ಮುಖೇಶ್ ಅಂಬಾನಿ ಕ್ರೀಡಾ ತಂಡದ ಶ್ರೀಮಂತ ಮಾಲಕ

Update: 2019-04-12 03:15 GMT

ಮುಂಬೈ, ಎ.11: ಮುಂಬೈ ಇಂಡಿಯನ್ಸ್ ತಂಡ ಕಳೆದ ಋತುವಿನ ಐಪಿಎಲ್‌ನಲ್ಲಿ ಪ್ಲೇ-ಆಫ್ ಸುತ್ತಿಗೆ ತೇರ್ಗಡೆಯಾಗಲು ವಿಫಲವಾಗಿದ್ದರೂ ಆ ತಂಡದ ಮಾಲಕ ಮುಖೇಶ್ ಅಂಬಾನಿ ಕ್ರೀಡಾ ತಂಡದ ವಿಶ್ವದ ಶ್ರೀಮಂತ ಯಜಮಾನ ಎನಿಸಿಕೊಂಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಮೂಲಕ ಅಂಬಾನಿ ಅವರ ನಿವ್ವಳ ಆದಾಯ ಕಳೆದ 12 ತಿಂಗಳ ಅವಧಿಯಲ್ಲಿ 10 ಬಿಲಿಯನ್ ಡಾಲರ್‌ನಿಂದ 50 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದು ಕಳೆದ 2 ವರ್ಷಗಳಲ್ಲಿ ದ್ವಿಗುಣವಾಗಿದೆ. ಫೋರ್ಬ್ಸ್ ವರದಿಯ ಪ್ರಕಾರ ಅಂಬಾನಿ ವಿಶ್ವದ 13ನೇ ಶ್ರೀಮಂತ ವ್ಯಕ್ತಿ. ಭಾರತದ ಅತ್ಯಂತ ಶ್ರೀಮಂತ ಹಾಗೂ ಕ್ರೀಡಾ ತಂಡವೊಂದರ ಶ್ರೀಮಂತ ಮಾಲಕನಾಗಿ ಹೊರಹೊಮ್ಮಿದ್ದಾರೆ. ವಿಶ್ವದಾದ್ಯಂತ ಪ್ರಮುಖ ಕ್ರೀಡಾ ಲೀಗ್‌ಗಳಲ್ಲಿ 58 ಕೋಟ್ಯಧಿಪತಿ ಮಾಲಕರಿದ್ದಾರೆ. ಎನ್‌ಬಿಎ ತಂಡ ಲಾಸ್ ಏಂಜಲಿಸ್‌ನ ಕ್ಲಿಪರ್ಸ್ ಮಾಲಕ ಸ್ಟೀವ್ ಬಾಲ್ಮರ್ ಎರಡನೇ ಶ್ರೀಮಂತ ಕ್ರೀಡಾ ತಂಡವೊಂದರ ಮಾಲಕರಾಗಿದ್ದಾರೆ. ಕಳೆದ 12 ತಿಂಗಳಲ್ಲಿ ಬಾಲ್ಮರ್ ಆದಾಯ 7 ಶೇ. ಹೆಚ್ಚಳವಾಗಿದೆ. 2014ರಲ್ಲಿ ಮೈಕ್ರೊಸಾಫ್ಟ್ ನ ಸಿಇಒ ಆಗಿ ನಿವೃತ್ತರಾಗಿರುವ ಬಾಲ್ಮರ್ 2014ರಲ್ಲಿ ಕ್ಲಿಪರ್ಸ್ ತಂಡವನ್ನು ಖರೀದಿಸಿದ್ದರು. ಸಾಫ್ಟ್‌ವೇರ್ ದೈತ್ಯ ಕಂಪೆನಿಯಲ್ಲಿ ತನ್ನ ಷೇರುಗಳನ್ನು ಉಳಿಸಿಕೊಂಡಿದ್ದರು. 2018ರ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ತಂಡ ಮೊದಲ ಆರು ಪಂದ್ಯಗಳನ್ನು ಜಯಿಸಿತ್ತು. ಕೊನೆಯ 6 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿದ್ದರೂ ಪ್ಲೇ-ಆಫ್ ಸುತ್ತಿಗೇರಲು ವಿಫಲವಾಗಿತ್ತು. ಈ ವರ್ಷ 6 ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸುವುದರೊಂದಿಗೆ ಉತ್ತಮ ಆರಂಭ ಪಡೆದಿದೆ. ಬುಧವಾರ ಮುಂಬೈನಲ್ಲಿ ಪಂಜಾಬ್ ತಂಡವನ್ನು ಮಣಿಸಿ ಐಪಿಎಲ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News