ಅತ್ಯಾಚಾರ ಪ್ರಕರಣದಲ್ಲಿ ಸಹಕರಿಸಲು ಸಿದ್ಧ: ಅಸಾಂಜ್ ವಕೀಲರ ಹೇಳಿಕೆ

Update: 2019-04-14 18:25 GMT

ಲಂಡನ್, ಎ. 14: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸ್ವೀಡನ್ ಅಧಿಕಾರಿಗಳು ಮರುಚಾಲನೆ ನೀಡಿದರೆ ಅವರು ಸಹಕರಿಸುತ್ತಾರೆ, ಆದರೆ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಯವುದೇ ಪ್ರಯತ್ನವನ್ನು ವಿರೋಧಿಸುವುದನ್ನು ಮುಂದುವರಿಸುತ್ತಾರೆ ಎಂದು ಅವರ ವಕೀಲರು ರವಿವಾರ ಹೇಳಿದ್ದಾರೆ.

‘‘ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅವರು ಯಾವುದೇ ಪ್ರಶ್ನೆ ಕೇಳಿದರೂ ಉತ್ತರಿಸಲು ನಾವು ಸಿದ್ಧರಾಗಿದ್ದೇವೆ’’ ಎಂದು ‘ಸ್ಕೈ ನ್ಯೂಸ್’ ಟೆಲಿವಿಶನ್ ಜೊತೆ ಮಾತನಾಡಿದ ವಕೀಲೆ ಜೆನಿಫರ್ ರಾಬಿನ್ಸನ್ ಹೇಳಿದರು.

‘‘ಈ ಹಂತದಲ್ಲಿ, ಅಮೆರಿಕಕ್ಕೆ ಗಡಿಪಾರು ಪ್ರಮುಖ ವಿಷಯವಾಗಿದೆ. ಈ ಬಗ್ಗೆ ನಾವು ಹಲವು ವರ್ಷಗಳಿಂದ ಎಚ್ಚರಿಕೆ ನೀಡುತ್ತಾ ಬಂದಿದ್ದೇವೆ’’ ಎಂದರು.

ವಿಕಿಲೀಕ್ಸ್ ಸ್ಥಾಪಕ ಈಗ ಲಂಡನ್ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ೨೦೧೨ರಲ್ಲಿ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಕೋರುವ ಮೂಲಕ ಜಾಮೀನು ಶರತ್ತುಗಳನ್ನು ಉಲ್ಲಂಘಿಸಿರುವುದಕ್ಕಾಗಿ ಅವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಸ್ವೀಡನ್‌ಗೆ ಗಡಿಪಾರುಗೊಳ್ಳುವುದನ್ನು ತಡೆಯಲು ಅವರು ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಕೋರಿದ್ದರು.

ಅಸಾಂಜ್‌ಗೆ ನೀಡಿರುವ ಆಶ್ರಯವನ್ನು ಇಕ್ವೆಡಾರ್ ಗುರುವಾರ ಹಿಂದಕ್ಕೆ ಪಡೆದ ಬಳಿಕ, ಲಂಡನ್ ಪೊಲೀಸರು ಅವರನ್ನು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.

ಅಮೆರಿಕದ ಬೃಹತ್ ಪ್ರಮಾಣದ ಸರಕಾರಿ ದಾಖಲೆಗಳನ್ನು ‘ವಿಕಿಲೀಕ್ಸ್’ನಲ್ಲಿ ಪ್ರಕಟಿಸಿರುವುದಕ್ಕಾಗಿ ವಿಚಾರಣೆ ಎದುರಿಸಲು ಅವರನ್ನು ಗಡಿಪಾರು ಕೋರಿ ಅಮೆರಿಕ ಹೊರಡಿಸಿರುವ ವಾರಂಟ್ ವಿರುದ್ಧವೂ ಅವರು ಹೋರಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News