100 ಪಂದ್ಯಗಳನ್ನು ಜಯಿಸಿದ ಮೊದಲ ನಾಯಕ ಧೋನಿ

Update: 2019-04-12 18:51 GMT

ಚೆನ್ನೈ, ಎ.12: ಎಂ.ಎಸ್.ಧೋನಿ ಹಾಗೂ ದಾಖಲೆಗಳು ಜೊತೆಜೊತೆಯಾಗಿ ಸಾಗುತ್ತಿವೆ. ಗುರುವಾರ 37 ವರ್ಷದ ಧೋನಿ ಐಪಿಎಲ್ ಇತಿಹಾಸದಲ್ಲಿ 100 ಪಂದ್ಯಗಳನ್ನು ಜಯಿಸಿದ ಮೊದಲ ನಾಯಕ ಎನಿಸಿಕೊಂಡರು.

ರಾಜಸ್ಥಾನ ರಾಯಲ್ಸ್ ವಿರುದ್ಧ ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತ್ತು. ಇದು ಐಪಿಎಲ್‌ನಲ್ಲಿ ಧೋನಿ ಆಡಿದ ಒಟ್ಟು 166ನೇ ಪಂದ್ಯವಾಗಿದ್ದು, ವಿಕೆಟ್ ಕೀಪರ್ ದಾಂಡಿಗನ ಶತಕ ಜಯದ ದಾಖಲೆಗೆ ಸಾಕ್ಷಿಯಾಯಿತು.

 129 ಪಂದ್ಯಗಳ ಪೈಕಿ 71 ಪಂದ್ಯಗಳಲ್ಲಿ ಜಯ ಕಂಡ ಗೌತಮ್ ಗಂಭೀರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

2019ರ ಲೀಗ್‌ನಲ್ಲಿ ಧೋನಿ ಉತ್ತಮ ಲಯದಲ್ಲಿ ತೇಲಾಡುತ್ತಿದ್ದಾರೆ. ಗುರುವಾರದ ಪಂದ್ಯದಲ್ಲಿ ಕೂಡ 43 ಎಸೆತಗಳಲ್ಲಿ 58 ರನ್ ಚಚ್ಚಿದ ಅವರು ತಮ್ಮ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ಆವೃತ್ತಿಯಲ್ಲಿ ಇದುವರೆಗೆ ಆಡಿರುವ 6 ಪಂದ್ಯಗಳಿಂದ ಅವರು 200 ರನ್ ಸೇರಿಸಿದ್ದಾರೆ. ಆ ಪೈಕಿ ಮೂರು ಪಂದ್ಯಗಳಲ್ಲಿ ಅಜೇಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News