ಮೊದಲನೇ ಆರೋಪಿಯ ಹೇಳಿಕೆಗಳು...

Update: 2019-04-13 07:04 GMT

ಭಾಗ-21

 ಆರೋಪಿಗಳು ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುವುದಲ್ಲದೆ, ಲಿಖಿತ ಹೇಳಿಕೆಯನ್ನೂ ಕೊಡಬಹುದಾಗಿತ್ತು. ಹಾಗೆ ಸಾವರ್ಕರ್‌ರು, ಶಂಕರ ಕ್ರಿಸ್ಟಯ್ಯ ಕೊಟ್ಟಿದ್ದರು. ಶಂಕರ ಕ್ರಿಸ್ಟಯ್ಯನ ಲಿಖಿತ ಹೇಳಿಕೆ 297 (ಇನ್ನೂರ ತೊಂಬತ್ತೇಳು) ಪುಟಗಳು! ಸಾವರ್ಕರ್‌ರ ಲಿಖಿತ ಹೇಳಿಕೆ 57 ಪುಟಗಳು. ಮೊದಲನೇ ಆರೋಪಿಯ ಹೇಳಿಕೆ ನೂರಾರು ಪುಟಗಳು. ಅದನ್ನು ಓದಲು ಐದು ಗಂಟೆ ಹಿಡಿಯಿತು.

ಇದುವರೆಗೆ ಗಮನಿಸಿಲ್ಲದ ಒಂದು ಸಂಗತಿಯನ್ನು ಬಡ್ಗೆ ತನ್ನ ಸಾಕ್ಷದಲ್ಲಿ ಹೇಳಿದ;
‘‘ನಾನು ಅಲ್ಲಿಂದ (ಪ್ರಾರ್ಥನಾ ಸ್ಥಳದಿಂದ) ಕಾಲ್ತೆಗೆದಾಗ ನಾಥೂರಾಮ್ ಗೋಡ್ಸೆ, ಆಪ್ಟೆ, ಗೋಪಾಲ ಯಾರೂ ಕಣ್ಣಿಗೆ ಬೀಳಲಿಲ್ಲ. (ಹಿಂದೂ ಮಹಾಸಭಾ ಭವನಕ್ಕೆ ಹೋದ ಮೇಲೆ) ‘ಭವನದ ಹಿಂದಿರುವ ಅಡವಿಯೊಳಗೆ ಹೋಗಿ ಕೈಬಾಂಬುಗಳನ್ನು ಬಿಸಾಕಿ ಬಾ’ ಎಂದು ಶಂಕರನಿಗೆ ಆಜ್ಞಾಪಿಸಿದೆ. ಶಂಕರ ಅತ್ತ ಕಡೆ ಹೋದೊಡನೆಯೇ ನನ್ನ ಹಾಸಿಗೆಯನ್ನು ಮತ್ತು ಸಾಮಾನುಗಳನ್ನು ಗಂಟುಕಟ್ಟಿ ದಿಲ್ಲಿಯಿಂದ ತಪ್ಪಿಸಿಕೊಳ್ಳಲು ಸಜ್ಜಾದೆ. ಆಗ ಗೋಡ್ಸೆ ಸೋದರರು, ಆಪ್ಟೆ ಮಹಾಸಭಾ ಭವನಕ್ಕೆ ಬಂದರು. ಆಪ್ಟೆ: ‘ಬಂದೂ ಭಾವು ಏನಾಯಿತು?’ (ಕೇ ಝೂಲಾ?) ಎಂದು ಕೇಳಿದ. ನನಗೆ ಅವರ ಮೇಲೆ ಹುಚ್ಚುಕೋಪ ಬಂತು. ನನಗೆ ಅವರ ದುಷ್ಟ ಉಪಾಯ ಗೊತ್ತಾಗಿಹೋಯಿತು. ನಳಿಗೆಯಲ್ಲಿ ಹೊಗೆಯುಗುಳುತ್ತಿದ್ದ ಬಂದೂಕನ್ನು ಹಿಡಿದುಕೊಂಡಿರುವಾಗ ನಾನು ಪೊಲೀಸರ ಕೈಗೆ ಸಿಕ್ಕಿಬೀಳಬೇಕು; ಅವರು ಕುಶಾಲು ತಪ್ಪಿಸಿಕೊಳ್ಳಬೇಕು ಎಂದು ಉಪಾಯ ಹೂಡಿದ್ದರು. ನನಗೆ ಮನಸ್ಸು ವ್ಯಗ್ರವಾಯಿತು. ಅವರನ್ನು ಗಟ್ಟಿಯಾಗಿ ಗದರಿಸಿದೆ. ಸುಮ್ಮನೆ ಹೋಗಿಬಿಡಿ. ಮುಂದೆ ಎಂದೂ ನನ್ನನ್ನು ಸಂಪರ್ಕಿಸಬೇಡಿ ಎಂದು ಹೇಳಿದೆ.’’
ಬಡ್ಗೆ ಯಾಕೆ ‘ಮಾಫಿ’ ಸಾಕ್ಷಿಯಾದ, ನ್ಯಾಯಾಲಯದಲ್ಲಿ ಚಿತ್ಪಾವನ ಬ್ರಾಹ್ಮಣರ ಈ ಒಕ್ಕೂಟ ಹೂಡಿದ್ದ ಸಂಚನ್ನು ಯಾಕೆ ನ್ಯಾಯಾಲಯಕ್ಕೆ ಇದ್ದಕ್ಕಿದ್ದಂತೆ ತಿಳಿಸಿದ ಎಂಬುದರ ಕಾರಣ ಬಡ್ಗೆಯ ಮಾತಿನಿಂದ ಗೋಚರವಾಗುತ್ತದೆ. ಅತ್ಯಂತ ಕಷ್ಟಕ್ಕೆ ಗುರಿಯಾಗಿದ್ದ, ಸೇಡಿನ ಸಿಟ್ಟಿನಿಂದ ಕುದಿಯುತ್ತಿದ್ದ, ಮದನ್‌ಲಾಲ್ ಏನನ್ನಾದರೂ ಮಾಡಲು ಸಿದ್ಧನಿದ್ದ. ಹತ್ಯೆಯ ಕೃತ್ಯದಲ್ಲಿ ಅವನಿಗೆ ನೇರ ಪಾತ್ರವನ್ನು ವಹಿಸಿ ಬಲಿಕೊಟ್ಟು ತಾವು ಉಪಾಯವಾಗಿ ತಪ್ಪಿಸಿಕೊಳ್ಳುವ ಹವಣಿಕೆ ಬಡ್ಗೆಗೆ ಕೊನೆಯ ಘಟ್ಟದಲ್ಲಿ ಅರಿವಾಗಿತ್ತು. ಅವರ ಈ ಹೀನ ಸಂಚಿನ ಬಲೆಗೆ ಸಿಕ್ಕುಬಿದ್ದು ತಾನೇಕೆ ಬಲಿಯಾಗಬೇಕೆಂಬ ‘ಜ್ಞಾನೋದಯ’ವೂ ಆಗಿರಬೇಕು ಅವನಿಗೆ. ಆದ್ದರಿಂದಲೇ ಅವನು ಮಾಫಿ ಸಾಕ್ಷಿಯಾಗಿ ನ್ಯಾಯಾಲಯದಲ್ಲಿ ಸಾಕ್ಷ ನುಡಿಯಲು ಸಿದ್ಧನಾಗಿರಬೇಕು.
ಗಾಂಧಿ ಹತ್ಯೆಯ ಪಿತೂರಿ ಮತ್ತು ಅದನ್ನು ಕಾರ್ಯಗತ ಮಾಡಿದ ಈ ಮುಖ್ಯ ಅಂಶಗಳ ಬೆಳಕಿನಲ್ಲಿ ನ್ಯಾಯಾಲಯದಲ್ಲಿ ಇತರ, ಇದನ್ನು ಸಮರ್ಥಿಸುವ ಅನೇಕ ಪೂರಕ ಸಾಕ್ಷವನ್ನು ತಪಾಸ ಣಾಧಿಕಾರಿ ನಗರವಾಲಾ ಸಮರ್ಥವಾಗಿ ಶೀಘ್ರವಾಗಿ ಸಂಗ್ರಹಿಸಿದ್ದರು.
ಬಡ್ಗೆ ಮಾಫಿ ಸಾಕ್ಷಿಯಾಗದಿದ್ದರೂ ಪಿತೂರಿ ಮತ್ತು ಅದನ್ನು ಕಾರ್ಯಗತ ಮಾಡಿದ ಪ್ರತಿಯೊಂದು ಸಂಗತಿಯನ್ನು ಋಜುವಾತು ಪಡಿಸುವಷ್ಟು ಪ್ರಬಲ ಸಾಕ್ಷ ಸಂಗ್ರಹಿಸಿದ್ದರು. ಮಾಫಿ ಸಾಕ್ಷಿಯಾದರೂ ಅವನು ನುಡಿಯುವ ಪ್ರತಿಯೊಂದು ಮಾತನ್ನು ಸಮರ್ಥಿಸುವ ಸಾಕ್ಷವನ್ನು ನ್ಯಾಯಾಲಯಕ್ಕೆ ಒದಗಿಸಲೇಬೇಕು. ಯಾಕೆಂದರೆ, ಮಾಫಿ ಸಾಕ್ಷಿಯೂ ಒಬ್ಬ ಅಪರಾಧಿಯೇ. ಅವನು ಹೇಳುವುದು ಸಟೆಯೇ ದಿಟವೆ ಎಂಬುದನ್ನು ನಿರ್ಧರಿಸುವುದು ಕಷ್ಟವೆ. ಮಾಫಿ ಸಾಕ್ಷಿಯಾದರೆ ತನ್ನನ್ನು ಅಪರಾಧದಿಂದ ಮುಕ್ತಗೊಳಿಸಿ ಕ್ಷಮಾಧಾನ ಮಾಡುತ್ತಾನೆ. ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಸುಳ್ಳು ಹೇಳುವ ಸಾಧ್ಯತೆಯುಂಟು. ಅಂಥವನ ಮಾತನ್ನು ನಂಬುವುದೆಂತು? ಆದ್ದರಿಂದ ಅವನ ಮಾತು ನಿಜ ಎನ್ನಬೇಕಾದರೆ ಬೇರೆ, ಸ್ವತಂತ್ರ, ನಿರ್ಭೀತ, ಆಸೆ- ಆಮಿಷಗಳಿಗೆ ಬಲಿಯಾಗದ ಸಾಕ್ಷಿ ನ್ಯಾಯಾಲಯದಲ್ಲಿ ಸಾಕ್ಷ ನೀಡಬೇಕು. ಇದು ಭಾರತೀಯ ಸಾಕ್ಷಸಂಹಿತೆ(indian evidence act). ಶಾಸನನದ ಪ್ರಕಾರ ಈ ಆರೋಪಿಗಳ ಮೇಲಿದ್ದ ಅಪರಾಧವನ್ನು ಋಜುವಾತು ಮಾಡಲು ಬೇಕಾದ ಪ್ರತಿಯೊಂದು ಕೊಂಡಿಯನ್ನೂ ಜೋಡಿಸಿ ಘಟನಾವಳಿಯ ಸರಪಳಿಯನ್ನು ಪೂರ್ಣಗೊಳಿಸಬೇಕು. ಈ ಕರ್ತವ್ಯವನ್ನು ಸರಕಾರ ಸಮರ್ಥವಾಗಿಯೇ ನೆರವೇರಿಸಿತ್ತು. ಅದಕ್ಕಾಗಿ 149 ಸಾಕ್ಷಿಗಳನ್ನು ವಿಚಾರಣೆ ಮಾಡಲಾಯಿತು. ವಿಚಾರಣೆ ಪ್ರಾರಂಭವಾದದ್ದು 27-5-1948. ಸಾಕ್ಷಿಗಳ ಹೇಳಿಕೆಯನ್ನು 24-6-48ರಿಂದ 6-11-48ರವರೆಗೆ ದಾಖಲಿಸಲಾಯಿತು. ಆ ಸಾಕ್ಷಿಗಳ ಹೇಳಿಕೆ ಒಟ್ಟು 720 ಪುಟಗಳಷ್ಟು ದೀರ್ಘವಾಗಿತ್ತು. ಅವರ ಸಾಕ್ಷಕ್ಕೆ ಆಧಾರವಾದ 404 ದಸ್ತಾವೇಜುಗಳನ್ನು ಅಗತ್ಯವಾದ ವಸ್ತುಗಳನ್ನು (ಪಿಸ್ತೂಲು, ಮುದ್ದುಗುಂಡು, ರಕ್ತಸಿಕ್ತ ಬಟ್ಟೆಗಳು, ಕಾಡತೂಸು ಇತ್ಯಾದಿ) ನ್ಯಾಯಾಲಯದಲ್ಲಿ ಸಾದರಪಡಿಸಲಾಗಿತ್ತು.
 ಇಷ್ಟೆಲ್ಲ ಸಾಕ್ಷವನ್ನು ನ್ಯಾಯಾಲಯಕ್ಕೆ ಒದಗಿಸಿದ ಮೇಲೆ, ಶಾಸನಾನುಸಾರ ಆರೋಪಿಗಳ ಹೇಳಿಕೆಯನ್ನೂ ನ್ಯಾಯಾಧೀಶರು ದಾಖಲಿಸಿಕೊಳ್ಳಬೇಕು. ಆಪ್ಟೆ, ಗೋಡ್ಸೆ, ಕರ್ಕರೆ, ಸಾವರ್ಕರ್‌ರ ಆಶೀರ್ವಾದ ಪಡೆಯಲು ಸಾವರ್ಕರ್ ಸದನಕ್ಕೆ ಹೋಗಿದ್ದರೆಂದು ಸಾಕ್ಷಿಗಳು ಹೇಳಿದ್ದರು. ಈ ಅಂಶವನ್ನು ಆರೋಪಿಗಳ ಗಮನಕ್ಕೆ ತಂದು ಅದಕ್ಕೆ ಅವರೇನು ಹೇಳುತ್ತಾರೆಂಬುದನ್ನು ಕೇಳಿ ದಾಖಲಿಸಿಕೊಳ್ಳಬೇಕು. ಆಪ್ಟೆ, ಗೋಡ್ಸೆ ದಿಲ್ಲಿಯಲ್ಲಿ ಮೆರಿನಾ ಹೊಟೇಲಿನಲ್ಲಿ ತಂಗಿದ್ದರೆಂದು ಹೊಟೇಲ್ ಗುಮಾಸ್ತ ಹೇಳಿದ್ದ. ಅದು ನಿಜವೇ? ಅದಕ್ಕೆ ಆರೋಪಿಗಳು ಏನು ಹೇಳುತ್ತಾರೆ ಎಂಬುದನ್ನು ಕೇಳಿ ಉತ್ತರವನ್ನು ಬರೆದುಕೊಳ್ಳಬೇಕು. ಹೀಗೆ 149 ಸಾಕ್ಷಿಗಳು ಹೇಳಿದ ಮುಖ್ಯಾಂಶಗಳನ್ನು ಸಂಬಂಧಿಸಿದ ಆರೋಪಿಗಳ ಗಮನಕ್ಕೆ ತಂದು ಅವರ ಹೇಳಿಕೆಯನ್ನು ದಾಖಲು ಮಾಡಲು ನ್ಯಾಯಾಧೀಶರಿಗೆ ಎರಡು ವಾರ ಹಿಡಿಯಿತು (ದಿನಾಂಕ 8-11-48ರಿಂದ 22-11-48ರವರೆಗೆ). ಆರೋಪಿಗಳು ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುವುದಲ್ಲದೆ, ಲಿಖಿತ ಹೇಳಿಕೆಯನ್ನೂ ಕೊಡಬಹುದಾಗಿತ್ತು. ಹಾಗೆ ಸಾವರ್ಕರ್‌ರು, ಶಂಕರ ಕ್ರಿಸ್ಟಯ್ಯ ಕೊಟ್ಟಿದ್ದರು. ಶಂಕರ ಕ್ರಿಸ್ಟಯ್ಯನ ಲಿಖಿತ ಹೇಳಿಕೆ 297 (ಇನ್ನೂರ ತೊಂಬತ್ತೇಳು) ಪುಟಗಳು! ಸಾವರ್ಕರ್‌ರ ಲಿಖಿತ ಹೇಳಿಕೆ 57 ಪುಟಗಳು. ಮೊದಲನೇ ಆರೋಪಿಯ ಹೇಳಿಕೆ ನೂರಾರು ಪುಟಗಳು. ಅದನ್ನು ಓದಲು ಐದು ಗಂಟೆ ಹಿಡಿಯಿತು. ಅದರ ಸಾರಾಂಶವನ್ನು ನ್ಯಾಯಾಮೂರ್ತಿ ಜಿ. ಡಿ. ಖೋಷ್ಲಾ ತಮ್ಮ ಗ್ರಂಥದಲ್ಲಿ ಹೀಗೆ ಸಂಗ್ರಹಿಸಿದ್ದಾರೆ:

‘‘ನಾನು ಶ್ರದ್ಧಾನಿಷ್ಠೆಯ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದವನಾ ದ್ದರಿಂದ ಹಿಂದೂ ಧರ್ಮವನ್ನು ಸಹಜವಾಗಿಯೆ ಪೂಜ್ಯ ಬುದ್ಧಿಯಿಂದ ಕಾಣುತ್ತಾ ಬಂದೆ. ಹಿಂದುತ್ವದ ಬಗ್ಗೆ ನನಗೆ ಅಪಾರ ಹೆಮ್ಮೆಯುಂಟಾಗಿತ್ತು. ಆದಾಗ್ಯೂ ನಾನು ಬೆಳೆದಂತೆ, ಯಾವುದೇ ಮೂಢನಂಬಿಕೆ, ರಾಜಕೀಯ ಇಲ್ಲವೇ ಧಾರ್ಮಿಕ ಸಿದ್ಧಾಂತಗಳಿಂದ ಮುಕ್ತವಾದ ಮುಕ್ತ ಚಿಂತನೆಯನ್ನು ಬೆಳೆಸಿಕೊಂಡೆ. ಆದ್ದರಿಂದಲೇ ಜಾತಿಪದ್ಧತಿ ಮತ್ತು ಅಸ್ಪಶ್ಯತೆಯ ನಿರ್ಮೂಲನಕ್ಕೆ ಹುಟ್ಟಿನಿಂದಲೂ ಸಕ್ರಿಯವಾಗಿ ಕೆಲಸಮಾಡಿದೆ. ಬಹಿರಂಗವಾಗಿಯೇ ಜಾತಿವಿರೋಧಿ ಚಳವಳಿಯಲ್ಲಿ ಭಾಗವಹಿಸಿದೆ. ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಕೇವಲ ಹುಟ್ಟಿನಿಂದಲೇ, ವೃತ್ತಿಯಿಂದಲೇ ಉಚ್ಚ-ನೀಚ ಎಂಬ ಭೇದಭಾವವಿಲ್ಲದೆ ಅವರವರ ಅರ್ಹತೆಯ ಆಧಾರದ ಮೇಲೆ ಸಮಾನ ಸ್ಥಾನಮಾನ ಇರಬೇಕೆಂದು ಪ್ರತಿಪಾದಿಸಿದೆ. ಜಾತಿ ವಿರೋಧಿ ಸಹಪಂಕ್ತಿ ಭೋಜನಕೂಟದಲ್ಲಿ ಸಹಸ್ರಾರು ಹಿಂದೂಗಳು, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಚಮ್ಮಾರರು, ಭಂಗಿಗಳು ಜೊತೆ ಬಹಿರಂಗವಾಗಿಯೇ ಭಾಗವಹಿಸಿ ಜಾತಿ ಕಟ್ಟಳೆಯನ್ನು ಧಿಕ್ಕರಿಸಿದೆ. ದಾದಾಭಾಯಿ ನವರೋಜಿ, ವಿವೇಕಾನಂದ, ಗೋಖಲೆ, ತಿಲಕ್ ಮುಂತಾದವರ ಗ್ರಂಥಗಳನ್ನು ಓದಿದೆ... ಅಷ್ಟೇ ಅಲ್ಲ, ಪ್ರಚಲಿತ ಸೋಷಿಯಲಿಸಂ ಮತ್ತು ಕಮ್ಯುನಿಸಂ ಸಿದ್ಧಾಂತಗಳನ್ನು ಚೆನ್ನಾಗಿಯೇ ಅಭ್ಯಾಸ ಮಾಡಿದೆ. ಆದರೆ ಇವೆಲ್ಲವುಗಳಿಂದ ಮೇಲಾಗಿ ವೀರ ಸಾವರ್ಕರ್ ಮತ್ತು ಗಾಂಧೀಜಿ ಬರೆದದ್ದನ್ನು, ಹೇಳಿದ್ದನ್ನು ಆಳನಾಗಿ ನಿಷ್ಠೆಯಿಂದ ಅಭ್ಯಾಸಮಾಡಿದೆ. ಯಾಕೆಂದರೆ ಇಬ್ಬರು ಆದರ್ಶಪುರುಷರು ಕಳೆದ ಐವತ್ತು ವರ್ಷಗಳಿಂದ, ಇತರ ಯಾವ ಅಂಶಕ್ಕಿಂತ ಹೆಚ್ಚಾಗಿ ಆಧುನಿಕ ಭಾರತದ ಚಿಂತನೆ ಮತ್ತು ಕ್ರಿಯಾಶಕ್ತಿಯನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಎಲ್ಲಾ ಗ್ರಂಥಾಧ್ಯಯನ ಮತ್ತು ಚಿಂತನೆಯ ಫಲವಾಗಿ ಎಲ್ಲಕ್ಕಿಂತ ಮಿಗಿಲಾಗಿ ಹಿಂದುತ್ವ ಮತ್ತು ಹಿಂದೂ ಜನರ ಸೇವೆ ಮಾಡುವುದೇ ದೇಶಪ್ರೇಮಿಯಾಗಿ, ಮಾನವೀಯತೆಯ ದೃಷ್ಟಿಯಿಂದ ನನ್ನ ಪ್ರಥಮ ಕರ್ತವ್ಯವೆಂಬ ನಂಬಿಕೆ ನನ್ನಲ್ಲಿ ಉಂಟಾಯಿತು... ಈ ಬಲವಾದ ನಂಬುಗೆಯೇ ಹಿಂದೂ ಸಂಘಟಕರ ಆದರ್ಶ ಮತ್ತು ಕಾರ್ಯಕ್ರಮಗಳತ್ತ ನನ್ನನ್ನು ಸಹಜವಾಗಿಯೇ ಸೆಳೆಯಿತು. ಅದೊಂದೇ ನನ್ನ ಮಾತೃಭೂಮಿ ಹಿಂದೂಸ್ಥಾನದ ಸ್ವಾತಂತ್ರವನ್ನು ಪಡೆಯಲು ಮತ್ತು ರಕ್ಷಿಸಲು ಹಾಗೂ ಭಾರತ ಮಾನವ ಸೇವೆ ಮಾಡಲು ಏಕಮೇವಮಾರ್ಗ ಎಂಬುದು ನನ್ನ ನಂಬಿಕೆಯಾಯಿತು.
1946 ಅಥವಾ ಅದರ ಎಡಬಲ ಸುಹ್ರವರ್ದಿ ಕೃಪಾಪೋಷಿತ ಸರಕಾರದ ನೇತೃತ್ವದಲ್ಲಿ ನವಖಾಲಿಯಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ಅಮಾನವೀಯ ಅತ್ಯಾಚಾರಗಳನ್ನು ಎಸಗಿದ್ದುದನ್ನು ಕಂಡು ನನ್ನ ರಕ್ತ ಕುದಿಯಿತು. ನಮ್ಮ ನಿರ್ಲಜ್ಜತನ ಮತ್ತು ರೋಷ ಎಲ್ಲೆ ಮೀರಿತು ಹಾಗೂ ಅಂಥ ಸುಹ್ರವರ್ದಿಯನ್ನು ಬೆಂಬಲಿಸಲು ಗಾಂಧೀಜಿ ಮುಂದಾಗಿ, ಅವರನ್ನು ‘ಷಹೀದ್ ಸಾಹೇಬ್’ (ಹುತಾತ್ಮರೆಂದು) ಕೊಂಡಾಡಿದ್ದುದನ್ನು ಕಂಡೆ.

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News

ಜಗದಗಲ
ಜಗ ದಗಲ