ವಿಶ್ವಕಪ್‌ಗೆ ಇಂದು ಭಾರತ ತಂಡ ಆಯ್ಕೆ

Update: 2019-04-15 01:47 GMT

ಹೊಸದಿಲ್ಲಿ, ಎ.14: ಮುಂದಿನ ತಿಂಗಳ ಅಂತ್ಯದಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ಆಯ್ಕೆಗೆ ಮೊದಲೇ ಎರಡನೇ ವಿಕೆಟ್‌ಕೀಪರ್ ಸ್ಥಾನ ಗಿಟ್ಟಿಸಿಕೊಳ್ಳಲು ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ.

 ಪಂತ್ ಹಾಗೂ ಕಾರ್ತಿಕ್‌ರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಕುರಿತು ಟೀಮ್ ಮ್ಯಾನೇಜ್‌ಮೆಂಟ್ ಗಂಭೀರ ಚರ್ಚೆಯಲ್ಲಿ ನಿರತವಾಗಿದ್ದು, ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ಆಡಿದ ಏಕದಿನ ಸರಣಿಯಲ್ಲಿ ಆಯ್ಕೆ ಮಾಡಲಾಗಿರುವ ತಂಡದ ಮೇಲೆ ಆಯ್ಕೆಗಾರರು ಒಲವು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಎಂಎಸ್‌ಕೆ ಪ್ರಸಾದ್ ನೇತೃತ್ವದಲ್ಲಿ ಆಯ್ಕೆ ಸಮಿತಿಯು ಎ.15 ರಂದು ಮುಂಬೈನಲ್ಲಿ ಸಭೆ ಸೇರಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಿದೆ. ಆಯ್ಕೆಗಾರರು ಇತ್ತೀಚೆಗೆ ನಡೆದ ಆಸ್ಟ್ರೇಲಿಯ ವಿರುದ್ಧ ಸರಣಿಯ ಬಳಿಕ ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಗಂಭೀರವಾಗಿದ್ದಾರೆ. ಐಪಿಎಲ್‌ನ್ನು ಆಟಗಾರರ ಫಿಟ್ನೆಸ್ ಖಾತ್ರಿಪಡಿಸಿಕೊಳ್ಳಲು ಪರಿಶೀಲಿಸಬಹುದು. ಪಂತ್‌ಗೆ ಇತ್ತೀಚೆಗೆ ಆಡಲು ಅವಕಾಶ ನೀಡಲಾಗಿತ್ತು. ಆದರೆ, ಕಾರ್ತಿಕ್ ಕೆಲವು ನಿರ್ಣಾಯಕ ಇನಿಂಗ್ಸ್ ಆಡಿದ್ದರು ಎಂದು ಮೂಲಗಳು ತಿಳಿಸಿವೆ. ತಂಡದಲ್ಲಿ ಕೇವಲ ಒಂದು ಸ್ಥಾನಕ್ಕಾಗಿ ಮುಕ್ತ ಚರ್ಚೆ ನಡೆಸಲಾಗುತ್ತ್ತದೆ ಎಂದು ಆಸ್ಟ್ರೇಲಿಯ ವಿರುದ್ಧ ಸರಣಿಯ ಬಳಿಕ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಇದೇ ವೇಳೆ ಪಂತ್‌ಗೆ ಕೇಂದ್ರೀಯ ಗುತ್ತಿಗೆಯಲ್ಲಿ ‘ಎ’ ಶ್ರೇಣಿ ನೀಡಲಾಗಿತ್ತು. ಆದರೆ, ದಿನೇಶ್‌ಗೆ ‘ಬಿ’ ಯಿಂದ ‘ಸಿ’ ಗ್ರೇಡ್‌ಗೆ ಹಿಂಭಡ್ತಿ ನೀಡಲಾಗಿತ್ತು. ಟೀಮ್ ಮ್ಯಾನೇಜ್‌ಮೆಂಟ್ ಆಲ್‌ರೌಂಡರ್ ವಿಜಯ ಶಂಕರ್ ಪ್ರದರ್ಶನದಿಂದ ಪ್ರಭಾವಿತವಾಗಿದ್ದು ಕಳೆದ ಕೆಲವು ಸಮಯದಿಂದ ನಾಲ್ಕನೇ ಕ್ರಮಾಂಕದ ಮೇಲೆ ಕಣ್ಣಿಟ್ಟಿದ್ದ ಅಂಬಟಿ ರಾಯುಡು ಇದೀಗ ಶಂಕರ್‌ರಿಂದ ಕಠಿಣ ಸ್ಪರ್ಧೆ ಎದುರಿಸುತ್ತಿದ್ದಾರೆ. ಶಂಕರ್‌ರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡರೆ ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ ಹಾಗೂ ಭುವನೇಶ್ವರ ಕುಮಾರ್ ಅವರನ್ನೊಳಗೊಂಡ ವೇಗದ ಬೌಲಿಂಗ್ ವಿಭಾಗಕ್ಕೆ ಹೆಚ್ಚುವರಿ ಆಯ್ಕೆ ನೀಡಿದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News