ಸಿಂಧುಗೆ ಸೋಲು, ಭಾರತದ ಸವಾಲು ಅಂತ್ಯ

Update: 2019-04-13 18:42 GMT

► ಸಿಂಗಾಪುರ ಓಪನ್ ಬ್ಯಾಡ್ಮಿಂಟನ್

ಸಿಂಗಾಪುರ, ಎ.14: ಸಂಪೂರ್ಣ ಲಯ ಕಳೆದುಕೊಂಡಂತೆ ಕಂಡುಬಂದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಶನಿವಾರ ಸಿಂಗಾಪುರ ಓಪನ್ ಸೆಮಿಫೈನಲ್‌ನಲ್ಲಿ ಜಪಾನ್‌ನ ಮಾಜಿ ವಿಶ್ವ ನಂ.1 ಆಟಗಾರ್ತಿ ನೊರೊಮಿ ಒಕುಹರಾ ವಿರುದ್ಧ ಶರಣಾಗಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಸಂಪೂರ್ಣ ಏಕಪಕ್ಷೀಯವಾಗಿ ಕಂಡುಬಂದ ಪಂದ್ಯದಲ್ಲಿ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, 7-21, 11-21ರಿಂದ ವಿಶ್ವದ ನಂ.3 ಆಟಗಾರ್ತಿ ವಿರುದ್ಧ ಮುಗ್ಗರಿಸಿದರು.

ಸಿಂಧು ಅವರು ಒಕುಹರಾ ವಿರುದ್ಧ ಆಡಿದ ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು. ಒಟ್ಟಾರೆ ಅವರು ಒಕುಹರಾ ವಿರುದ್ಧ 7-6 ಅಲ್ಪ ಮುನ್ನಡೆಯ ಹೆಡ್-ಟು-ಹೆಡ್ ಗೆಲುವಿನ ದಾಖಲೆ ಹೊಂದಿದ್ದಾರೆ.

ಆದರೆ ಶನಿವಾರದ ಪಂದ್ಯದಲ್ಲಿ ಸಿಂಧು ಸಂಪೂರ್ಣ ಲಯ ಕಳೆದುಕೊಂಡಂತಾಗಿದ್ದರು. ಪ್ರಥಮ ಗೇಮ್‌ನಲ್ಲಿ ನೆಟ್‌ನಲ್ಲಿ ಹಾಗೂ ಸೈಡ್‌ಲೈನ್ ಶಾಟ್‌ಗಳ ಮೂಲಕ ಹಲವು ಅನಗತ್ಯ ತಪ್ಪುಗಳನ್ನು ಎಸಗಿದರು. ಇನ್ನೊಂದೆಡೆ ಒಕುಹರಾ ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದರು. ದೀರ್ಘ ರ್ಯಾಲಿಗಳ ಮೂಲಕ ಒಕುಹರಾ, ಸಿಂಧುರನ್ನು ಆತ್ಮವಿಶ್ವಾಸ ಹಾಗೂ ತಾಳ್ಮೆಯ ಕೊರತೆಯಿಂದ ಬಳಲುವಂತೆ ಮಾಡಿದರು.

ಪ್ರಥಮ ಗೇಮ್‌ನಲ್ಲಿ 1-3ರಿಂದ ಹಿನ್ನಡೆ ಅನುಭವಿಸಿದ್ದ ಸಿಂಧು, ಮತ್ತೆ ಚೇತರಿಸಿಕೊಂಡು 4-4ರ ಸಮಬಲ ಸಾಧಿಸಿದರು. ಮಧ್ಯಂತರ ವಿರಾಮದ ವೇಳೆ ಒಕುಹರಾ 11-5ರ ಮುನ್ನಡೆ ಕಂಡರು. ಆ ಬಳಿಕ ಹಲವು ಸಣ್ಣ ತಪ್ಪುಗಳ ಮೂಲಕ ಸಿಂಧು ಹಿನ್ನಡೆ ಅನುಭವಿಸುತ್ತಲೇ ಸಾಗಿ ಗೇಮ್‌ನ್ನು ಕಳೆದುಕೊಂಡರು.

ಎರಡನೇ ಗೇಮ್‌ನಲ್ಲೂ ಸಂಪೂರ್ಣ ಪಾರಮ್ಯ ಮೆರೆದ ಒಕುಹರಾ, 9 ಗೇಮ್ ಪಾಯಿಂಟ್‌ಗಳ ಮೂಲಕ ಕ್ರಾಸ್‌ಕೋರ್ಟ್‌ನಲ್ಲಿ ಗೆಲುವಿನ ನಗು ಬೀರಿದರು. ಫೈನಲ್ ಪಂದ್ಯದಲ್ಲಿ ಅವರು ಚೀನಾ ತೈಪೆಯ ವಿಶ್ವ ನಂ.1 ಆಟಗಾರ್ತಿ ತೈ ಝು ಯಿಂಗ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News