ಎಟಿಎಮ್‌ಗಳು ಮುಚ್ಚುವುದಿಲ್ಲ,ಆದರೆ ಹಣವನ್ನು ಹಿಂದೆಗೆದುಕೊಳ್ಳುವುದು ದುಬಾರಿಯಾಗಬಹುದು

Update: 2019-04-13 13:28 GMT

ಆರ್‌ಬಿಐನ ಹೆಚ್ಚುವರಿ ನಿಯಮಗಳ ಪಾಲನೆಯಿಂದಾಗಿ ಕಾರ್ಯಾಚರಣೆ ವೆಚ್ಚಗಳಲ್ಲಿ ಏರಿಕೆಯಾಗಿರುವುದರಿಂದ ಎಟಿಎಮ್‌ಗಳ ನಿರ್ವಹಣೆ ಲಾಭದಾಯಕವಾಗುಳಿದಿಲ್ಲ,ಹೀಗಾಗಿ ಮಾರ್ಚ್ 2019ರ ವೇಳೆಗೆ ದೇಶದಲ್ಲಿಯ ಶೇ.50 ರಷ್ಟು ಎಟಿಎಮ್‌ಗಳನ್ನು ಮುಚ್ಚುವುದಾಗಿ ಎಟಿಎಂ ಉದ್ಯಮವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಹೇಳಿತ್ತು.

ಎಟಿಎಮ್‌ಗಳಿಗೆ ಸಂಬಂಧಿಸಿದಂತೆ ಮಾರ್ಚ್ ತಿಂಗಳಿನ ಅಂಕಿಅಂಶಗಳು ಇನ್ನೂ ಹೊರಬಂದಿಲ್ಲವಾದರೂ, ಎಟಿಎಮ್‌ಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆಗೊಳಿಸುವ ಸಾಧ್ಯತೆಗಳು ಇದ್ದಂತಿಲ್ಲ,ಆದರೆ ಬ್ಯಾಂಕ್ ಗ್ರಾಹಕರು ಎಟಿಎಮ್‌ಗಳಿಂದ ಹಣವನ್ನು ಹಿಂದೆಗೆದುಕೊಳ್ಳಲು ಕಂಪನಿಗಳು ವಿಧಿಸುತ್ತಿರುವ ಶುಲ್ಕಗಳು ಹೆಚ್ಚಬಹುದು ಎಂದು ಕೆಲವು ವರದಿಗಳು ಸುಳಿವು ನೀಡಿವೆ.

ಭಾರತದಲ್ಲಿ ಮೂರು ಮಾದರಿಗಳಲ್ಲಿ ಎಟಿಎಮ್‌ಗಳನ್ನು ನಿಯೋಜಿಸಲಾಗಿದೆ. ಬ್ಯಾಂಕುಗಳೇ ಎಟಿಎಂ ಯಂತ್ರಗಳನ್ನು ಸ್ಥಾಪಿಸುವುದು ಮೊದಲ ಮಾದರಿಯಾದರೆ,ಬ್ಯಾಂಕುಗಳ ಪರವಾಗಿ ಖಾಸಗಿ ಕಂಪನಿಗಳು ಈ ಸೇವೆಯನ್ನು ನಿರ್ವಹಿಸುವುದು ಎರಡನೇ ಮಾದರಿಯಾಗಿದೆ. ಮೂರನೆಯ ಮಾದರಿ ಸಣ್ಣ ನಗರಗಳಿಗಾಗಿದೆ.

ಕಳೆದ ವರ್ಷದ ಜೂನ್‌ನಲ್ಲಿ ಎಟಿಎಂ ಯಂತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಬಿಗು ಭದ್ರತಾ ಕ್ರಮಗಳನ್ನು ಜಾರಿಗೊಳಿಸುವಂತೆ ಆರ್‌ಬಿಐ ಆದೇಶಿಸಿತ್ತು. ಸಾಫ್ಟ್‌ವೇರ್‌ಗಳ ಅಪ್‌ಡೇಟಿಂಗ್,ಎಟಿಎಮ್‌ಗಳಿಗೆ ನಗದು ಪೂರೈಸುವ ವಾಹನಗಳಿಗೆ ಹಾಗೂ ಯಂತ್ರಗಳಲ್ಲಿ ನೋಟುಗಳನ್ನು ಸಂಗ್ರಹಿಸಿಡಲಾಗುವ ಸ್ಲಾಟ್‌ಗಳಿಗೆ ಕೆಲವು ಭದ್ರತಾ ಮಾನದಂಡಗಳ ನಿಗದಿ ಈ ಕ್ರಮಗಳಲ್ಲಿ ಸೇರಿದ್ದವು. ಈ ಅಪ್‌ಡೇಟ್‌ಗಳನ್ನು ಮಾರ್ಚ್,2019ರೊಳಗೆ ಜಾರಿಗೊಳಿಸಬೇಕಿತ್ತು ಮತ್ತು ಈ ಬದಲಾವಣೆಗಳು ಹೆಚ್ಚುವರಿ ವೆಚ್ಚಕ್ಕೆ ಕಾರಣವಾಗಿದ್ದವು.

ನೋಟು ನಿಷೇಧ ಕ್ರಮದ ಬಳಿಕ ಎಟಿಎಂ ಕಂಪನಿಗಳ ಲಾಭದಲ್ಲಿ ಕುಸಿತವಾಗಿರುವುದನ್ನು ಪರಿಗಣಿಸಿದರೆ ಹೆಚ್ಚಿರುವ ಕಾರ್ಯಾಚರಣೆ ವೆಚ್ಚ ಅವುಗಳಿಗೆ ಹೊರೆಯಾಗಿದೆ ಮತ್ತು ಇದನ್ನು ಕಂಪನಿಗಳು ಅಥವಾ ಬ್ಯಾಂಕುಗಳು ಭರಿಸಬೇಕೇ ಎನ್ನುವ ಬಗ್ಗೆ ಯಾವುದೇ ಸಹಮತ ಮೂಡಿಲ್ಲ.

ಪ್ರತಿ ವಹಿವಾಟಿಗೆ ಎಟಿಎಂ ಕಂಪನಿಗಳು ವಿಧಿಸುವ ಶುಲ್ಕ ಅಥವಾ ಇಂಟರ್‌ಚೇಂಜ್ ಫೀ ಅನ್ನು ಪರಿಷ್ಕರಿಸುವಂತೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್‌ಪಿಸಿಐ) ವಿತ್ತ ಸಚಿವಾಲಯಕ್ಕೆ ಸಲಹೆ ನೀಡಿದೆ ಮತ್ತು ಕೆಲವು ಶಿಫಾರಸುಗಳನ್ನು ಮಾಡಿದೆ ಎಂದು ಎಟಿಎಂ ಕಂಪನಿಯೊಂದರ ಪ್ರಾದೇಶಿಕ ಆಡಳಿತ ನಿರ್ದೇಶಕರನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಎನ್‌ಪಿಸಿಐ ಮತ್ತು ವಿತ್ತ ಸಚಿವಾಲಯದ ನಡುವಿನ ಮಾತುಕತೆಗಳ ಫಲಿತಾಂಶಕ್ಕಾಗಿ ಕಾಯಬೇಕಿದೆಯಾದರೂ,ಬ್ಯಾಂಕುಗಳು ಹೆಚ್ಚುವರಿ ವೆಚ್ಚಗಳನ್ನು ಭರಿಸುತ್ತವೆ ಎಂದು ಎಟಿಎಂ ಕಂಪನಿಗಳು ಆಶಿಸಿವೆ.

ಇಂಟರ್‌ಚೇಂಜ್ ಫೀ ಶೇ.10ರಿಂದ 15ರಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಎಟಿಎಮ್‌ಗಳ ಸಂಖ್ಯೆಯಲ್ಲಿ ಇಳಿಕೆಯ ಕುರಿತು ಗ್ರಾಹಕರು ತಲೆ ಕೆಡಿಸಿಕೊಳ್ಳಬೇಕಿಲ್ಲ,ಆದರೆ ಇಂಟರ್‌ಚೇಂಜ್ ಫೀ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸುವ ನಿರ್ಧಾರವನ್ನು ಕೈಗೊಂಡರೆ ಎಟಿಎಮ್‌ಗಳಿಂದ ಹಣ ಹಿಂದೆಗೆತ ಹೆಚ್ಚು ದುಬಾರಿಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News