ಧೋನಿಗೆ ಪಂದ್ಯಶುಲ್ಕದಲ್ಲಿ ಶೇ.50 ದಂಡ

Update: 2019-04-12 18:37 GMT

ಜೈಪುರ, ಎ.12: ರಾಜಸ್ಥಾನ ರಾಯಲ್ಸ್ ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದ ವೇಳೆ ಅಂಪೈರ್ ಅವರೊಂದಿಗೆ ವಾಗ್ವಾದ ನಡೆಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನಿಷೇಧದಿಂದ ಪಾರಾಗಿದ್ದು ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ಪಾವತಿಸಬೇಕಾಗಿದೆ.

ಅತ್ಯಂತ ಅಪರೂಪದ ಸನ್ನಿವೇಶದಲ್ಲಿ ತಾಳ್ಮೆಯನ್ನು ಕಳೆದುಕೊಂಡ ಧೋನಿ ನೋ-ಬಾಲ್ ವಿಚಾರಕ್ಕೆ ಸಂಬಂಧಿಸಿ ಅಂಪೈರ್ ಉಲ್ಲಾಸ್ ಗಾಂಧೆ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.

‘‘ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುರುವಾರ ರಾತ್ರಿ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿಗೆ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ಹೇರಲಾಗಿದೆ’’ ಎಂದು ಬಿಸಿಸಿಐ ತಿಳಿಸಿದೆ.

  ಚೆನ್ನೈ ತಂಡಕ್ಕೆ ಅಂತಿಮ ಓವರ್‌ನಲ್ಲಿ ಗೆಲ್ಲಲು 18 ರನ್ ಅಗತ್ಯವಿತ್ತು. ರಾಜಸ್ಥಾನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಎಸೆದ ಕೊನೆಯ ಓವರ್‌ನ ಮೊದಲ ಎಸೆತವನ್ನು ರವೀಂದ್ರ ಜಡೇಜ ಸಿಕ್ಸರ್‌ಗೆ ಅಟ್ಟಿದರು. 2ನೇ ಎಸೆತ ನೋ-ಬಾಲ್ ಆಗಿತ್ತು. ಫ್ರೀ-ಹಿಟ್ ಪಡೆದ ಧೋನಿ ಎರಡು ರನ್ ಗಳಿಸಲು ಸಫಲರಾದರು. 3ನೇ ಎಸೆತದಲ್ಲಿ ಯಾರ್ಕರ್‌ನ ಮೂಲಕ ಧೋನಿಯನ್ನು ಸ್ಟೋಕ್ಸ್ ಕ್ಲೀನ್‌ಬೌಲ್ಡ್ ಮಾಡಿದರು. ಸ್ಟೋಕ್ಸ್ ಕೊನೆಯ ಓವರ್‌ನ ನಾಲ್ಕನೇ ಎಸೆತವನ್ನು ಅತ್ಯಂತ ಎತ್ತರದಿಂದ ಎಸೆದಂತೆ ಕಂಡು ಬಂದ ಕಾರಣ ಅಂಪೈರ್ ಉಲ್ಲಾಸ್ ಅದನ್ನು ನೋ-ಬಾಲ್ ಎಂದು ಪರಿಗಣಿಸಲು ಮುಂದಾದರು. ಆದರೆ, ಸ್ಕ್ವಾರ್‌ಲೆಗ್‌ನಲ್ಲಿ ನಿಂತಿದ್ದ ಅಂಪೈರ್ ಬ್ರೂಸ್ ಆಕ್ಸನ್‌ಫೋರ್ಡ್ ಅದು ನೋ-ಬಾಲ್ ಅಲ್ಲ ಎಂದು ಹೇಳಿದರು. ಆಗ ನಾನ್‌ಸ್ಟ್ರೈಕ್‌ನಲ್ಲಿದ್ದ ರವೀಂದ್ರ ಜಡೇಜಗೆ ಗೊಂದಲ ಉಂಟಾಗಿ ತಕ್ಷಣವೇ ಅಂಪೈರ್‌ರೊಂದಿಗೆ ವಾಗ್ವಾದಕ್ಕಿಳಿದರು. ಸ್ನಾಯು ಸೆಳೆತದಿಂದಾಗಿ ಕೊನೆಯ 2 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಪರದಾಟ ನಡೆಸಿ ಪೆವಿಲಿಯನ್‌ನತ್ತ ಮುಖ ಮಾಡಿದ್ದ ಧೋನಿ ಕೂಡ ಅಂಪೈರ್ ಉಲ್ಲಾಸ್‌ರೊಂದಿಗೆ ವಾಗ್ವಾದಕ್ಕಿಳಿದರು. ಆದರೆ, ಒಕ್ಸೆನ್‌ಫೋರ್ಡ್ ತನ್ನ ತೀರ್ಪಿಗೆ ಅಂಟಿಕೊಂಡು, ಅದು ನೋ-ಬಾಲ್ ಆಗಿರಲಿಲ್ಲ ಎಂದರು. 20ನೇ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಚೆನ್ನೈನ ಮಿಚೆಲ್ ಸ್ಯಾಂಟ್ನರ್ 152 ರನ್ ಗುರಿ ಯಶಸ್ವಿಯಾಗಿ ಚೇಸ್ ಮಾಡಿ ತಂಡಕ್ಕೆ 4 ವಿಕೆಟ್‌ಗಳ ಗೆಲುವು ತಂದರು.

 ಬೆನ್ ಸ್ಟೋಕ್ಸ್ ‘ಕೂಲ್ ಕ್ಯಾಪ್ಟನ್’ ಖ್ಯಾತಿಯ ಧೋನಿಗೆ ಸಮಾಧಾನಪಡಿಸಲು ಯತ್ನಿಸಿದರು. ಸಾಮಾನ್ಯವಾಗಿ ಮೈದಾನದಲ್ಲಿ ಯಾವತ್ತೂ ತಾಳ್ಮೆ ಕಳೆದುಕೊಳ್ಳದ ಧೋನಿ ತುಂಬಾ ಕೆರಳಿದಂತೆ ಕಂಡುಬಂದರು. ಐಸಿಸಿ ನೀತಿ ಸಂಹಿತೆಯ ಪ್ರಕಾರ ಅಂಪೈರ್ ನಿರ್ಧಾರಕ್ಕೆ ಮಾತು ಅಥವಾ ವರ್ತನೆಯ ಮೂಲಕ ಆಟಗಾರ ಗಂಭೀರ ಅಸಮ್ಮತಿ ವ್ಯಕ್ತಪಡಿಸಿದರೆ ಗರಿಷ್ಠ ಒಂದು ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯಗಳಿಂದ ನಿಷೇಧ ಎದುರಿಸಬೇಕಾಗುತ್ತದೆ. ಐಪಿಎಲ್‌ನಲ್ಲಿ ಐಸಿಸಿ ನಿಯಮ ಅನ್ವಯವಾಗುತ್ತದೆ. ಆದಾಗ್ಯೂ ಧೋನಿ ನಿಷೇಧದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News