ಹೈದರಾಬಾದ್ ವಿರುದ್ಧ ಡೆಲ್ಲಿ ಜಯಭೇರಿ

Update: 2019-04-15 01:52 GMT

ಹೈದರಾಬಾದ್, ಎ.14: ಎಲ್ಲ ವಿಭಾಗಗಳಲ್ಲಿಯೂ ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ೩೯ ರನ್‌ಗಳ ಜಯ ಸಾಧಿಸಿದೆ.

ಇಲ್ಲಿನ ರಾಜೀವ್‌ಗಾಂಧಿ ಅಂತರ್‌ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ೧೫೬ ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ 18.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 116 ರನ್ ಗಳಿಸಲಷ್ಟೇ ಶಕ್ತವಾಯಿತು.

ಹೈದರಾಬಾದ್ ಪರ ವಾರ್ನರ್ (51, 47 ಎಸೆತ, 3 ಬೌಂಡರಿ, 1 ಸಿಕ್ಸರ್ ) ಹಾಗೂ ಬೈರ್‌ಸ್ಟೋ  (41, 31 ಎಸೆತ, 5 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಬೈರ್‌ಸ್ಟೋ ಕೀಮೊ ಪಾಲ್ ಎಸೆತದಲ್ಲಿ ರಬಾಡಗೆ ಕ್ಯಾಚ್ ನೀಡಿದರು. ಆ ಬಳಿಕ ಕ್ರೀಸ್‌ಗೆ ಬಂದ ನಾಯಕ ಕೇನ್ ವಿಲಿಯಮ್ಸನ್ (3) ವೈಫಲ್ಯ ಅನುಭವಿಸಿ  ಕೀಮೊ ಪಾಲ್‌ಗೆ ವಿಕೆಟ್ ಒಪ್ಪಿಸಿದರು. ರಿಕಿ ಭುಯಿ (7) ಹೆಚ್ಚು ಹೊತ್ತು ನಿಲ್ಲಲಿಲ್ಲ. ವಾರ್ನರ್ ಅವರು ರಬಾಡ ಎಸೆತದಲ್ಲಿ ಶ್ರೇಯಸ್‌ಗೆ ಕ್ಯಾಚ್ ನೀಡಿದರು. ವಿಜಯಶಂಕರ್ (1) ಬೇಗನೇ ನಿರ್ಗಮಿಸಿದರು. ದೀಪಕ್ ಹೂಡಾ (3) ಹಾಗೂ ರಶೀದ್‌ಖಾನ್ (೦) ಅವರು ಮೊರಿಸ್‌ರ ಸತತ ಎರಡು ಎಸೆತಗಳಲ್ಲಿ ವಿಕೆಟ್ ಕೈಚೆಲ್ಲಿದರು. ಅಭಿಷೇಕ್ ವರ್ಮಾ (2) ಬ್ಯಾಟ್ ಮೋಡಿ ಮಾಡಲಿಲ್ಲ.

ಡೆಲ್ಲಿ ಪರ ರಬಾಡ (22ಕ್ಕೆ 4) ಕೀಮೊ ಪಾಲ್ (17ಕ್ಕೆ 3) ಕ್ರಿಸ್ ಹಾಗೂ ಮೊರಿಸ್ (22ಕ್ಕೆ 3 ) ಉತ್ತಮ ಬೌಲಿಂಗ್ ದಾಳಿ ನಡೆಸಿದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಮಾಡಿತ್ತು.

ತಂಡದ ಪರ ಬ್ಯಾಟಿಂಗ್ ಆರಂಭಿಸಿದ ಪೃಥ್ವಿ ಶಾ (4) ಹಾಗೂ  ಶಿಖರ್ ಧವನ್ (7) ಉತ್ತಮ
ಆರಂಭ ಒದಗಿಸಿಕೊಡುವಲ್ಲಿ ವಿಫಲವಾದರು. ತಂಡದ ಮೊತ್ತ 11 ರನ್ ಆಗುವಷ್ಟರಲ್ಲಿ ಪೃಥ್ವಿ ವಿಕೆಟ್ ಕೈಚೆಲ್ಲಿದರು. ಆ ಬಳಿಕ 20 ರನ್ ಆಗುವಷ್ಟರಲ್ಲಿ ಧವನ್ ಕೂಡ ಪೆವಿಲಿಯಯನ್ ಹಾದಿ ಹಿಡಿದರು. ಈ ಎರಡೂ ವಿಕೆಟ್‌ಗಳನ್ನು ಕಿತ್ತ ಖಲೀಲ್ ಅಹ್ಮದ್ ಹೈದರಾಬಾದ್ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣವಾದರು.

ಆ ಬಳಿಕ ಬ್ಯಾಟಿಂಗ್‌ಗೆ ಆಗಮಿಸಿದ ಕಾಲಿನ್ ಮುನ್ರೊ (40, 24 ಎಸೆತ, 4 ಬೌಂಡರಿ, 3 ಸಿಕ್ಸರ್) ತಂಡಕ್ಕೆ ಆಸರೆ ಒದಗಿಸಿದರು. ನಾಯಕ ಶ್ರೇಯಸ್ ಅಯ್ಯರ್ (45, 40 ಎಸೆತ, 5 ಬೌಂಡರಿ ) ಜೊತೆಗೂಡಿ ಮೂರನೇ ವಿಕೆಟ್‌ಗೆ 49 ರನ್ ಸೇರಿಸಿದ ಮುನ್ರೊ ಅವರು ಅಭಿಷೇಕ್ ಶರ್ಮಾ ಎಸೆತದಲ್ಲಿ ಬೈರ್‌ಸ್ಟೋಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಸೇರಿದರು.

ಅಯ್ಯರ್ ಹಾಗೂ ರಿಷಭ್ ಪಂತ್ (23, 19 ಎಸೆತ, 3 ಬೌಂಡರಿ) 4ನೇ ವಿಕೆಟ್‌ಗೆ 56 ರನ್ ಸೇರಿಸಿದರು. ಅಯ್ಯರ್ ಅವರು ಭುವನೇಶ್ವರಗೆ ವಿಕೆಟ್ ಒಪ್ಪಿಸಿದರೆ, ಪಂತ್, ಖಲೀಲ್ ಎಸೆತದಲ್ಲಿ ಔಟಾದರು. ಮೊರಿಸ್ (4) ಶೀಘ್ರ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ (ಅಜೇಯ 14) ಹಾಗೂ ಕೀಮೊ ಪಾಲ್ (7) ಕೆಲಹೊತ್ತು ಬ್ಯಾಟ್ ಬೀಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News