ಗೋಹತ್ಯೆಯ ಆರೋಪದಲ್ಲಿ ಹತ್ಯೆ: ತನಿಖೆಯ ದಾರಿ ತಪ್ಪಿಸಲು ಪೊಲೀಸರಿಂದ ಯತ್ನ - ಆರೋಪ

Update: 2019-04-13 17:51 GMT

ಜಾರ್ಖಂಡ್,ಎ.14: ಗೋಹತ್ಯೆ ಆರೋಪದಲ್ಲಿ ಓರ್ವನನ್ನು ಕೊಂದು, ಮೂವರನ್ನು ಗಂಭೀರವಾಗಿ ಗಾಯಗೊಳಿಸಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕೆಲವನ್ನು ಬಂಧಿಸಲಾಗಿದೆಯೆಂದು, ಆದರೆ ರಾಮನವಮಿಯಾದ ಕಾರಣ ಬಂಧಿತರ ಹೆಸರನ್ನು ಪ್ರಕಟಿಸಲಾಗುವುದಿಲ್ಲವೆಂದು ಸ್ಥಳೀಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಓ) ಯೂನಿಕಾ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಮಾರಕಾಯುಧಗಳಿಂದ ಥಳಿಸಲ್ಪಟ್ಟಿರುವುದರಿಂದ ಮೂವರು ಗಾಯಾಳುಗಳ ಭುಜ ಹಾಗೂ ಹೆಗಲಮೂಳೆಗೆ ಗಂಭೀರವಾದ ಪೆಟ್ಟಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ವಿಧಿವಿಧಾನವನ್ನು ಉಲ್ಲಂಘಿಸುವಂತೆ ಪೊಲೀಸರು ತನ್ನ ಮೇಲೆ ಒತ್ತಡ ಹೇರಿದ್ದರೆಂದು ಆರೋಗ್ಯಕೇಂದ್ರದ ವೈದ್ಯ ಡಾ.ರೋಶನ್ ಖಾಲ್ಕೊ ಆಪಾದಿಸಿದ್ದಾರೆ.

ನಿಯಮಾವಳಿಗಳ ಪ್ರಕಾರ ವ್ಯಕ್ತಿಯನ್ನು ಮೃತಪಟ್ಟ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದರೆ,ಮೊದಲು ಮರಣೋತ್ತರ ಪರೀಕ್ಷೆಯನ್ನು ನಡೆಸಬೇಕಾಗಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಮೃತನ ಹೆಸರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ನೋಂದಣಿ ಪಟ್ಟಿಯಲ್ಲಿ ದಾಖಲಿಸುವಂತೆ ಪೊಲೀಸರು ತನ್ನ ಮೇಲೆ ಒತ್ತಡ ಹೇರಿದ್ದರೆಂದು ಡಾ. ರೋಶನ್ ಆಪಾದಿಸಿದ್ದಾರೆ.

ಗೋಹತ್ಯೆಯ ಶಂಕೆಯಲ್ಲಿ ಉದ್ರಿಕ್ತ ಜನರ ಗುಂಪೊಂದು 35 ಮಂದಿ ಬುಡಕಟ್ಟು ಜನರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ, ಓರ್ವನನ್ನು ಹತ್ಯೆಗೈದು, ಇತರ ಮೂವರನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ವರದಿಯಾಗಿತ್ತು.

  ಜುರ್ಮೊ ಗ್ರಾಮದಲ್ಲಿ, ಬುಧವಾರ ಕುಜು ಎಂಬವರ 20 ವರ್ಷಗಳ ಮುದಿ ಎತ್ತು, ಅವರ ಗದ್ದೆಯಲ್ಲಿ ಸಾವನ್ನಪ್ಪಿತ್ತು. ಎತ್ತಿನ ಕಳೇಬರದ ಚರ್ಮವನ್ನು ಸುಲಿಯಲು 30 ಮಂದಿ ಗ್ರಾಮಸ್ಥರ ತಂಡವೊಂದು ಅವರ ಹೊಲಕ್ಕೆ ಆಗಮಿಸಿತ್ತು. ಕೆಲವೇ ನಿಮಿಷಗಳ ಬಳಿಕ ಸಲಾಕೆಗಳು ಹಾಗೂ ದೊಣ್ಣೆಗಳಿಂದ ಸಜ್ಜಿತವಾಗಿದ್ದ ಗುಂಪೊಂದು ಅಲ್ಲಿ ಧಾವಿಸಿ ಬಂದು, ಗೋಹತ್ಯೆಮಾಡಿದ್ದೀರೆಂದು ಆರೋಪಿಸಿ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿತು. ಆಗ ಅಲ್ಲಿದವರಲ್ಲಿ ಹೆಚ್ಚಿನವರು ಸ್ಥಳದಿಂದ ಪರಾರಿಯಾದರು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ನಾಲ್ವರನ್ನು ಹಲ್ಲೆನಡೆಸಿದ ತಂಡವೇ ಪೊಲೀಸ್ ಠಾಣೆಗೆ ಕೊಂಡೊಯ್ದಿತ್ತು. ನಾಲ್ವರು ಗಾಯಾಳುಗಳನ್ನು ಪೊಲೀಸರು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕೊಂಡೊಯ್ದರು. ಗಾಯಾಳುಗಳ ಪೈಕಿ ಪ್ರಕಾಶ್ ಲಾಕ್ರಾ ಎಂಬವರು ಸಾವನ್ನಪ್ಪಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದರು.

ಘಟನೆಯಲ್ಲಿ ಗಾಯಗೊಂಡ ಇತರ ಮೂವರನ್ನು ಪೀಟರ್ ಫುಲಿಜನ್ಸ್ (50), ಬೆಲಾಸುಸ್ ತಿರ್ಕೆ(60) ಹಾಗೂ ಜಾನ್‌ರಿಯುಶ್ ಮಿಂಝ್ (40) ಎಂದು ಗುರುತಿಸಲಾಗಿದೆ.

ಹಲ್ಲೆಗೊಳಗಾದವರೆಲ್ಲರೂ ಬುಡಕಟ್ಟು ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. .ಘಟನೆ ನಡೆದ ಎರಡು ದಿನಗಳ ಬಳಿಕ ಪೊಲೀಸರು, ಮೂವರು ಗಾಯಾಳುಗಋ ವಿರುದ್ಧ ಜಾನುವಾರು ಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಹಾಗೂ ಪ್ರಕಾಶ್ ಲಾಕ್ರಾ ಹತ್ಯೆಗೆ ಸಂಬಂಧಿಸಿ ಏಳು ಮಂದಿ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News