ಟಿಡಿಪಿಯ ಆ್ಯಪ್ ರೂಪಿಸುತ್ತಿರುವ ಐಟಿ ಸಂಸ್ಥೆಯ ಬಳಿ 7.8 ಕೋ.ಜನರ ಆಧಾರ್ ಮಾಹಿತಿ: ಎಫ್‌ಐಆರ್ ದಾಖಲು

Update: 2019-04-14 07:22 GMT

ಹೈದರಾಬಾದ್,ಎ.14: ತೆಲಂಗಾಣ ಮತ್ತು ಆಂಧ್ರಪ್ರದೇಶಗಳ 7.8 ಕೋಟಿಗೂ ಅಧಿಕ ಜನರ ಆಧಾರ್ ಮಾಹಿತಿಗಳು ತಂತ್ರಜ್ಞಾನ ಸಂಸ್ಥೆ ಐಟಿ ಗ್ರಿಡ್ಸ್(ಇಂಡಿಯಾ)ದ ಬಳಿಯಿವೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಸಲ್ಲಿಸಿರುವ ದೂರಿನ ಮೇರೆಗೆ ಸೈಬರಾಬಾದ್ ಪೊಲೀಸರು ಎಫ್‌ಐಆರ್‌ನ್ನು ದಾಖಲಿಸಿಕೊಂಡಿದ್ದಾರೆ. ಎರಡೂ ರಾಜ್ಯಗಳು ಅಂದಾಜು 8.4 ಕೋ.ಜನಸಂಖ್ಯೆಯನ್ನು ಹೊಂದಿವೆ. ಐಟಿ ಗ್ರಿಡ್ಸ್ ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯ ಸೇವಾ ಮಿತ್ರ ಆ್ಯಪ್‌ನ್ನು ಅಭಿವೃದ್ಧಿಗೊಳಿಸುತ್ತಿದೆ.

ಆಧಾರ್ ಕಾಯ್ದೆಯನ್ನು ಉಲ್ಲಂಘಿಸಿ ರಿಮೂವೇಬಲ್ ಸ್ಟೋರೇಜ್ ಡಿವೈಸ್‌ನಲ್ಲಿ ಈ ಮಾಹಿತಿಗಳಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಂಪನಿಯು ಕೇಂದ್ರ ಮಾಹಿತಿ ಭಂಡಾರದಿಂದ ಅಥವಾ ರಾಜ್ಯ ಮಾಹಿತಿ ಕೇಂದ್ರದಿಂದ ಈ ಮಾಹಿತಿಗಳನ್ನು ಅಕ್ರಮವಾಗಿ ಪಡೆದುಕೊಂಡಿರಬಹುದು ಎಂದು ವಿಧಿವಿಜ್ಞಾನ ತಜ್ಞರು ಶಂಕಿಸಿದ್ದಾರೆ. ಮಾಹಿತಿ ಕಳವು ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಸಿಟ್)ಗೆ ಈ ಪ್ರಕರಣವೂ ವರ್ಗಾವಣೆಗೊಳ್ಳಬಹುದು ಎಂದು ಬೆಳವಣಿಗೆಯನ್ನು ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿವೆ.

ಐಟಿ ಗ್ರಿಡ್ಸ್ ಕಚೇರಿಯಿಂದ ಈ ಹಿಂದೆ ವಶಪಡಿಸಿಕೊಳ್ಳಲಾಗಿದ್ದ ಹಾರ್ಡ್ ಡಿಸ್ಕ್‌ಗಳ ವಿಶ್ಲೇಷಣೆ ಸಂದರ್ಭ ಸಂಸ್ಥೆಯು ತೆಲಂಗಾಣ ಮತ್ತು ಆಂಧ್ರಪ್ರದೇಶಗಳ 7,82,21,397 ಜನರ ಆಧಾರ ಮಾಹಿತಿಗಳನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ತೆಲಂಗಾಣ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯ(ಟಿಎಸ್‌ಎಫ್‌ಎಸ್‌ಎಲ್)ದ ತಜ್ಞರು ತಿಳಿಸಿದ್ದಾರೆ. ಐಟಿ ಗ್ರಿಡ್ಸ್ ಬಳಿಯಿರುವ ಮಾಹಿತಿಗಳ ಸ್ವರೂಪ ಮತ್ತು ಗಾತ್ರ ಯುಐಡಿಎಐ ಬಳಿಯಿರುವ ಮಾಹಿತಿಯನ್ನೇ ಹೋಲುತ್ತಿದೆ ಎನ್ನುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಮತದಾರರ ಪ್ರೊಫೈಲ್‌ಗಳನ್ನು ಸಿದ್ಧಪಡಿಸಲು, ಗುರಿ ನಿರ್ದೇಶಿತ ಪ್ರಚಾರಕ್ಕಾಗಿ ಮತ್ತು ಮತದಾರರ ಹೆಸರುಗಳನ್ನು ತೆಗೆದುಹಾಕಲೂ ಸೇವಾ ಮಿತ್ರ ಆ್ಯಪ್‌ನ ಅಭಿವೃದ್ಧಿಗಾಗಿ ಕಳವು ಮಾಡಲಾದ ಮತದಾರರ ಮಾಹಿತಿಗಳು ಮತ್ತು ಆಧಾರ್ ಮಾಹಿತಿಗಳನ್ನು ಬಳಸಲಾಗುತ್ತಿದೆ ಎಂಬ ಶಂಕೆಯು ಈವರೆಗಿನ ತನಿಖೆಯಲ್ಲಿ ಮೂಡಿದೆ. ಐಟಿ ಗ್ರಿಡ್ಸ್ ಕಚೇರಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಏಳು ಹಾರ್ಡ್ ಡಿಸ್ಕ್‌ಗಳು ಮತು ಇತರ ಡಿಜಿಟಲ್ ಸಾಕ್ಷಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯುಐಡಿಎಐ ಉಪ ನಿರ್ದೇಶಕ ಟಿ.ಭವಾನಿ ಪ್ರಸಾದ ಅವರು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News