ಗೋವಾ: ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲ ಹಿಂಪಡೆಯಲು ಎಂಜಿಪಿ ನಿರ್ಧಾರ

Update: 2019-04-13 17:06 GMT

ಪಣಜಿ, ಎ.13: ಗೋವಾದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯಲು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ)ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.

ಲೋಕಸಭಾ ಚುನಾವಣೆ ಹಾಗೂ ಎಪ್ರಿಲ್ 23ರಂದು ನಡೆಯುವ ಮಪೂಸ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಪಕ್ಷದ ಅಧ್ಯಕ್ಷ ದೀಪಕ್ ಧಾವಳೀಕರ್ ಹೇಳಿದ್ದಾರೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಬಗ್ಗೆ ಒಂದಿಷ್ಟೂ ತಿಳುವಳಿಕೆಯಿಲ್ಲ. ಎಂಜಿಪಿಯನ್ನು ಒಡೆದು, ಹಿರಿಯ ಮುಖಂಡ ಸುದಿನ್ ಧಾವಿಳ್ಕರ್‌ರನ್ನು ಅನುಚಿತ ರೀತಿಯಲ್ಲಿ ಸಮ್ಮಿಶ್ರ ಸರಕಾರದಿಂದ ಉಚ್ಚಾಟಿಸಿರುವ ಬಿಜೆಪಿಗೆ ಬುದ್ಧಿ ಕಲಿಸಬೇಕಿದೆ. ಆದ್ದರಿಂದ ಉಪಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಪ್ರಚಾರ ಮಾಡುತ್ತಿದ್ದು ಬಲಿಷ್ಟ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ. ಕಾಂಗ್ರೆಸ್ ಕೂಡಾ ನಿಯಮ ಪಾಲಿಸದಿದ್ದರೆ ಇತರ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದವರು ಹೇಳಿದರು.

   ಎಂಜಿಪಿಯ ಮೂವರು ಶಾಸಕರಲ್ಲಿ ಇಬ್ಬರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 40 ಶಾಸಕ ಬಲದ ವಿಧಾನಸಭೆಯಲ್ಲಿ ಈಗ 36 ಸದಸ್ಯರಿದ್ದಾರೆ. ಇದೀಗ ಎಂಜಿಪಿಯ ಏಕೈಕ ಶಾಸಕ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ನೀಡಿದ ಬೆಂಬಲ ಹಿಂಪಡೆದರೆ ಬಿಜೆಪಿಯ ಬಲ 20ಕ್ಕೆ ಕುಸಿಯಲಿದೆ (14 ಶಾಸಕರುಳ್ಳ ಬಿಜೆಪಿ , ಗೋವಾ ಫಾರ್ವರ್ಡ್ ಪಕ್ಷದ 3 ಹಾಗೂ 3 ಪಕ್ಷೇತರರ ಬೆಂಬಲ ಪಡೆದಿದೆ). ಕಾಂಗ್ರೆಸ್ ಕೂಡಾ 14 ಶಾಸಕರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News