ಸಾಹಿತಿಗಳನ್ನು ವಂಚಿಸುವ ಜಾಲವೊಂದಿದೆ ಎಚ್ಚರಿಕೆ!

Update: 2019-04-14 18:15 GMT

ಮಾನ್ಯರೇ,

ಹೊಸದಾಗಿ ಪ್ರಕಟಗೊಂಡಿರುವ, ಸಾಹಿತ್ಯದ ಎಲ್ಲಾ ಪ್ರಕಾರದ ಕೃತಿಗಳಿಗೆ ಪುರಸ್ಕಾರ ನೀಡಲು ಲೇಖಕರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂಬ ಪ್ರಕಟನೆಯು ಸಾಮಾಜಿಕ ಜಾಲತಾಣ, ಮುದ್ರಣ ಮಾಧ್ಯಮಗಳಲ್ಲಿ ಸಂಘ ಸಂಸ್ಥೆಗಳ ಹೆಸರಿನಿಂದ ಕಂಡುಬರುತ್ತಿವೆ. ನಿಗದಿಪಡಿಸಿದ ವರ್ಷ ನಮೂದಿಸಿ, ಈ ಸಾಲಿನಲ್ಲಿ ಪ್ರಕಟಗೊಂಡ ಕೃತಿಯ 5ಪ್ರತಿಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ತೀರ್ಪುಗಾರರ ಪರಿಶೀಲನೆಗೆ ಸಂಘಟಕರ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವಂತೆ ಕೋರಲಾಗಿರುತ್ತದೆ. ಆಯ್ಕೆಯಾದ ಕೃತಿಯ ಬರಹಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಪ್ರಕಟನೆಯಲ್ಲಿ ಉಲ್ಲೇಖಿಸಿರುತ್ತಾರೆ.

ಇಂತಹ ಪ್ರಕಟನೆ ನೋಡಿದ ಕನ್ನಡ ನಾಡಿನ ಸಾವಿರಾರು ಬರಹಗಾರರು ಕೃತಿಗಳನ್ನು ಸಂಘಟಕರ ವಿಳಾಸಕ್ಕೆ ರವಾನಿಸುತ್ತಾರೆ. ನಂತರದ ದಿನಗಳಲ್ಲಿ ಎಲ್ಲಿಯೂ ಫಲಿತಾಂಶ ಪ್ರಕಟವಾದ ಸುಳಿವು ಇರುವುದಿಲ್ಲ. ಯಾವ ಕೃತಿಕಾರರಿಗೆ ಬಹುಮಾನ ಲಭಿಸಿದೆ ಎಂಬ ಮಾಹಿತಿಯೂ ಲಭ್ಯವಾಗುವುದಿಲ್ಲ. ಅವರು ಆಹ್ವಾನಿಸಿದ ಪುಸ್ತಕಗಳನ್ನು ಲೇಖಕರಿಗೆ ಮರು ರವಾನಿಸುವುದಿಲ್ಲ. ಹಾಗಾದರೆ ಓರ್ವ ಲೇಖಕರಿಂದ ಐದು ಕೃತಿಗಳಂತೆ ಸಂಗ್ರಹಗೊಂಡ ಬೆಲೆ ಬಾಳುವ ಸಾವಿರಾರು ಪುಸ್ತಕಗಳು ಎಲ್ಲಿಗೆ ಹೋಗುತ್ತವೆ? ಎನ್ನುವುದು ಸಂಶಯದ ಪ್ರಶ್ನೆಯಾಗಿ ಉಳಿದಿದೆ. ಈ ಒಂದು ಪ್ರಕ್ರಿಯೆಯು ಸಾಹಿತ್ಯ ವಲಯದಲ್ಲಿ ಸಂಶಯ ಹುಟ್ಟಿಸಿದೆ. ಪ್ರಾಮಾಣಿಕವಾಗಿ ಕನ್ನಡ ನಾಡು ನುಡಿಯ ಸಂಸ್ಕೃತಿಯ ಸೇವೆಯಲ್ಲಿ ನಿರತವಾಗಿರುವ ಮಾದರಿ ಸಂಘ ಸಂಸ್ಥೆಗಳು ಬಹಳಷ್ಟು ಇವೆ. ಅವರ ನಡುವೆ ಕನ್ನಡ ಸೇವೆಯ ಮುಖವಾಡ ಧರಿಸಿ, ವಂಚಿಸುವ ಸಂಘ ಸಂಸ್ಥೆಗಳೂ ಇವೆ. ಯಾವುದಕ್ಕೂ ಸಾಹಿತಿಗಳು ಈ ಮೋಸದ ಜಾಲದಲ್ಲಿ ಸಿಲುಕುವ ಮೊದಲು ಎಚ್ಚರಿಕೆಯಿಂದ ಇರುವುದು ಒಳಿತು. 

Writer - ತಾರಾನಾಥ್ ಮೇಸ್ತ, ಶಿರೂರು

contributor

Editor - ತಾರಾನಾಥ್ ಮೇಸ್ತ, ಶಿರೂರು

contributor

Similar News