ವಿಟಾಮಿನ್ ಸಿ ಕೊರತೆಯನ್ನು ಸೂಚಿಸುವ ಲಕ್ಷಣಗಳು

Update: 2019-04-13 13:19 GMT

ಆರೋಗ್ಯಕರ ತ್ವಚೆಗಾಗಿ ವಿಟಾಮಿನ್ ಸಿ ಅತ್ಯಗತ್ಯವಾಗಿದೆ. ಹೆಚ್ಚಿನ ತ್ವಚೆ ರಕ್ಷಣೆ ಉತ್ಪನ್ನಗಳು ವಿಟಾಮಿನ್ ಸಿ ಸಮೃದ್ಧವಾಗಿರುವ ಲಿಂಬೆ ಅಥವಾ ಕಿತ್ತಳೆಯನ್ನು ಒಳಗೊಂಡಿರುತ್ತವೆ ಎನ್ನುವುದನ್ನು ನೀವು ಗಮನಿಸಿರಬಹುದು. ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಗೆ ಹಾನಿಯುಂಟಾಗದಂತೆ ರಕ್ಷಿಸಲು ವಿಟಾಮಿನ್ ಸಿ ನೆರವಾಗುತ್ತದೆ. ಅದು ತ್ವಚೆಯನ್ನು ಕೋಮಲವಾಗಿರಿಸುತ್ತದೆ. ವಿಟಾಮಿನ್ ಸಿ ಕೊರತೆಯುಂಟಾದರೆ ಚರ್ಮವು ಒಣಗುತ್ತದೆ ಮತ್ತು ಹಾನಿಗೊಳಗಾಗುತ್ತದೆ. ಈ ವಿಟಾಮಿನ್‌ನ ಕೊರತೆಯನ್ನು ಸೂಚಿಸುವ ಲಕ್ಷಣಗಳು ಇಲ್ಲಿವೆ....

► ವಸಡುಗಳಲ್ಲಿ ರಕ್ತಸ್ರಾವ

ವಸಡುಗಳಲ್ಲಿ ರಕ್ತಸ್ರಾವ ವಿಟಾಮಿನ್ ಸಿ ಕೊರತೆಯನ್ನು ಸೂಚಿಸುವ ಲಕ್ಷಣಗಳಲ್ಲೊಂದಾಗಿದೆ ಎಂದರೆ ನಿಮಗೆ ಅಚ್ಚರಿಯುಂಟಾಗಬಹುದು. ಈ ವಿಟಾಮಿನ್ ಕೊರತೆಯಿಂದ ವಸಡುಗಳಲ್ಲಿ ಊತವೂ ಕಾಣಿಸಿಕೊಳ್ಳಬಹುದು. ಕೊರತೆ ತೀವ್ರವಾಗಿದ್ದರೆ ಸುದೀರ್ಘ ಕಾಲ ವಸಡುಗಳ ಅನಾರೋಗ್ಯದಿಂದ ಹಲ್ಲುಗಳು ಸಡಿಲಗೊಳ್ಳುತ್ತವೆ.

►ತೂಕ ಹೆಚ್ಚಳ

ಇದು ವಿಟಾಮಿನ್ ಸಿ ಕೊರತೆಯ ಇನ್ನೊಂದು ಲಕ್ಷಣವಾಗಿದೆ. ಕಾರಣವಿಲ್ಲದೆ ನಿಮ್ಮ ಶರೀರದ ತೂಕ ಏಕಾಏಕಿ ಹೆಚ್ಚತೊಡಗಿದರೆ ಅದಕ್ಕೆ ವಿಟಾಮಿನ್ ಸಿ ಕೊರತೆಯು ಕಾರಣವಾಗಿರಬಹುದು.ವಿಟಾಮಿನ್ ಸಿ ಕೊರತೆಯಿಂದ ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.

►ದುರ್ಬಲ ನಿರೋಧಕ ಶಕ್ತಿ

ವಿಟಾಮಿನ್ ಸಿ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಅನಾರೋಗ್ಯಕ್ಕೆ ಕಾರಣವಾಗಬಹುದು. ಸೋಂಕುಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳ ಉತ್ಪಾದನೆಯನ್ನು ವಿಟಾಮಿನ್ ಸಿ ಉತ್ತೇಜಿಸುತ್ತದೆ. ಹೀಗಾಗಿ ಆಗಾಗ್ಗೆ ಅನಾರೋಗ್ಯಕ್ಕೆ ಗುರಿಯಾಗುವುದನ್ನು ತಪ್ಪಿಸಲು ಸೂಕ್ತ ಪ್ರಮಾಣದಲ್ಲಿ ವಿಟಾಮಿನ್ ಸಿ ನಮ್ಮ ಶರೀರಕ್ಕೆ ದೊರೆಯುವಂತೆ ನೋಡಿಕೊಳ್ಳುವದು ಅಗತ್ಯವಾಗಿದೆ.

► ಸುಸ್ತು ಮತ್ತು ಬಳಲಿಕೆ

ವಿಟಾಮಿನ್ ಸಿ ನಮ್ಮ ಮೂಡ್ ಅನ್ನು ಹೆಚ್ಚಿಸುತ್ತದೆ ಮತ್ತು ಉತ್ಸಾಹಿಗಳನ್ನಾಗಿ ಇರಿಸುತ್ತದೆ. ಸುಸ್ತು ಮತ್ತು ಬಳಲಿಕೆ ವಿಟಾಮಿನ್ ಸಿ ಕೊರತೆಯನ್ನು ಸೂಚಿಸುವ ಆರಂಭಿಕ ಲಕ್ಷಣಗಳಾಗಿವೆ. ಇವು ಅನೇಕ ರೋಗಗಳ ಸಾಮಾನ್ಯ ಲಕ್ಷಣಗಳಾಗಿದ್ದರೂ ವಿಟಾಮಿನ್ ಸಿ ಕೊರತೆಯನ್ನು ಸೂಚಿಸುವ ಅತ್ಯಂತ ಪ್ರಮುಖ ಲಕ್ಷಣಗಳಲ್ಲಿ ಸೇರಿವೆ.

► ಗಾಯಗಳ ನಿಧಾನ ಗುಣವಾಗುವಿಕೆ

ವಿಟಾಮಿನ್ ಸಿ ಸೇವನೆಯು ಕಡಿಮೆಯಾದರೆ ಅದು ಗಾಯಗಳು ಗುಣವಾಗುವಂತೆ ಮಾಡುವ ಕೊಲಾಜೆನ್ ಉತ್ಪತ್ತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ವಿಟಾಮಿನ್ ಸಿ ಕೊರತೆಯುಂಟಾದಾಗ ಗಾಯಗಳು ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ,ಅಲ್ಲದೆ ಸೋಂಕುಗಳು ಮತ್ತು ರೋಗಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಯು ಹೆಚ್ಚಾಗುತ್ತದೆ.

ವಿಟಾಮಿನ್ ಸಿ ಸಮೃದ್ಧವಾಗಿರುವ ಆಹಾರಗಳು: ಲಿಂಬೆ,ಕಿತ್ತಳೆ,ದ್ರಾಕ್ಷಿ,ಕಿವಿ,ಅನಾನಸ್,ಸ್ಟ್ರಾಬೆರಿ,ಸೀಬೆಹಣ್ಣು, ಬಸಳೆ,ಬ್ರಾಕೊಲಿ ಮತ್ತು ಪಪ್ಪಾಯ ಇವು ವಿಟಾಮಿನ್ ಸಿ ಪಡೆಯಲು ಕೆಲವು ಉತ್ತಮ ಮೂಲಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News