ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಅವರು ಒತ್ತಾಯಿಸಿದ್ದರು. ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ತೆರೇಸಾ ಮೇ ‘‘ಘಟನೆ ಅತ್ಯಂತ ವಿಷಾದಕರ’ ಎಂದು ಹೇಳಿದರು.

‘‘1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಬ್ರಿಟಿಷ್ ಭಾರತದ ಇತಿಹಾಸದಲ್ಲೇ ನಾಚಿಕೆಗೇಡಿನ ಗಾಯದ ಗುರುತಾಗಿದೆ. ಭಾರತದೊಂದಿಗಿನ ನಮ್ಮ ಗತ ಇತಿಹಾಸದ ವಿಷಾದದಾಯಕವಾದ ಉದಾಹರಣೆಯಾಗಿದೆ’’ ಎಂದು ಅವರು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಈ ಭೀಕರ ನರಮೇಧಕ್ಕಾಗಿ ಕ್ಷಮೆಯಾಚಿಸುವ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಿಲ್ಲ. ಜಲಿಯನ್ ವಾಲಾ ಬಾಗ್‌ನ ಅಂದಿನ ದುರಂತಕ್ಕೆ ಇಂದಿನ ಬ್ರಿಟನ್‌ನನ್ನು ನಾವು ಹೊಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಅಂದಿನ ಬ್ರಿಟನ್‌ನನ್ನು ಪ್ರತಿನಿಧಿಸಿ, ದುರಂತಕ್ಕಾಗಿ ಕ್ಷಮೆಯಾಚಿಸುವ ಹೊಣೆಗಾರಿಕೆಯನ್ನಂತೂ ಬ್ರಿಟನ್ ಹೊಂದಿದೆ. ಯಾಕೆಂದರೆ ಇಂದು ಬ್ರಿಟನ್ ವಿಶ್ವದಲ್ಲಿ ಶ್ರೀಮಂತ ರಾಷ್ಟ್ರವಾಗಿ ಕಂಗೊಳಿಸುತ್ತಿದ್ದರೆ, ಅದರ ಹಿಂದೆ ಭಾರತವನ್ನು ಶೋಷಿಸಿ, ಇಲ್ಲಿನ ಸಂಪತ್ತನ್ನು ದೋಚಿದ ಕ್ರೌರ್ಯದ ನೆರಳಿದೆ. ಆದುದರಿಂದ ತಾನು ಭಾರತದಲ್ಲಿ ಎಸಗಿದ ಕ್ರೌರ್ಯಗಳಿಗಾಗಿ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಿದ್ದರೆ, ಯುದ್ಧ ಮತ್ತು ಕ್ರೌರ್ಯದ ದಳ್ಳುರಿಯಿಂದ ನರಳುತ್ತಿರುವ ಜಾಗತಿಕ ವಿದ್ಯಮಾನಗಳಿಗೆ ಒಂದು ಆಹ್ಲಾದಕರ ಸಂದೇಶ ನೀಡಿದಂತಾಗುತ್ತಿತ್ತು. ಆದರೆ ತೆರೇಸಾ ಅವರ ವಿಷಾದನೀಯ ಹೇಳಿಕೆಯಿಂದಲೇ ವಿಶ್ವ ತೃಪ್ತಿ ಪಡಬೇಕಾಗಿದೆ. ಜಲಿಯನ್ ವಾಲಾಬಾಗ್ ದುರಂತಕ್ಕಾಗಿ ಬ್ರಿಟನ್ ಕ್ಷಮೆ ಯಾಚಿಸಬೇಕು ಎಂದು ಭಾರತವೂ ಹಲವು ಬಾರಿ ಹೇಳಿಕೆ ನೀಡಿತ್ತು. ಜಲಿಯನ್ ವಾಲಾಬಾಗ್ ಘಟನೆಗೆ ನೂರು ತುಂಬಿರುವ ಈ ಸಂದರ್ಭದಲ್ಲಿ ಬ್ರಿಟನ್ ಕ್ಷಮೆಯಾಚಿಸಬಹುದು ಎಂದೂ ಭಾವಿಸಿತ್ತು. ಅದು ಸಂಭವಿಸಿದ್ದಿದ್ದರೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಭದ್ರಗೊಳಿಸುತ್ತಿತ್ತು. ವಿಪರ್ಯಾಸವೆಂದರೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಗಟ್ಟಿಯಾಗಿ ಧ್ವನಿಯೆತ್ತುವ ನೈತಿಕ ಶಕ್ತಿ ನಮ್ಮನ್ನಾಳುವ ನಾಯಕರಿಗೂ ಇಲ್ಲ. ಜಲಿಯನ್ ವಾಲಾಬಾಗ್ ದುರಂತ ಸಂಭವಿಸಿರುವುದು ಸ್ವಾತಂತ್ರ ಪೂರ್ವದಲ್ಲಿ.

ದಾಳಿ ನಡೆಸಿರುವುದು ಪರಕೀಯರು. ಬ್ರಿಟಿಷರ ಆಡಳಿತದ ವಿರುದ್ಧ ಧ್ವನಿಯೆತ್ತಿದ ಒಂದೇ ಕಾರಣಕ್ಕಾಗಿ ಅವರು ಅಹಿಂಸಾ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ವಾತಂತ್ರ ಹೋರಾಟಗಾರರ ಮೇಲೆ ಶಸ್ತ್ರವನ್ನು ಬಳಸಿದರು. ಆದರೆ ಸ್ವಾತಂತ್ರಾನಂತರ ನಮ್ಮದೇ ಸರಕಾರ ನಮ್ಮದೇ ಜನರ ಮೇಲೆ ನಡೆಸಿದ ಹತ್ಯಾಕಾಂಡಗಳ ಕುರಿತಂತೆ ಉತ್ತರಿಸಲು ನಮ್ಮಲ್ಲಿ ಮಾತುಗಳಿವೆಯೇ? ದೇಶ ವಿಭಜನೆಯ ಸಂದರ್ಭದಲ್ಲಿ ಭಾರೀ ಹಿಂಸಾಚಾರಗಳು ನಡೆದವು. ವಿಭಜನೆಯಂತಹ ಸಂದರ್ಭದಲ್ಲಿ ಇಂತಹ ಹಿಂಸೆ ಅನಿವಾರ್ಯ ಎಂದು ದೇಶ ಒಪ್ಪಿಕೊಂಡಿತು ಮತ್ತು ನೋವುಗಳನ್ನು ನುಂಗಿಕೊಂಡಿತು. ಆದರೆ ಭಾರತದ ಪ್ರಜಾಸತ್ತಾತ್ಮಕ ಸರಕಾರದ ಮೂಗಿನ ನೇರದಲ್ಲೇ ನಡೆದ ಹತ್ಯಾಕಾಂಡಗಳಿಗೆ ಯಾವ ಸಮರ್ಥನೆಗಳಿವೆ? ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಬ್ರಿಟಿಷ್ ಸರಕಾರ ನಮ್ಮ ಜನರ ಮೇಲೆ ಎಸಗಿದ ಹಿಂಸೆಯಾಗಿದ್ದರೆ, ಸಿಖ್ ಹತ್ಯಾಕಾಂಡ ಮತ್ತು ಗುಜರಾತ್ ಹತ್ಯಾಕಾಂಡ ನಮ್ಮದೇ ಸರಕಾರ, ನಮ್ಮದೇ ಜನರ ಮೇಲೆ ಎಸಗಿದ ಬರ್ಬರ ಹಿಂಸೆಯಾಗಿದೆ. ಒಂದು ರೀತಿಯಲ್ಲಿ ಪರಕೀಯರು ನಮ್ಮವರ ಮೇಲೆ ಎಸಗಿದ ದೌರ್ಜನ್ಯಗಳಿಗಿಂತಲೂ ಭೀಕರವಾದುದು ನಮ್ಮವರು ನಮ್ಮವರ ವಿರುದ್ಧವೇ ಎಸಗಿದ ದೌರ್ಜನ್ಯಗಳು. ಸಿಖ್ ಹತ್ಯಾಕಾಂಡ ಸಂಭವಿಸಿದಾಗ ರಾಜೀವ್ ಗಾಂಧಿ ‘‘ಒಂದು ಬೃಹತ್ ಮರ ಉರುಳುವಾಗ ಸಣ್ಣ ಪುಟ್ಟ ಸಾವು ನೋವುಗಳು ಸಹಜ’’ ಎಂಬ ರೀತಿಯಲ್ಲಿ ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ಗುಜರಾತ್‌ನಲ್ಲಿ ನಡೆದ ಭೀಕರ ಹತ್ಯಾಕಾಂಡ ಮತ್ತು ಮಹಿಳೆಯರ ಮೇಲೆ ನಡೆದ ಅತ್ಯಾಚಾರಗಳನ್ನು ಅಂದಿನ ಗುಜರಾತ್ ಸರಕಾರದೊಳಗಿರುವ ಜನರು ‘‘ಆತ್ಮಾಭಿಮಾನದ ಸಂಕೇತ’’ ಎಂಬಂತೆ ಬಣ್ಣಿಸಿದರು.

ಜಲಿಯನ್ ವಾಲಾಬಾಗ್‌ಗೆ ಕಾರಣವಾದ ಅಂದಿನ ಜನರಲ್ ಡಯರ್‌ನನ್ನು ಬ್ರಿಟಿಷರು ಕಾಟಾಚಾರಕ್ಕಾದರೂ ಮರಳಿ ಕರೆಸಿಕೊಂಡರು. ಆದರೆ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ರಾಜೀನಾಮೆಯನ್ನು ಪಡೆಯಲು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಫಲರಾದರು. ಬ್ರಿಟನ್‌ನಲ್ಲಿ ಡಯರ್‌ನನ್ನು ಪದವಿ ನೀಡಿ ಗೌರವಿಸಲಾಯಿತು ಎಂಬ ಆರೋಪವನ್ನು ನಾವು ಮಾಡುತ್ತೇವೆ. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಈ ದೇಶ ಬಳಿಕ ಪ್ರಧಾನ ಮಂತ್ರಿಯಾಗಿ ಗೌರವಿಸಿತು. ಗುಜರಾತ್ ಹತ್ಯಾಕಾಂಡವನ್ನು ಪ್ರಧಾನಿ ಮೋದಿಯವರು ‘‘ವೇಗವಾಗಿ ಸಾಗಿದ ಕಾರಿನಡಿಗೆ ಸಿಕ್ಕಿದ ನಾಯಿಮರಿ’ಗೆ ಹೋಲಿಸಿದರು.

ಸಿಖ್ ಹತ್ಯಾಕಾಂಡಕ್ಕೆ ಎಷ್ಟೋ ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ ಕ್ಷಮೆಯಾಚನೆ ಮಾಡಿತು. ಆದರೆ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಇಂದಿಗೂ ಪ್ರಧಾನಿ ಮೋದಿಯವರು ಸಣ್ಣ ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಬದಲಿಗೆ ಗುಜರಾತ್ ಹತ್ಯಾಕಾಂಡವನ್ನು ತನ್ನ ‘ಸಾಧನೆ’ ಎಂಬಂತೆ ಬಿಂಬಿಸಿಕೊಂಡು ಬರುತ್ತಿದ್ದಾರೆ. ಜಲಿಯನ್ ವಾಲಾಬಾಗ್‌ನಲ್ಲಿ ಹತ್ಯೆಗಳಷ್ಟೇ ನಡೆದವು. ಗುಜರಾತ್‌ನಲ್ಲಿ ಸಂಭವಿಸಿದ್ದು ಬರೀ ಹತ್ಯೆಗಳಲ್ಲ. ಸಾಮೂಹಿಕ ದಹನ, ಸಾಮೂಹಿಕ ಅತ್ಯಾಚಾರ. ಮನುಷ್ಯ ಘನತೆಯ ಮಹಾ ಹತ್ಯೆ ಗುಜರಾತ್‌ನಲ್ಲಿ ಸಂಭವಿಸಿತು. ಭಾರತದ ವರ್ಚಸ್ಸಿಗೆ ಈ ಕಳಂಕ ಶಾಶ್ವತ ಕುಂದುಂಟು ಮಾಡಿತು. ಇಂತಹ ಕಳಂಕವನ್ನು ಹೊತ್ತುಕೊಂಡ ನಮಗೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕಾಗಿ ಬ್ರಿಟನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುವುದಕ್ಕೆ ಮುಖವಾದರೂ ಎಲ್ಲಿದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News