ನಿಲ್ಲದ ಅಮೆರಿಕ ಪ್ರಾಯೋಜಿತ ವೆನೆಝುವೆಲ ಬವಣೆ

Update: 2019-04-15 18:40 GMT

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಮೈಕಾ ಬಹಮಾಸ್, ಹೈಟಿ, ಡೊಮಿನಿಕನ್ ರಿಪಬ್ಲಿಕ್ ಮೊದಲಾದ ದೇಶಗಳನ್ನು ವೆನೆಝುವೆಲದ ವಿರುದ್ಧ ಎತ್ತಿಕಟ್ಟಿ ಅಲ್ಲಿ ಶಾಂತಿಯುತ ‘ಪ್ರಜಾ ತಾಂತ್ರಿಕ’ ಬದಲಾವಣೆಗೆ ತಾನು ಬದ್ದ ಎಂಬ ಸೋಗಲಾಡಿ ಮಾತುಗಳನ್ನು ಆಡಿದ್ದಾರೆ. ಹಲವಾರು ರಾಷ್ಟ್ರಗಳು ಅಮೆರಿಕ ಕುಮ್ಮಕ್ಕಿನಿಂದ ಗ್ವಾಯಿಡೋನನ್ನು ವೆನೆಝುವೆಲದ ಮಧ್ಯಂತರ ಅಧ್ಯಕ್ಷನೆಂದು ಮಾನ್ಯ ಮಾಡಿವೆ. ಕ್ಯೂಬಾ, ರಶ್ಯಾ, ಚೀನಾ, ಬೊಲಿವಿಯಾ ಮೊದಲಾದ ರಾಷ್ಟ್ರಗಳು ಅಮೆರಿಕದ ಇಂತಹ ನಡೆಗಳನ್ನು ಖಂಡಿಸಿವೆ.

ದೊಡ್ಡ ತೈಲ ಸಂಪತ್ತಿನ ರಾಷ್ಟ್ರ ವೆನೆಝುವೆಲ ಕಳೆದ ಕೆಲವು ತಿಂಗಳುಗಳಿಂದ ಕ್ಷೋಭೆಯಲ್ಲಿದೆ. ಕ್ಷೋಭೆಗೆ ಮುಖ್ಯ ಕಾರಣ ವೆನೆಝುವೆಲವಲ್ಲ. ಬದಲಿಗೆ ವಿಶ್ವದ ಲೂಟಿಕೋರ ರಾಷ್ಟ್ರ ಅಮೆರಿಕ ಮತ್ತದರ ಕೂಟ. ಜನರಿಂದ ಚುನಾಯಿತವಾದ ಮಡುರೋ ಸರಕಾರವನ್ನು ಉರುಳಿಸಲು ಇನ್ನಿಲ್ಲದ ಬುಡಮೇಲು ಕೃತ್ಯಗಳನ್ನು ಹಾಗೂ ಕಸರತ್ತುಗಳನ್ನು ಅದು ನಡೆಸುತ್ತಲೇ ಇದೆ. ಅಮೆರಿಕದ ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್ ನಂತರ ಬರಾಕ್ ಒಬಾಮಾ ಕಾಲದಿಂದಲೂ ವೆನೆಝುವೆಲದ ಮೇಲೆ ಹೇರಿದ್ದ ಆರ್ಥಿಕ ನಿರ್ಬಂಧಗಳನ್ನು ತೀವ್ರ ರೀತಿಯಲ್ಲಿ ಹೆಚ್ಚು ಮಾಡುತ್ತಲೇ ಮತ್ತೊಂದು ಕಡೆ ಸಹಾಯದ ಹೆಸರಿನಲ್ಲಿ ಮೂಗಿಗೆ ತುಪ್ಪಸವರುವ ಕುಟಿಲ ನೀತಿಯನ್ನೂ ಅದು ಅನುಸರಿಸುತ್ತಿದೆ. ಜನರಿಂದ ಆಯ್ಕೆಯಾಗದ ವಿರೋಧ ಪಕ್ಷದ ನಾಯಕನೆಂದು ಹೇಳಿಕೊಂಡಿರುವ 30ರ ಹರೆಯದ ಅಮೆರಿಕದ ಕೈಗೊಂಬೆ ಜುವಾನ್ ಗ್ವಾಯಿಡೋನನ್ನು ಇಟ್ಟುಕೊಂಡು ವೆನೆಝುವೆಲದ ತೈಲ ಸಂಪತ್ತಿನ ಮೇಲೆ ಹಿಡಿತ ಸಾಧಿಸಬೇಕೆಂದು ತಿಣುಕಾಡುತ್ತಿದೆ. ಗ್ವಾಯಿಡೋ ತಾನು ಹಿಂದಿನ ವೆನೆಝುವೆಲದ ಅಧ್ಯಕ್ಷ ಹ್ಯೂಗೋ ಚಾವೇಜ್‌ರ ಕಾಲದಲ್ಲಿ ರಾಷ್ಟ್ರೀಕರಣಗೊಂಡ ಕಂಪೆನಿಗಳನ್ನು ಮರಳಿ ಖಾಸಗೀಕರಿ ಸುತ್ತೇನೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ. ಅದು ರಾಷ್ಟ್ರದ ಅಭಿವೃದ್ದಿಗೆ ಅಗತ್ಯವೆಂದು ಜನರಿಗೆ ನಂಬಿಸುವ ಪ್ರಯತ್ನ ಮಾಡುತ್ತಿದ್ದಾನೆ. ಜೊತೆಗೆ ಈತ ರಾಷ್ಟ್ರ ಎದುರಿಸುತ್ತಿರುವ ಸಂಕಷ್ಟಗಳಿಗೆ ಸರಕಾರವೇ ಕಾರಣವೆಂದು ಬಿಂಬಿಸಿ ವೆನೆಝುವೆಲ ಜನತೆಯನ್ನು ಚುನಾಯಿತ ಮಡುರೋ ಸರಕಾರದ ವಿರುದ್ಧ ಎತ್ತಿಕಟ್ಟಿ ಪ್ರದರ್ಶನ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದಾನೆ.
ಯೂರೋಪಿನ ಜರ್ಮನಿ, ಫ್ರಾನ್ಸ್, ಯುಕೆ ಮೊದಲಾದ ರಾಷ್ಟ್ರಗಳೂ ಕೂಡ ವೆನೆಝುವೆಲದಲ್ಲಿ ‘ಶಾಂತಿಯುತವಾಗಿ ಪ್ರಜಾಪ್ರಭುತ್ವ’ ಸ್ಥಾಪಿಸುವ ದೃಷ್ಟಿಯಿಂದ ಅಮೆರಿಕದ ಇಂತಹ ಬುಡಮೇಲು ಕೆಲಸಗಳಿಗೆ ಹೆಗಲು ನೀಡಿವೆ. ನೆರೆಯ ಅರ್ಜೆಂಟೈನಾ, ಬ್ರೆಝಿಲ್, ಕೊಲಂಬಿಯಾ, ಚಿಲಿ, ಈಕ್ವೆಡಾರ್, ಪರಾಗ್ವೆ, ಪೆರು ಮೊದಲಾದ ದಕ್ಷಿಣ ಅಮೆರಿಕದ ರಾಷ್ಟ್ರಗಳ ಅಧ್ಯಕ್ಷರು ಸಭೆ ನಡೆಸಿ ವೆನೆಝುವೆಲ ಸಮಸ್ಯೆಗೆ ಪರಿಹಾರ ಕಾಣಲು ತಾವುಗಳು ಸಿದ್ಧವೆಂಬ ಠರಾವು ಮಂಡಿಸಿ ಮಡುರೋ ಸರಕಾರವನ್ನು ಉರುಳಿಸುವ ಕಾರ್ಯದಲ್ಲಿ ಜೊತೆಯಾಗಿವೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಮೈಕಾ ಬಹಮಾಸ್, ಹೈಟಿ, ಡೊಮಿನಿಕನ್ ರಿಪಬ್ಲಿಕ್ ಮೊದಲಾದ ದೇಶಗಳನ್ನು ವೆನೆಝುವೆಲದ ವಿರುದ್ಧ ಎತ್ತಿಕಟ್ಟಿ ಅಲ್ಲಿ ಶಾಂತಿಯುತ ‘ಪ್ರಜಾ ತಾಂತ್ರಿಕ’ ಬದಲಾವಣೆಗೆ ತಾನು ಬದ್ಧ ಎಂಬ ಸೋಗಲಾಡಿ ಮಾತುಗಳನ್ನು ಆಡಿದ್ದಾರೆ. ಹಲವಾರು ರಾಷ್ಟ್ರಗಳು ಅಮೆರಿಕ ಕುಮ್ಮಕ್ಕಿನಿಂದ ಗ್ವಾಯಿಡೋನನ್ನು ವೆನುಜಯೇಲಾದ ಮಧ್ಯಂತರ ಅಧ್ಯಕ್ಷನೆಂದು ಮಾನ್ಯ ಮಾಡಿವೆ. ಕ್ಯೂಬಾ, ರಶ್ಯಾ, ಚೀನಾ, ಬೊಲಿವಿಯಾ ಮೊದಲಾದ ರಾಷ್ಟ್ರಗಳು ಅಮೆರಿಕದ ಇಂತಹ ನಡೆಗಳನ್ನು ಖಂಡಿಸಿವೆ. ರಶ್ಯಾ ಹಾಗೂ ಚೀನಾ ವೆನೆಝುವೆಲದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬಾರದು ಎಂದೂ ಅಮೆರಿಕಕ್ಕೆ ಹೇಳಿವೆ. ರಶ್ಯಾ ವೆನೆಝುವೆಲದ ಸರಕಾರಿ ತೈಲ ಕಂಪೆನಿಗೆ ತಕ್ಷಣದ ಹಣಕಾಸು ಬಿಕ್ಕಟ್ಟನ್ನು ಎದುರಿಸಲು ಸಾಲವನ್ನೂ ನೀಡಿದೆ. ರಶ್ಯಾದ ಹಣಕಾಸು ಹಿತಾಸಕ್ತಿ ಕೂಡ ವೆನೆಝುವೆಲದಲ್ಲಿ ಇದೆ. ತನ್ನ ಸೈನಿಕ ತುಕಡಿಗಳನ್ನು ವೆನೆಝುವೆಲ ನೆರವಿಗೆ ರಶ್ಯಾ ನಿಯೋಜಿಸಿದೆ ಎಂದು ಹೇಳಲಾಗುತ್ತಿದೆ.
ವಿದೇಶದಲ್ಲಿರುವ ವೆನೆಝುವೆಲದ ಆಸ್ತಿ ಪಾಸ್ತಿ, ಬ್ಯಾಂಕ್ ಖಾತೆಗಳನ್ನು ಅಮೆರಿಕ ಸ್ತಂಭನಗೊಳಿಸಿದೆ. ಅಲ್ಲದೆ ಹಲವಾರು ಆಸ್ತಿಗಳನ್ನು ಏಕ ಪಕ್ಷೀಯವಾಗಿ ಅಂತರ್‌ರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ಮುಟ್ಟುಗೋಲು ಹಾಕಿಕೊಂಡಿದೆ. ಅಮೆರಿಕ ಆಣತಿಯಂತೆ ಇತರ ಹಲವು ದೇಶಗಳೂ ಇಂತಹ ನಡೆಗಳನ್ನು ಮಾಡಿವೆ. ಕೆಲವನ್ನು ಸ್ವಯಂ ಅಧ್ಯಕ್ಷನೆಂದು ಘೋಷಿಸಿಕೊಂಡಿರುವ ಗ್ವಾಯಿಡೋ ಸುಪರ್ದಿಗೆ ಒಪ್ಪಿಸಿದೆ. ಅಮೆರಿಕದ ಆಣತಿಯಂತೆ ಯೂರೋಪಿನ ರಾಷ್ಟ್ರಗಳು ಇಂತಹ ಕಾರ್ಯಗಳನ್ನು ಮಾಡಿವೆ. ವೆನೆಝುವೆಲದ ತೈಲವನ್ನು ಖರೀದಿಸದಂತೆ ಭಾರತವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಿಗೆ ಅಮೆರಿಕ ತಾಕೀತು ಮಾಡಿದೆ. ಹಾಗಾಗಿ ವೆನೆಝುವೆಲ ತನ್ನ ತೈಲ ವ್ಯಾಪಾರವನ್ನು ರಶ್ಯಾ ಹಾಗೂ ಚೀನಕ್ಕೆ ಹೆಚ್ಚಾಗಿ ಸೀಮಿತಗೊಳಿಸಬೇಕಾಗಿ ಬಂದಿದೆ.

ವೆನೆಝುವೆಲದ ಕಂಪೆನಿಗಳೊಂದಿಗೆ ವ್ಯವಹರಿಸುವ ಯಾವುದೇ ಕಂಪೆನಿಗಳ ಮೇಲೂ ಅಮೆರಿಕ ನಿರ್ಬಂಧ ಹೇರುವ ಬೆದರಿಕೆ ಹಾಕಿದೆ. ಈ ಬೆದರಿಕೆಯನ್ನು ರಶ್ಯಾ, ಚೀನಾ ಕಂಪೆನಿಗಳು ಮಾನ್ಯ ಮಾಡಿಲ್ಲ.
ಇದೆಲ್ಲದರಿಂದ ವೆನೆಝುವೆಲದ ಆರ್ಥಿಕತೆಗೆ ದೊಡ್ಡ ಪ್ರಮಾಣದ ನಷ್ಟ ಸಂಭವಿಸುತ್ತಿದೆ. ತೈಲ ಉತ್ಪಾದನೆ ಮೊದಲಿಗಿಂತ ಕುಸಿದಿದೆ. ವೆನೆಝುವೆಲ ಹೊಂದಿದ್ದ ವಿದೇಶಿ ಬಾಂಡುಗಳನ್ನು ನಗದಾಗಿ ಪರಿವರ್ತಿಸದಂತೆ ಅಮೆರಿಕ ತಡೆಯೊಡ್ಡಿದೆ. ವೆನೆಝುವೆಲದ ಬ್ಯಾಂಕುಗಳ ಮೇಲೆ ಅಮೆರಿಕ ನಿರ್ಬಂಧದ ಪರಿಣಾಮ ಅಂತರ್‌ರಾಷ್ಟ್ರೀಯ ಹಣಕಾಸು ವಹಿವಾಟಿಗೆ ತೊಂದರೆಯುಂಟಾಗಿದೆ.
 ಇದರ ಪರಿಣಾಮ ಅಲ್ಲಿನ ಜನಸಾಮಾನ್ಯರ ಮೇಲೆ ಆಗುತ್ತಿದೆ. ಔಷಧಿಗಳ ಕೊರತೆಯುಂಟಾಗಿದೆ. ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ರೋಗಗಳಿಂದ ಸಾಯುವವರು ಹೆಚ್ಚಾಗಿದ್ದಾರೆ. ಹಣದುಬ್ಬರ ತೀವ್ರ ಹಂತ ತಲುಪುತ್ತಿದೆ. ಸೈನಿಕರು ಸೇನೆ ತೊರೆದು ಆಶ್ರಯಕ್ಕಾಗಿ ಅಕ್ಕ ಪಕ್ಕದ ರಾಷ್ಟ್ರಗಳಿಗೆ ಹೋಗುತ್ತಿದ್ದಾರೆ ಎಂದೆಲ್ಲಾ ಪಾಶ್ಚಾತ್ಯ ಮಾಧ್ಯಮಗಳು ಹೇಳುತ್ತಿದ್ದರೂ ಅದು ಪೂರ್ತಿ ವಾಸ್ತವವಲ್ಲ. ಈ ವರದಿಗಳಲ್ಲಿ ಬಹುತೇಕವಾಗಿ ಅಮೆರಿಕ ಬೆಂಬಲಿತ ಸುಳ್ಳುವರದಿಗಳೇ ಹೆಚ್ಚಿವೆ.
ಆರ್ಥಿಕತೆಗೆ ಇದರಿಂದ ಒಂದಷ್ಟು ನಷ್ಟವಾದರೂ ವೆನೆಝುವೆಲ ಬಹಳ ಹಿಂದಿನಿಂದಲೂ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ನಿರ್ಬಂಧಗಳನ್ನು ಎದುರಿಸುತ್ತಲೇ ತನ್ನ ಹಿಂದಿನ ಹಿಂದುಳಿದಿರುವಿಕೆಯಿಂದ ಸಾಪೇಕ್ಷವಾಗಿ ಮುಂದುವರಿದು ಜನಸಾಮಾನ್ಯರ ತಲಾ ಆದಾಯ ಹಾಗೂ ಜೀವನ ಮಟ್ಟದಲ್ಲಿ ಏರಿಕೆಯನ್ನು ಸಾಧಿಸಿತ್ತು.


ಅಮೆರಿಕದ ಇಂತಹ ಕುಟಿಲ ತಂತ್ರಗಳು ವೆನೆಝುವೆಲಕ್ಕೆ ಹೊಸತೇನೂ ಅಲ್ಲ. ವೆನೆಝುವೆಲದ ಜನರು ಈ ಹಿಂದೆ ಅಮೆರಿಕ ಪ್ರಾಯೋಜಿತ ಸೇನಾ ಕ್ಷಿಪ್ರ ದಂಗೆಯನ್ನು ಸೋಲಿಸಿ ತಮ್ಮ ರಾಷ್ಟ್ರವನ್ನು ಹಾಗೂ ಸರಕಾರವನ್ನು ರಕ್ಷಿಸಿಕೊಂಡಿದ್ದರು. ಈ ಕ್ಷಿಪ್ರ ದಂಗೆಯಲ್ಲಿ ಅಮೆರಿಕ ಕುಪ್ರಸಿದ್ಧ ಬೇಹುಗಾರಿಕಾ ಸಂಸ್ಥೆ ಸಿಐಎಯ ನೇರ ಕೈವಾಡ ಇತ್ತು. ಹಿಂದಿನ ಅಧ್ಯಕ್ಷ ಹ್ಯೂಗೋ ಚಾವೇಜರನ್ನು ಕೊಲೆ ಮಾಡುವ ಪ್ರಯತ್ನವನ್ನೂ ಅಮೆರಿಕದ ಸಿಐಎ ಮಾಡಿತ್ತು ಎಂದು ಚಾವೇಜ್ ಸ್ವತಃ ಹೇಳಿಕೊಂಡಿದ್ದರು. ಹಾಗಾಗಿ ಅಂತಹ ಪ್ರಜ್ಞೆ ಇರುವ ವೆನೆಝುವೆಲ ಜನತೆ ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಸ್ವಯಂ ಪೂರ್ಣ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಬಲ್ಲರು ಎಂದೂ ಹೇಳಲಾಗುತ್ತಿದೆ. ಮಡುರೋ ಅಂತಹ ನಾಯಕತ್ವ ನೀಡಬಲ್ಲರೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಪ್ರಸ್ತುತ ವೆನೆಝುವೆಲ ಸೇನೆ ಚುನಾಯಿತ ಮಡುರೋ ಸರಕಾರದ ಹಿಡಿತದಲ್ಲಿದೆ.
ಅಮೆರಿಕ ವಿಶ್ವಸಂಸ್ಥೆಯ ಮೂಲಕ ಕೂಡ ವೆನೆಝುವೆಲದ ಮೇಲೆ ನಿರ್ಬಂಧ ಹೇರಿಸಲು ಪ್ರಯತ್ನ ಪಟ್ಟಿತ್ತು. ರಶ್ಯಾ ಹಾಗೂ ಚೀನಾ ವೀಟೋ ಚಲಾಯಿಸಿದ್ದರಿಂದ ಸಫಲವಾಗದೇ ಹೋಯಿತು. ಆದರೆ ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗ ಮಡುರೋ ಸರಕಾರ ವಿರೋಧಿಗಳನ್ನು ತೀವ್ರ ದಮನಿಸುತ್ತಾ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ ಹೇಳಿಕೆ ನೀಡಿದೆ. ಆದರೆ ಗ್ವಾಯಿಡೋ ಅಕ್ರಮವಾಗಿ ಚುನಾಯಿತ ಸರಕಾರವನ್ನು ಪರಿಗಣಿಸದೆ ತನ್ನನ್ನು ತಾನೇ ಮಧ್ಯಂತರ ಅಧ್ಯಕ್ಷನೆಂದು ಘೋಷಿಸಿಕೊಂಡಿರುವುದರ ಬಗ್ಗೆ ವಿಶ್ವಸಂಸ್ಥೆ ಹೇಳಿಕೆ ನೀಡಿದ ಬಗ್ಗೆ ವರದಿ ಕಾಣುತ್ತಿಲ್ಲ. ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ ಗ್ವಾಯಿಡೋನನ್ನು ಅಧಿಕೃತವಾಗಿ ವೆನೆಝುವೆಲದ ಪ್ರತಿನಿಧಿಯನ್ನಾಗಿ ಪರಿಗಣಿಸುವ ಹಂತದಲ್ಲಿದೆ. ಇವೆಲ್ಲಾ ಅಮೆರಿಕ ಸೇರಿದಂತೆ ಮುಂದುವರಿದ ಜಾಗತಿಕ ಬಂಡವಾಳಶಾಹಿ ರಾಷ್ಟ್ರಗಳ ತಾಳಕ್ಕೆ ತಕ್ಕಂತೆ ಕುಣಿಯುವ ನಡೆಗಳು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.
ಇದರ ಮಧ್ಯೆ ವೆನೆಝುವೆಲದ ವಿದ್ಯುತ್ ಜಾಲದ ಮೇಲೆ ಸೈಬರ್ ದಾಳಿ ನಡೆಸಿ ಆ ರಾಷ್ಟ್ರದ ವಿದ್ಯುತ್ ಜಾಲವನ್ನು ಸ್ತಂಭನಗೊಳಿಸುವ ಪ್ರಯತ್ನಗಳನ್ನು ನಡೆಸಲಾಯಿತು. ಈ ಬುಡಮೇಲು ಕೃತ್ಯದ ಹಿಂದೆ ಅಮೆರಿಕವಿದೆ ಎಂದು ಅಧ್ಯಕ್ಷ ಮಡುರೊ ಹೇಳಿದ್ದಾರೆ. ಈ ದಾಳಿಯಿಂದಾಗಿ ಮೂರು ದಿನಗಳ ಕಾಲ ರಾಷ್ಟ್ರದ ಹಲವು ಭಾಗ ಕತ್ತಲಲ್ಲಿ ಇರಬೇಕಾಯಿತು. ನೀರು ಸರಬರಾಜು ವ್ಯವಸ್ಥೆ ಇನ್ನಿತರ ವ್ಯವಸ್ಥೆಗಳು ಕೆಲಸ ನಿರ್ವಹಿಸದ ಪರಿಸ್ಥಿತಿ ಉದ್ಭವಿಸಿತ್ತು. ಆದರೆ ವೆನೆಝುವೆಲ ಸರಕಾರ ಸೈಬರ್ ದಾಳಿಯಾದ ತಕ್ಷಣವೇ ರಾಷ್ಟ್ರದ ವಿದ್ಯುತ್ ಜಾಲವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ರಾಷ್ಟ್ರದ ಹಲವು ಕಡೆಗಳಲ್ಲಿ ವಿದ್ಯುತ್ ಜಾಲವನ್ನು ಪುನರ್ ಸ್ಥಾಪಿಸಿತು. ಇದೀಗ ರಾಷ್ಟ್ರದ ವಿದ್ಯುತ್ ಜಾಲ ಹೆಚ್ಚೂ ಕಡಿಮೆ ಪುನರ್ ಸ್ಥಾಪನೆಗೊಂಡಿದೆ. ವಿದ್ಯುತ್ ಜಾಲಕ್ಕೆ ಸೇನಾ ರಕ್ಷಣೆ ನೀಡಲಾಗಿದೆ.
ವಿದ್ಯುತ್ ಜಾಲದ ಮೇಲೆ ದಾಳಿಯ ಬೆನ್ನಲ್ಲೇ ಅದನ್ನು ಬಳಸಿಕೊಂಡು ವಿರೋಧಿ ನಾಯಕ ಗ್ವಾಯಿಡೋ ನೇತೃತ್ವದಲ್ಲಿ ಮಡುರೋ ಸರಕಾರದ ವಿರುದ್ಧ ಜನರ ದಂಗೆಯನ್ನು ಸಂಘಟಿಸುವ ಯತ್ನ ನಡೆಯಿತು. ಈ ದಂಗೆಗೆ ವೆನೆಝುವೆಲದ ಹಲವು ಕಾರ್ಪೊರೇಟುಗಳು, ಶ್ರೀಮಂತ ವ್ಯಾಪಾರಸ್ಥರು ಹಾಗೂ ರಾಷ್ಟ್ರೀಕರಣವನ್ನು ವಿರೋಧಿಸುವ ಬಲ ಶಕ್ತಿಗಳ ಬೆಂಬಲ ಕೂಡ ಇತ್ತು. ವಿರೋಧ ಪಕ್ಷಗಳು ಕೂಡ ಈ ಶಕ್ತಿಗಳೊಂದಿಗೆ ಸೇರಿಕೊಂಡು ಮಡುರೋ ಸರಕಾರವನ್ನು ಉರುಳಿಸಿ ಅಮೆರಿಕದ ಬುಡಮೇಲು ಕೃತ್ಯಗಳಿಗೆ ಕೈ ಜೋಡಿಸಿವೆ. ಈ ಬಲ ಹಾಗೂ ಪೊಳ್ಳು ರಾಷ್ಟ್ರೀಯವಾದಿಗಳೇ ಅಮೆರಿಕದ ದಾಳಗಳಾಗಿ ವೆನೆಝುವೆಲದ ಹಿತಾಸಕ್ತಿಗಳನ್ನು ಅಡವಿಡುವ ಕೆಲಸಗಳಲ್ಲಿ ತೊಡಗಿವೆ.
 ಇವೆಲ್ಲದರ ಮಧ್ಯೆಯೂ ವೆನೆಝುವೆಲದ ಜನರು ಅಮೆರಿಕದ ವಿರುದ್ಧ ನಿಂತು ಹೋರಾಡುತ್ತಿದ್ದಾರೆ. ತಮ್ಮ ದೇಶದಲ್ಲಿ ಅಮೆರಿಕ ನಡೆಸುತ್ತಿರುವ ಹಸ್ತಕ್ಷೇಪಗಳನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಮಡುರೋ ಸರಕಾರದ ಪರವಾಗಿ ದೊಡ್ಡ ದೊಡ್ಡ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಅಮೆರಿಕ ವಿರೋಧಿ ಬೀದಿ ಪ್ರತಿಭಟನೆಗಳನ್ನು ರಾಷ್ಟ್ರದಾದ್ಯಂತ ನಡೆಸುತ್ತಿದ್ದಾರೆ. ಗ್ವಾಯಿಡೋ ಅಮೆರಿಕ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಗ್ವಾಯಿಡೋ ತನ್ನ ಬೆಂಬಲಿಗರ ಸಭೆಗಳನ್ನು ನಡೆಸುತ್ತಾ ನಾಗರಿಕ ಸೇವೆ ಹಾಗೂ ಸೇನೆ ಸರಕಾರದ ವಿರುದ್ಧ ನಿಲ್ಲುವಂತೆ ಕೆಲಸ ಮಾಡುತ್ತಿದ್ದಾನೆ. ಆದರೆ ಅದು ಅಷ್ಟಾಗಿ ಫಲ ನೀಡುತ್ತಿಲ್ಲ.
ಸರಕಾರ ಗ್ವಾಯಿಡೋಗೆ ಇದ್ದ ರಕ್ಷಣಾತ್ಮಕ ಕವಚಗಳನ್ನು ರದ್ದುಗೊಳಿಸಿ ಆತನ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ ಎಂಬ ಸುದ್ಧಿಯಿದೆ. ಆತನ ಮುಖ್ಯ ಸಿಬ್ಬಂದಿಯೊಬ್ಬನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಲಾಗಿದೆ.
 ಜಾಗತಿಕ ಬಂಡವಾಳಶಾಹಿ ಅಮೆರಿಕ ಮತ್ತಿತರ ರಾಷ್ಟ್ರಗಳು ತಮ್ಮ ಕುಸಿಯುತ್ತಿರುವ ಅರ್ಥ ವ್ಯವಸ್ಥೆಯನ್ನು ಹಿಡಿದಿಟ್ಟುಕೊಳ್ಳಲು ಎಲ್ಲಾ ಅಂತರ್‌ರಾಷ್ಟ್ರೀಯ ಕಾನೂನುಗಳು ಹಾಗೂ ಒಪ್ಪಂದಗಳನ್ನೂ ಉಲ್ಲಂಘಿಸುತ್ತವೆ. ಜಗತ್ತಿನ ಯಾವುದೇ ರಾಷ್ಟ್ರದ ಸಂಪತ್ತಾನ್ನಾದರೂ ಲೂಟಿ ಹೊಡೆಯಲು ಎಂತಹ ಕ್ರಮಗಳಿಗಾದರೂ ತೊಡಗುವುದು ಮಾಮೂಲಿ ವಿಚಾರ. ಅಲ್ಲಿ ಯಾವ ಪ್ರಜಾಪ್ರಭುತ್ವ ಸ್ಥಾಪನೆಯ ಉದ್ದೇಶವಾಗಲೀ ಜನಸಾಮಾನ್ಯರ ಹಿತ ರಕ್ಷಣೆಯಾಗಲೀ ಇರುವುದಿಲ್ಲ. ವಿಶ್ವಸಂಸ್ಥೆಯಾಗಲೀ ಇನ್ನಿತರ ಅಂತರ್‌ರಾಷ್ಟ್ರೀಯ ಸಂಘಟನೆಗಳಾಗಲೀ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳ ಬೆಂಬಲಕ್ಕೆ ನಿಂತುಬಿಡುತ್ತವೆ. ಇದಕ್ಕೆ ಇರಾಕ್, ಲಿಬಿಯಾದಂತಹ ಉದಾಹರಣೆಗಳು ಸಾಕಷ್ಟಿವೆ. ಅಮೆರಿಕದ ತಾಳಕ್ಕೆ ಜಗತ್ತಿನ ಎಲ್ಲಾ ಜನರು ಹಾಗೂ ಸರಕಾರಗಳು ಕುಣಿಯಬೇಕೆಂಬುದೇ ಅದರ ನೀತಿಯಾಗಿದೆ. ‘‘ವೆನೆಝುವೆಲ ವಿಚಾರದಲ್ಲಿ ಸೈನಿಕ ಕಾರ್ಯಾಚರಣೆ ಸೇರಿದಂತೆ ಎಲ್ಲಾ ಕ್ರಮಗಳ ಬಗ್ಗೆಯೂ ಮುಕ್ತವಾಗಿಟ್ಟಿದ್ದೇವೆ’’ ಎಂದು ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿದ್ದರೂ ಅದು ಅಷ್ಟು ಸುಲಭದ ವಿಚಾರವಾಗಿ ಉಳಿದಿಲ್ಲ. ಆದರೆ ಆರ್ಥಿಕ ಯುದ್ಧ ಒಂದಷ್ಟು ಕಾಲ ಮುಂದುವರಿಯಬಹುದು. ಜಗತ್ತಿನ ಎಲ್ಲಾ ಜನಸಾಮಾನ್ಯರು ಅಮೆರಿಕ ಮಿತ್ರ ಕೂಟಗಳ ಇಂತಹ ಅಕ್ರಮಗಳ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರಬೇಕಾಗಿದೆ.
nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News

ಜಗದಗಲ
ಜಗ ದಗಲ