ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ಶಾ ಗೃಹ ಸಚಿವರಾಗಬಹುದು: ಕೇಜ್ರಿವಾಲ್

Update: 2019-04-14 18:01 GMT

ಪಣಜಿ, ಎ.14: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಅಮಿತ್ ಶಾ ಗೃಹ ಸಚಿವರಾಗುವುದರಲ್ಲಿ ಅನುಮಾನವಿಲ್ಲ ಎಂದು ಆಮ್ ಆದ್ಮಿ ಪಕ್ಷ(ಆಪ್)ದ ಸಂಚಾಲಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹೇಳಿದ್ದಾರೆ.

 ಗೋವಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಚುನಾವಣೆ ದೇಶವನ್ನು ರಕ್ಷಿಸಲು ನಡೆಯುತ್ತಿರುವ ಯುದ್ಧ ಎಂಬ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ ಎಂದರು. ಗೋವಾದಲ್ಲಿ ಆಪ್ ಪಕ್ಷ ಎರಡು ಲೋಕಸಭಾ ಸ್ಥಾನ ಹಾಗೂ ನಾಲ್ಕು ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಾ ಸ್ಪರ್ಧಿಸಿರಲಿಲ್ಲ. ಈ ಬಾರಿ ಅವರು ಗಾಂಧೀನಗರದಿಂದ ಕಣಕ್ಕಿಳಿದಿದ್ದಾರೆ. ಶಾ ಮುಂದಿನ ಗೃಹಸಚಿವರಾದರೆ ಏನಾದೀತು ಎಂದೊಮ್ಮೆ ಯೋಚಿಸಿನೋಡಿ ಬಳಿಕ ಮತ ಚಲಾಯಿಸಿ ಎಂದವರು ಜನತೆಗೆ ಕರೆ ನೀಡಿದರು. ಗೋವಾದಲ್ಲಿ ಗುಂಪಿನಿಂದ ಹಲ್ಲೆ ಮತ್ತು ಸಾವಿನಂತಹ ಪ್ರಕರಣ ಇದುವರೆಗೆ ವರದಿಯಾಗಿಲ್ಲ. ಆದರೆ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಈ ಚಾಳಿ ಗೋವಾಕ್ಕೂ ವಿಸ್ತರಿಸಬಹುದು. ಗೋವಾಕ್ಕೆ ಪ್ರವಾಸಿಗರ ಆಗಮನ ಕಡಿಮೆಯಾಗುತ್ತದೆ ಮತ್ತು ಸ್ಥಳೀಯರಿಗೆ ಉದ್ಯೋಗ ನಷ್ಟವಾಗುತ್ತದೆ ಎಂದು ಕೇಜ್ರೀವಾಲ್ ಹೇಳಿದರು.

ನಾಝಿ ಜರ್ಮನಿಯ ಮುಖಂಡ ಅಡಾಲ್ಫ್ ಹಿಟ್ಲರ್ 1931ರಲ್ಲಿ ಜರ್ಮನಿಯ ಚಾನ್ಸೆಲರ್ ಆದ. ಮೂರೇ ತಿಂಗಳಲ್ಲಿ ಜರ್ಮನಿಯ ಸಂವಿಧಾನವನ್ನು ಬದಲಿಸಿ ಚುನಾವಣೆಯನ್ನೇ ರದ್ದುಗೊಳಿಸಿದ. ಇದೇ ರೀತಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸಂವಿಧಾನವನ್ನು ಬದಲಿಸುವುದರಲ್ಲಿ ಅನುಮಾನವಿಲ್ಲ. ಬಿಜೆಪಿಗೆ ಹಿಟ್ಲರ್ ಮಾದರಿಯಾಗಿದ್ದಾನೆ ಎಂದ ಕೇಜ್ರೀವಾಲ್, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್ ಹಾಗೂ ನರೇಂದ್ರ ಮೋದಿ ಮಧ್ಯೆ ಗುಪ್ತ ಒಪ್ಪಂದವೇರ್ಪಟ್ಟಿದೆ. ಆದ್ದರಿಂದಲೇ ಮೋದಿ ಪ್ರಧಾನಿಯಾಗಬೇಕು ಎಂದು ಇಮ್ರಾನ್ ಹೇಳಿಕೆ ನೀಡಿರುವುದು. ಭಾರತವನ್ನು ವಿಭಜಿಸಲು ಪಾಕ್ ಕಳೆದ 70 ವರ್ಷಗಳಿಂದ ಯತ್ನಿಸುತ್ತಿದ್ದರೂ ವಿಫಲವಾಗಿದೆ. ಆದರೆ ಮೋದಿ ಮತ್ತು ಶಾ ಸೇರಿಕೊಂಡರೆ ಮುಂದಿನ ಐದು ವರ್ಷದೊಳಗೆ ಭಾರತವನ್ನು ವಿಭಜಿಸಬಲ್ಲರು ಎಂಬುದು ಇಮ್ರಾನ್‌ಗೆ ಖಾತರಿಯಾಗಿದೆ ಎಂದು ಹೇಳಿದರು. ಎಪ್ರಿಲ್ 23ರಂದು ಗೋವಾದಲ್ಲಿ ಎರಡು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಹಾಗೂ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಮರುಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News