‘ಮೇಕ್ ಇನ್ ಇಂಡಿಯಾದಲ್ಲಿ’ ದೇಶೀಯವಾಗಿ ಯುದ್ಧ ಸಾಮಗ್ರಿಗಳೆಲ್ಲವೂ ಉತ್ಪತ್ತಿಯಾಗುತ್ತಿದೆಯೇ?

Update: 2019-04-11 18:33 GMT

 ಜಗತ್ತಿನ ಅತೀ ದೊಡ್ಡ ರಕ್ಷಣಾ ಸಾಮಗ್ರಿಗಳ ಆಮದುದಾರ ರಾಷ್ಟ್ರವಾಗಿದ್ದ ಭಾರತವು ರಕ್ಷಣಾ ಕ್ಷೇತ್ರಕ್ಕೆ ಬೇಕಾದ ಸಲಕರಣೆಗಳನ್ನು ದೇಶೀಯವಾಗಿಯೇ ಉತ್ಪಾದಿಸುವತ್ತ ದಾಪುಗಾಲು ಇಟ್ಟಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ರಕ್ಷಣಾ ಸಲಕರಣೆಗಳನ್ನೂ ದೇಶದಲ್ಲಿಯೇ ಉತ್ಪಾದಿಸಬೇಕೆಂದು ಸಂಕಲ್ಪತೊಟ್ಟಿರುವ ಮೋದಿ ಸರಕಾರದ ನಡೆ ತೃಪ್ತಿದಾಯಕವೆಂದು, ಚುನಾವಣೆ ಸಮೀಪವಿರುವಾಗ ಪ್ರಚಾರ ಮಾಡಲಾಗುತ್ತಿದೆ. ಸತ್ಯವೇನೆಂದರೆ ಕೆಲವು ದಿನಗಳಿಗಿಂತ ಮುಂಚೆಯೇ ಎಲ್&ಟಿ ಕಂಪೆನಿ ಉತ್ಪಾದಿಸಿದ ಕೆ-9 ವಜ್ರ ಟ್ಯಾಂಕ್ ಮತ್ತು ರಶ್ಯಾ ಸಹಭಾಗಿತ್ವದ ಅಮೇಠಿಯ ರಫೇಲ್ ಘಟಕ ಪ್ರಾರಂಭವೆಂಬ ಕೆಲವೊಂದು ಬೆರಳೆಣಿಕೆಯಷ್ಟು ವಿಷೆಯವನ್ನು, ಏನೋ ದೊಡ್ಡ ಕ್ರಾಂತಿಯೇ ನಡೆದಂತೆ ಪ್ರಚಾರ ಮಾಡುತ್ತಿರುವಾಗ, ವಿಚಾರದ ಆಳಕ್ಕೆ ಹೋಗಿ ಸತ್ಯಾಸತ್ಯತೆಯನ್ನು ತಿಳಿಯುವ ಆವಶ್ಯಕತೆ ಇದೆ. ಇನ್ನು ಭಾರತದಲ್ಲಿ ಯುದ್ಧ ಸಾಮಗ್ರಿಗಳ ಆಮದು ಕುಸಿತವಾಗಿದೆ ಎಂದು ಹೇಳುವಾಗ ಕೆಲವು ಜನರು, ಅದೊಂದು ಮೇಕ್ ಇನ್ ಇಂಡಿಯಾದ ಕಮಾಲ್ ಎಂಬಂತೆ ಬಿಂಬಿಸುತ್ತಾರೆ. ಆದರೆ ರಶ್ಯಾದಲ್ಲಿ ಆದೇಶಿಸಲಾದ ‘ಕ್ಯಾಮ್ ಬ್ಯಾಟ್’ ಏರ್ ಕ್ರಾಫ್ಟ್ ಮೊದಲಿನ ಸರಬರಾಜುದಾರರಿಂದ ಪರವಾನಿಗೆ ಅಡಿಯಲ್ಲಿ ಉತ್ಪಾದಿಸಲ್ಪಟ್ಟ ಶಸ್ತ್ರಾಸ್ತ್ರಗಳ ವಿತರಣೆಯಲ್ಲಿ ವಿಳಂಬವಾಯಿತು ಮತ್ತು 2008ರಲ್ಲಿ ಫ್ರಾನ್ಸ್ ನಿಂದ ಆದೇಶಿಸಲಾದ ಜಲಾಂತರ್ಗಾಮಿಗಳು ವಿತರಣೆ ಸಮಯಕ್ಕೆ ಸರಿಯಾಗಿ ನಡೆಯಲಿಲ್ಲ ಎನ್ನುವುದೇ ಅದರ ಹಿಂದಿನ ನಿಜವಾದ ವಾಸ್ತವ.

ವರ್ಲ್ಡ್ ಅಟ್ಲಾಸ್.ಕಾಂ ವರದಿಯಂತೆ, ವಿಶ್ವದಲ್ಲಿಯೇ ಅತೀಹೆಚ್ಚು ಶಸ್ತ್ರಾಸ್ತ್ರಗಳ ಆಮದುಗಳಲ್ಲಿ ಭಾರತವು ಶೇ. 14ರಷ್ಟು ಅಂದರೆ ಪ್ರಸಕ್ತ ವಿಶ್ವದ ಎರಡನೆಯ ಅತಿ ದೊಡ್ಡ ಆಮದುದಾರ ದೇಶ. ಸೋವಿಯತ್ ಯುಗದ ನಂತರ ಭಾರತದ ಮಿಲಿಟರಿಯು ಶಸ್ತ್ರಾಸ್ತ್ರ ಕೊರತೆಯನ್ನು ಅನುಭವಿಸಿದೆ ಎಂದು ಕಳೆದ ಮೂರು ವರ್ಷಗಳಲ್ಲಿ 14 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಭಾರತ ಆಮದು ಮಾಡಿಕೊಂಡಿದೆ.
ಸ್ಟಾಕ್ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ಪ್ರಕಾರ,
2014 ರಿಂದ 2018 ರವರೆಗೆ, ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಅತಿ ದೊಡ್ಡ ಯುದ್ಧ ಸಾಮಗ್ರಿಗಳ ಆಮದುದಾರರ ಮಾರುಕಟ್ಟೆ ಪಾಲು ಈ ಕೆಳಗಿನಂತಿವೆ.
 ಸಾಂಪ್ರದಾಯಿಕ ಶಸ್ತ್ರ ಆಮದುಗಳ ಶೇಕಡಾವಾರು: 1. ಸೌದಿ ಅರೇಬಿಯ-12, 2. ಭಾರತ-9.5 3. ಈಜಿಪ್ಟ್ -5.1, 4. ಆಸ್ಟ್ರೇಲಿಯಾ-4.6, 5. ಅಲ್ಜೀರಿಯಾ-4.4, 6. ಚೀನಾ-4.2, 7. ಯುನೈಟೆಡ್ ಅರಬ್ ಎಮಿರೇಟ್ಸ್-3.7, 8. ಇರಾಕ್-3.7, 9. ದಕ್ಷಿಣ ಕೊರಿಯಾ-3.1, 10. ವಿಯೆಟ್ನಾಂ-2.9, 11. ಪಾಕಿಸ್ತಾನ-2.7
2008ರಿಂದ 17ರ ಅವಧಿಯಲ್ಲಿ ಭಾರತವು ಹೊಸ ಆಯುಧಗಳನ್ನು ಖರೀದಿಸಲು 100 ಶತಕೋಟಿಗಿಂತ ಹೆಚ್ಚು ಹಣವನ್ನು ಖರ್ಚುಮಾಡಿತು, ದೇಶದ ಮಿಲಿಟರಿ ಅವಶ್ಯಕತೆಗಳಲ್ಲಿ ಸುಮಾರು ಶೇ. 60-65ರಷ್ಟನ್ನು ಆಮದು ಮಾಡಿಕೊಂಡಿದೆ.
 ಭಾರತವು 2018ರಲ್ಲಿ ರಕ್ಷಣೆಗಾಗಿ ಖರ್ಚು ಮಾಡಲು 2.95 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಿತು. ಅಂದರೆ ಅದು 2017ರ ಬಜೆಟ್ 2.74ಲಕ್ಷ ಕೋಟಿ ರೂ.ಗೆ ಶೇ. 7.8ರಷ್ಟು ಹೆಚ್ಚಳವಾಗಿದೆ. ಬಜೆಟ್‌ನ 86,488 ಕೋಟಿ ರೂಪಾಯಿ ಮೀರಿ ಹೊಸ ಆಯುಧಗಳನ್ನು ವಿದೇಶದಿಂದ ಖರೀದಿಸಲು 99,563 ಕೋಟಿ ರೂ. ಖರ್ಚುಮಾಡಿತು.
 ಭಾರತವು ರಶ್ಯಾ ಮತ್ತು ಇಸ್ರೇಲ್ ದೇಶಗಳ ಅತಿದೊಡ್ಡ ಶಸ್ತ್ರಾಸ್ತ್ರಗಳ ಖರೀದಿದಾರನಾಗಿ ಇಂದಿಗೂ ಉಳಿದಿದೆ. ಹಾಗೂ ಇಸ್ರೇಲ್ ಮತ್ತು ಫ್ರಾನ್ಸ್ ಎಲ್ಲಾ 2014-18ರಲ್ಲಿ ಭಾರತಕ್ಕೆ ರಫ್ತನ್ನು ಹೆಚ್ಚಿಸಿದೆ.
‘ರಫೇಲ್-ಡೀಲ್’ ಬಗ್ಗೆ ಇಂದು ಜನರ ಮನಸ್ಸಿನಲ್ಲಿ ಮನೆ ಮಾಡಿರುವ ಸಹಜವಾದ ಅನುಮಾನಗಳು:
 ‘ರಫೇಲ್-ಡೀಲ್’ ಹೆಚ್ಚಿನವರಿಗೆಲ್ಲ ತಿಳಿದಿರುವ ವಿಚಾರವೇ, ಬೆಂಗಳೂರಿನಲ್ಲಿರುವ ಭಾರತ ಸರಕಾರದ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (HALHAL  ) ಸಂಸ್ಥೆಯೊಂದಿಗೆ ಸೇರಿಕೊಂಡು ಯುದ್ಧ ವಿಮಾನ ತಯಾರಿಸುವ ತಿಳುವಳಿಕೆಯೊಂದಿಗೆ 126 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ಮನಮೋಹನ್ ಸಿಂಗ್ ಸರಕಾರವು ಡಸ್ಸಾಲ್ಟ್ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದರೂ ಪ್ರಧಾನಿ ಮೋದಿ ಸರಕಾರವು ಈ ಒಪ್ಪಂದವನ್ನು ತಿರಸ್ಕರಿಸಿ 2016 ಸೆಪ್ಟಂಬರ್‌ನಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದದಂತೆ, ಡಸ್ಸಾಲ್ಟ್ ಕಂಪೆನಿಯು 126 ಯುದ್ಧ ವಿಮಾನಗಳನ್ನು ಒದಗಿಸಬೇಕಾಗಿಲ್ಲ ಮತ್ತು ನೊಂದಿಗೆ ಸೇರಿಕೊಂಡು ತಯಾರಿಸಬೇಕಿಲ್ಲ. ಅನಿಲ್ ಅಂಬಾನಿಯವರ ಒಡೆತನದ ಸಂಸ್ಥೆಯೊಂದಿಗೆ ಸೇರಿಕೊಂಡು 36 ಯುದ್ಧ ವಿಮಾನಗಳನ್ನು ಮಾಡಿಕೊಟ್ಟರಷ್ಟೇ ಸಾಕಾಗುತ್ತದೆ. ಇಲ್ಲೊಂದು ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಭಾರತೀಯ ವಾಯುಪಡೆಗೆ 126 ಯುದ್ಧ ವಿಮಾನಗಳು ಅಗತ್ಯವಿರುವಾಗ ಅದನ್ನು 36ಕ್ಕೆ ತಗ್ಗಿಸಲು ಕಾರಣ ಏನು?
 ವಾಯುಪಡೆಯನ್ನು ಬಲಪಡಿಸಬೇಕಾದ ಈ ಸಂದರ್ಭದಲ್ಲಿ ಯುದ್ಧ ವಿಮಾನಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದರಿಂದ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಂತಾಗುವುದಿಲ್ಲವೇ? ಅಥವಾ ವಾಯುಪಡೆಗೆ 126 ಯುದ್ಧ ವಿಮಾನಗಳ ಅಗತ್ಯವಿರಲಿಲ್ಲ ಅನ್ನುವುದನ್ನಾದರೂ ಸರಕಾರ ದಾಖಲೆ ಸಹಿತ ಸ್ಪಷ್ಟಪಡಿಸಬೇಕಾಗಿತ್ತು. ಇನ್ನು HALಗೆ ತಾಂತ್ರಿಕ ವರ್ಗಾವಣೆ ರದ್ದುಪಡಿಸುವ ಮತ್ತು HAL-ಡಸ್ಸಾಲ್ಟ್ ಏವಿಯೇಷನ್ ನಡುವಿನ ಒಪ್ಪಂದದ ಮೂಲಕ ಮೋದಿ ಸರಕಾರವು ಸಾವಿರಾರು ಕನ್ನಡಿಗರ ಉದ್ಯೋಗಾವಕಾಶಗಳನ್ನು ಮತ್ತು ಕರ್ನಾಟಕದಲ್ಲಿ 36 ಸಾವಿರ ಕೋಟಿ ಹೂಡಿಕೆಗಳನ್ನು ನಿರಾಕರಿಸಿ ಕನ್ನಡಿಗರಿಗೆ ಅನ್ಯಾಯ ಮಾಡಿಲ್ಲವೇ? ಎಂಬ ಪ್ರಶ್ನೆಯು ಕನ್ನಡಿಗರು ಅತ್ಯಧಿಕವಾಗಿ ನಿರುದ್ಯೋಗದಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ ಅವರನ್ನು ಅತೀ ಹೆಚ್ಚು ಕಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
 ಏಕೆಂದರೆ ರಾಜ್ಯದ ನಾನಾ ಭಾಗದಿಂದ ರಾಜಧಾನಿಗೆ ಹೆಚ್ಚಿನೆಲ್ಲ ಕನ್ನಡಿಗರು ಉದ್ಯೋಗ ಹುಡುಕುತ್ತಾ ಬರುತ್ತಾರೆ. ಹಾಗಿರುವಾಗ ಪ್ರತೀ ವರ್ಷ ಕೋಟಿಯಷ್ಟು ಉದ್ಯೋಗ ಕೊಡುತ್ತೇನೆಂದು ಜನಸಾಮಾನ್ಯರಿಗೆ ವಾಗ್ದಾನ ಮಾಡಿದ ಮೋದಿಯವರು ಕನ್ನಡಿಗರಿಗೆ ಕಳೆದ ಐದು ವರ್ಷಗಳಲ್ಲಿ ಎಷ್ಟು ಉದ್ಯೋಗ ನೀಡಿದ್ದಾರೆಂದು ಕೇಳಿದರೆ ಅವರು ‘‘ದೇಶದ ಹಿತಕ್ಕಾಗಿ ಕನ್ನಡಿಗರಿಗೆ ಉದ್ಯೋಗ ಒದಗಿಸಲಿಲ್ಲ ಎಂದು ಉತ್ತರಿಸಿದರೆ ಆಶ್ಚರ್ಯವಿಲ್ಲ’’ ಏಕೆಂದರೆ ಅವರು ಏನು ಮಾಡಿದರೂ, ಏನು ಮಾಡದಿದ್ದರೂ ಅದೆಲ್ಲವೂ ‘‘ದೇಶದ ಹಿತಕ್ಕಾಗಿ’’ ಎಂದು ಹೇಳುವ ಕಾಲದಲ್ಲಿ, ‘ರಫೇಲ್-ಡೀಲ್’ ನಿಂದಾಗಿ ಸುಮಾರು ಹತ್ತು ಸಾವಿರ ಕನ್ನಡಿಗರಿಗೆ ಸಿಗಬೇಕಾಗಿದ್ದ ಉದ್ಯೋಗವು ಏಕೆ ಸಿಗಲಿಲ್ಲ? ಎಂದು ಅವರನ್ನು ಪ್ರಶ್ನಿಸಿದರೆ, ಪ್ರಶ್ನೆ ಕೇಳಿದಾತನನ್ನು ಸರಕಾರದ ಮಂತ್ರಿಗಳು ‘ದೇಶ ದ್ರೋಹಿ’ಯಾಗಿ ಬಿಂಬಿಸುವುದಾದರೆ ಜನಸಾಮಾನ್ಯರ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿಲ್ಲ ಎಂಬ ಸಂಕೇತವಲ್ಲವೇ? ಏನೇ ಇರಲಿ ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ‘ಆಡಳಿತ ವರ್ಗವನ್ನು’ ಪ್ರಶ್ನಿಸುವುದು ಅತೀ ಮುಖ್ಯ.

Writer - ತಲ್ಹ ಇಸ್ಮಾಯೀಲ್, ಬೆಂಗ್ರೆ

contributor

Editor - ತಲ್ಹ ಇಸ್ಮಾಯೀಲ್, ಬೆಂಗ್ರೆ

contributor

Similar News

ಜಗದಗಲ
ಜಗ ದಗಲ