ಅಲಿ ಮತ್ತು ಬಜರಂಗಬಲಿ ಇಬ್ಬರೂ ನಮ್ಮವರು: ಮಾಯಾವತಿ

Update: 2019-04-13 18:01 GMT

 ಲಕ್ನೊ, ಎ.13: ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭ ಅಲಿ ಮತ್ತು ಬಜರಂಗಬಲಿ ವಿಷಯವನ್ನು ಕೆದಕಿರುವ ಬಿಜೆಪಿಯನ್ನು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಟೀಕಿಸಿದ್ದಾರೆ.

 ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಜೊತೆ ಬದೌನ್‌ನಲ್ಲಿ ಶನಿವಾರ ಜಂಟಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಜರಂಗಬಲಿ ದಲಿತ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ. ಬಜರಂಗಬಲಿಯ ಜಾತಿಯನ್ನು ತಿಳಿಸಿಕೊಟ್ಟಿರುವುದಕ್ಕೆ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಅಲಿ ಮತ್ತು ಬಜರಂಗಬಲಿ ಇಬ್ಬರೂ ನಮ್ಮವರೇ. ಅವರ ಆಶೀರ್ವಾದದಿಂದ ನಾವು ಗೆಲುವು ಸಾಧಿಸುತ್ತೇವೆ ಎಂದರು.

ಬಿಜೆಪಿ ಸರಕಾರದ ತಪ್ಪು ಕಾರ್ಯನೀತಿಯಿಂದ ಮೇಲ್ವರ್ಗದ ಜನತೆಯೂ ಅಸಮಾಧಾನಗೊಂಡಿದ್ದಾರೆ. ಈಗ ಅವರೆಲ್ಲಾ ನಮ್ಮೊಂದಿಗೆ ಸೇರಿಕೊಳ್ಳಲು ನಿರ್ಧರಿಸಿದ್ದಾರೆ. ಅಲಿ ಮತ್ತು ಬಜರಂಗಬಲಿಯನ್ನು ನಂಬುವ ಜನತೆ ಈಗ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷವನ್ನು ನಂಬದಿರಲು ನಿರ್ಧರಿಸಿದ್ದಾರೆ ಎಂದರು. ಬಿಜೆಪಿ ಸರಕಾರ ಜಾಹೀರಾತಿಗಾಗಿ ಸಾವಿರಾರು ಕೋಟಿ ರೂ. ಹಣವನ್ನು ವ್ಯಯಿಸುತ್ತಿದೆ ಎಂದು ಮಾಯಾವತಿ ಟೀಕಿಸಿದರು.

ಎಸ್ಪಿ, ಬಿಎಸ್ಪಿ ಮತ್ತು ಆರ್‌ಎಲ್‌ಡಿ ಮೈತ್ರಿಕೂಟಕ್ಕೆ ಭಾರೀ ಜನಬೆಂಬಲ ದೊರಕಿರುವುದು ಪ್ರಥಮ ಹಂತದ ಮತದಾನದ ಸಂದರ್ಭ ಸಾಬೀತಾಗಿದೆ. ತಳಮಟ್ಟದ ಮೈತ್ರಿಕೂಟದ ಯಶಸ್ಸು ಸಂಸತ್ತಿನವರೆಗೆ ಹಬ್ಬಿ ದೇಶಕ್ಕೆ ಹೊಸ ಪ್ರಧಾನಿಯನ್ನು ನೀಡಲಿದೆ ಎಂದು ಸಮಾಜವಾದಿ ಪಕ್ಷ(ಎಸ್ಪಿ)ದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News