ನಿಧಾನಗತಿಯ ಬೌಲಿಂಗ್: ಕೊಹ್ಲಿಗೆ 12 ಲಕ್ಷ ರೂ.ದಂಡ

Update: 2019-04-15 11:47 GMT

ಮೊಹಾಲಿ, ಎ.14: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಶನಿವಾರ ರಾತ್ರಿ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

  ಸ್ಲೋ ಓವರ್‌ರೇಟ್‌ಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಅಡಿ ಆರ್‌ಸಿಬಿ ಈ ಋತುವಿನಲ್ಲಿ ಮೊದಲ ಬಾರಿ ತಪ್ಪೆಸಗಿದೆ. ಹೀಗಾಗಿ ಆ ತಂಡದ ನಾಯಕ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ. ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಈಗ ನಡೆಯುತ್ತಿರುವ 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೊನೆಗೂ ಗೆಲುವಿನ ಮುಖ ಕಂಡಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್‌ಸಿಬಿ ಸತತ 6 ಪಂದ್ಯಗಳಲ್ಲಿ ಸೋತು ಸುಣ್ಣವಾಗಿತ್ತು. ಶನಿವಾರ ನಡೆದ ಪಂದ್ಯದಲ್ಲಿ ಕೊಹ್ಲಿ(67,53 ಎಸೆತ),ಎಬಿಡಿವಿಲಿಯರ್ಸ್(ಔಟಾಗದೆ 59, 38 ಎಸೆತ) ಹಾಗೂ ಮಾರ್ಕಸ್ ಸ್ಟೋನಿಸ್(ಔಟಾಗದೆ 28, 16)ಸಾಹಸದ ನೆರವಿನಿಂದ ಪಂಜಾಬ್ ವಿರುದ್ಧ 8 ವಿಕೆಟ್‌ಗಳ ಗೆಲುವು ದಾಖಲಿಸಿತ್ತು. 173 ರನ್ ಗಳಿಸಿದ್ದ ಪಂಜಾಬ್ ತಂಡದ ಬೌಲರ್‌ಗಳು ವಿಕೆಟ್ ಪಡೆಯಲು ವಿಫಲವಾಗುವ ಜೊತೆಗೆ ಹೆಚ್ಚು ರನ್ ಸೋರಿಕೆ ಮಾಡಿದ್ದರು. ಪ್ರವಾಸಿ ಆರ್‌ಸಿಬಿ ಇನ್ನೂ 4 ಎಸೆತ ಬಾಕಿ ಇರುವಾಗಲೇ ಜಯ ದಾಖಲಿಸಿತ್ತು. ಇದಕ್ಕೂ ಮೊದಲು ಕ್ರಿಸ್ ಗೇಲ್ ಗಳಿಸಿದ ಅರ್ಧಶತಕ(ಔಟಾಗದೆ 99)ನೆರವಿನಿಂದ ಪಂಜಾಬ್ 4 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News