ಸೇನಾ ವರಿಷ್ಟರು ಬೆಂಬಲಿಸಿರುವುದಕ್ಕೆ ಇ-ಮೇಲ್‌ನಲ್ಲಿ ಪುರಾವೆಯಿದೆ : ಮೇ.ಜ. ಸುಧೀರ್ ವಂಬತ್‌ಕೆರೆ

Update: 2019-04-13 17:59 GMT

ಹೊಸದಿಲ್ಲಿ, ಎ.13: ಸಶಸ್ತ್ರ ಪಡೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸಿ ಮಾಜಿ ಸೇನಾ ವರಿಷ್ಟರು ರಾಷ್ಟ್ರಪತಿಗೆ ಪತ್ರ ಬರೆದ ಅಭಿಯಾನದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಹೇಳಿರುವ ಮೂವರು ಸೇನಾವರಿಷ್ಟರು ಪತ್ರಕ್ಕೆ ಬೆಂಬಲ ಸೂಚಿಸಿರುವುದಕ್ಕೆ ಇಮೇಲ್‌ನಲ್ಲಿ ಪುರಾವೆಯಿದೆ ಎಂದು ಈ ಅಭಿಯಾನದ ಮುಂಚೂಣಿಯಲ್ಲಿರುವ ನಿವೃತ್ತ ಸೇನಾಧಿಕಾರಿ ಹೇಳಿದ್ದಾರೆ.

ಈಗ ಅವರು ಯಾಕೆ ಭಿನ್ನ ಹೇಳಿಕೆ ನೀಡುತ್ತಿದ್ದಾರೋ ತಿಳಿಯದು. ಅವರಿಗೆ ಬಹುಷಃ ಅವರದ್ದೇ ಆದ ಕಾರಣ ಇರಬಹುದು ಮತ್ತು ಅದನ್ನು ನಾನು ಗೌರವಿಸುತ್ತೇನೆ. ಆದರೆ ನಾನು ಯಾವ ಸೇನಾ ವರಿಷ್ಟರಿಗೆ ಇ-ಮೇಲ್ ಕಳುಹಿಸಿದ್ದೇನೆಯೋ ಅದರ ಬಗ್ಗೆ ದಾಖಲೆ ನನ್ನಲ್ಲಿದೆ ಎಂದು ‘ರಾಷ್ಟ್ರಪತಿಗೆ ಪತ್ರ’ ಅಭಿಯಾನದ ಮುಂಚೂಣಿಯಲ್ಲಿರುವ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಸುಧೀರ್ ವಂಬತ್‌ಕೆರೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪತ್ರಕ್ಕೆ ಬೆಂಬಲ ನೀಡಿಲ್ಲ ಎಂದವರಲ್ಲಿ ವಾಯುಪಡೆಯ ಮಾಜಿ ಮುಖ್ಯಸ್ಥ , ಮಾಜಿ ಏರ್‌ಚೀಫ್ ಮಾರ್ಷಲ್ ಎನ್‌ಸಿ ಸೂರಿ ಹಾಗೂ ನಿವೃತ್ತ ಸೇನಾಧಿಕಾರಿ ಜ ಎಸ್‌ಎಫ್ ರಾಡ್ರಿಗಸ್ ಸೇರಿದ್ದಾರೆ. ಗುರುವಾರ ರಾಷ್ಟ್ರಪತಿಯವರಿಗೆ ಇಮೇಲ್ ಮಾಡುವ ಮುನ್ನ ಈ ಪತ್ರದ ವಿಷಯವನ್ನು ತನ್ನ ಗಮನಕ್ಕೆ ತಂದಿಲ್ಲ ಎಂಬ ಎನ್‌ಸಿ ಸೂರಿಯವರ ಹೇಳಿಕೆಯನ್ನೂ ಸುನಿಲ್ ತಳ್ಳಿಹಾಕಿದ್ದಾರೆ.

ಸೂರಿಗೆ ಕಳುಹಿಸಿದ ಇ-ಮೇಲ್‌ನಲ್ಲಿ ವಿಷಯ ಸ್ಪಷ್ಟವಾಗಿದೆ. ಅವರಿಗೊಬ್ಬರಿಗಷ್ಟೇ ಅಲ್ಲ, ಎಲ್ಲರಿಗೂ ಇದನ್ನು ಕಳುಹಿಸಿದ್ದೇನೆ ಎಂದು ಸುಧೀರ್ ಹೇಳಿದ್ದಾರೆ. ಅಲ್ಲದೆ ಇಂತಹ ಪತ್ರ ಬಂದಿಲ್ಲ ಎಂಬ ರಾಷ್ಟ್ರಪತಿ ಭವನದ ಹೇಳಿಕೆಯ ಬಗ್ಗೆಯೂ ಮೇಜರ್ ಜನರಲ್ ಸುಧೀರ್ ವಂಬತ್‌ಕೆರೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಪತ್ರವನ್ನು ಮೇಜರ್ ಪ್ರಿಯದರ್ಶಿನಿ ಚೌಧುರಿ ರಾಷ್ಟ್ರಪತಿ ಭವನದ ಮೂರು ಇ-ಮೇಲ್ ವಿಳಾಸಕ್ಕೆ ರವಾನಿಸಿದ್ದಾರೆ. ಆದರೂ ಸಿಕ್ಕಿಲ್ಲ ಎಂದು ಹೇಳಿರುವ ಬಗ್ಗೆ ನನಗೆ ಗೊಂದಲವಿದೆ ಎಂದವರು ಹೇಳಿದ್ದಾರೆ.

ಸಶಸ್ತ್ರ ಪಡೆಗಳು ರಾಜಕೀಯದಿಂದ ಹೊರತಾಗಿರಬೇಕು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯಂತೆ ಆಯ್ಕೆಯಾದ ಸರಕಾರದ ಮೂಲಕ ನಿರ್ವಹಿಸಲ್ಪಡಬೇಕು ಎಂಬ ವಿಷಯವನ್ನು ಮಾತ್ರ ಪತ್ರದಲ್ಲಿ ತಿಳಿಸಿದ್ದೇನೆ. ಬೇರ್ಯಾವುದೇ ವಿಷಯ ಇದರಲ್ಲಿ ಒಳಗೊಂಡಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮೋದಿಯ ಸೇನೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ವಾಯುಪಡೆಯ ಮಾಜಿ ಮುಖ್ಯಸ್ಥ ಎನ್‌ಸಿ ಸೂರಿ, ಈ ಬಗ್ಗೆ ತರ್ಕಸಮ್ಮತ ಹೇಳಿಕೆ ನೀಡುವ ಮುನ್ನ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ಆದರೂ, ಮೋದಿಯ ಸೇನೆ ಎಂದರೆ ಮೋದಿಗೆ ಮತ ಹಾಕಿದ ಅಭಿಮಾನಿಗಳ ಗುಂಪು ಎಂದೂ ಭಾವಿಸಬಹುದಾಗಿದೆ. ಅಲ್ಲದೆ, 2014ರಿಂದ ಮೋದಿ ಮುಖ್ಯ ಕಾರ್ಯನಿರ್ವಾಹಕರಾಗಿರುವ ಕಾರಣ ನಾವೆಲ್ಲಾ ಮೋದಿಯ ಸೇನೆಯೇ ಆಗಿದ್ದೇವೆ. ಸಶಸ್ತ್ರ ಪಡೆಗಳೂ ಇದಕ್ಕೆ ಹೊರತಾಗಿಲ್ಲ ಎಂದು ಸೂರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News