ಚುನಾವಣೆ ಮತ್ತು ನಯನುಡಿಯ ಶಾಬ್ದಿಕ ಭಯೋತ್ಪಾದನೆ

Update: 2019-04-15 18:44 GMT

ವಿಚಾರವಾದಿಗಳಿಗೆ, ಬುದ್ಧಿಜೀವಿಗಳಿಗೆ ಸಂಬಂಧಿಸಿದಂತೆ ‘‘ಈ ನನ್‌ಮಕ್ಳಿಗೆ ಇವರ ಅಪ್ಪ ಅಮ್ಮ ಯಾರು ಅಂತ ಗೊತ್ತಿದೆಯೇ?’’ ಎನ್ನುವಲ್ಲಿಂದ ಆರಂಭಿಸಿ, ‘‘ನೆಗೆದು ಬಿದ್ದು ಹೋಗುತ್ತಾರೆ’’ ಎನ್ನುವಲ್ಲಿಯವರೆಗೆ ಅಸಾಂವಿಧಾನಿಕವಷ್ಟೇ ಅಲ್ಲ, ಅವಾಚ್ಯ, ಅಸಭ್ಯ, ಅಶ್ಲೀಲ ಪದ ಪುಂಜಗಳವರೆಗೆ ಹಿಂಸಾತ್ಮಕವೂ ಹೊಲಸೂ ಎನ್ನಬಹುದಾದ ಹತ್ತಾರು ‘ನಲ್ನುಡಿ’ಗಳು ನಮ್ಮ ರಾಜಕಾರಣಿಗಳ ಬೇಕಾಬಿಟ್ಟಿ ಬಾಯಿಯಿಂದ ಹೊರಬಂದಿವೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್.ಅನಂತಮೂರ್ತಿಯವರಿಗೆ ‘ಪಾಕಿಸ್ತಾನಕ್ಕೆ ಹೋಗಿ’ ಎಂದದ್ದಷ್ಟೇ ಅಲ್ಲದೆ ಅವರಿಗೆ ವಿಮಾನ ಟಿಕೆಟ್ ಕಳುಹಿಸುವ ಹಂತಕ್ಕೂ ಹೋದ ಮತಾಂಧರು ಮತ್ತು ಅವರ ಪರಿವಾರದವರು ವಿವಿಧ ಸಂದರ್ಭಗಳಲ್ಲಿ ತಮ್ಮ ಎದುರಾಳಿಗಳ ಕೈ ಕಾಲು ಕತ್ತರಿಸುವ, ಸಮುದ್ರಕ್ಕೆ ಎಸೆಯುವ, ನೇಣಿಗೇರಿಸುವ, ಗಾಂಧಿಯನ್ನು ಕೊಲ್ಲುವ, ತಲೆ ಕತ್ತರಿಸುವ, ಗುಂಡು ಹಾರಿಸುವ ಅಥವಾ ಗುಂಡು ಹೊಡೆಯಿರಿ ಎಂದು ಆಜ್ಞೆ ಮಾಡುವ ಉತ್ಸಾಹ ತೋರಿದ್ದಾರೆ.


ಪ್ರಾಣಿ ಸಂಕುಲದಲ್ಲಿ ತನ್ನ ಎದುರಾಳಿಯನ್ನು ಮಣಿಸಬೇಕಾದಾಗ, ಅದನ್ನು ಹೆದರಿಸಿ ದೂರ ಓಡಿಸ ಬೇಕಾದಾಗ ಪ್ರಾಣಿಗಳು ಬಳಸುವ ಹಲವು ತಂತ್ರಗಳಲ್ಲಿ ವಿವಿಧ ರೀತಿಯ ಧ್ವನಿಗಳನ್ನು ಹೊರಡಿಸುವುದು ಕೂಡ ಒಂದು.

ಬೊಗಳುವಿಕೆ, ಘರ್ಜನೆ, ಗುಟುರು ಹಾಕುವುದು, ಫೀಳಿಡುವುದು, ಬುಸ್ಸೆನ್ನುವುದು, ಹೂಂಕರಿಸುವುದು-ಇವೆಲ್ಲವುಗಳ ಮೂಲ ಉದ್ದೇಶ ಎದುರಾಳಿಯಲ್ಲಿ ಭಯ ಹುಟ್ಟಿಸಿ ಅದಕ್ಕೆ ತಾನಿನ್ನು ಕಾಳಗದಲ್ಲಿ ಗೆಲ್ಲಲಾರೆ ಎಂಬ ಅಧೈರ್ಯದ ಭಾವನೆ ಮೂಡಿಸಿ ಅದು ಕಾಲ್ಕೀಳುವಂತೆ ಮಾಡುವುದು.

ಹಾಗೆಯೇ ಸುಮಾರು 65 ಸಾವಿರ ವರ್ಷಗಳ ಹಿಂದೆ ತಾನು ಹೊರಡಿಸುವ ಧ್ವನಿಗಳನ್ನು, ಧ್ವನಿಮಾಗಳನ್ನು ವ್ಯವಸ್ಥೀಕರಿಸಿ ನಿಧಾನವಾಗಿ ಭಾಷೆಯನ್ನು ಸೃಷ್ಟಿಸಿಕೊಂಡ ಬಳಿಕ, ಕಾಲಾನು ಕ್ರಮದಲ್ಲಿ ಸಾವಿರಾರು ಭಾಷೆಗಳು ಅಸ್ತಿತ್ವಕ್ಕೆ ಬಂದ ಮೇಲೆ ಮನುಷ್ಯ ಪ್ರಾಣಿ ಕೂಡ ಭಾಷೆಯನ್ನು ತನ್ನ ಪ್ರಾಥಮಿಕ ಆವಶ್ಯಕತೆಗಳ ಅಭಿವ್ಯಕ್ತಿಗಷ್ಟೇ ಅಲ್ಲದೆ ತನ್ನ ಹಲವು ರೀತಿಯ ಎದುರಾಳಿಗಳನ್ನು, ಶತ್ರುಗಳನ್ನು ಬೆದರಿಸಿ ಸೋಲಿಸಲು ಕೂಡ ಬಳಸಿಕೊಳ್ಳ ಲಾರಂಭಿಸಿದ. ಭಯ ಹುಟ್ಟುವುದೇ ಶಬ್ದಗಳ ಜೋಡಣೆಯ ಒಂದು ನಿರ್ದಿಷ್ಟ ಶಾಬ್ದಿಕ ಕ್ರಮದಲ್ಲಿ ಎದುರಾಳಿಗೆ ಮುಖಾಮುಖಿಯಾದಾಗ ಅಥವಾ ಈಗಿನ ಹಾಗೆ ಮಾಧ್ಯಮವೊಂದರ ಮೂಲಕ ಆ ಶಬ್ದಗಳ ವ್ಯವಸ್ಥಿತ ಜೋಡಣೆಯನ್ನು ಎದುರಾಳಿಗೆ ರವಾನಿಸಿದಾಗ. ಹೀಗಾಗಿಯೇ, ಭಯೋತ್ಪಾದಕರು ತಾವು ನಡೆಸಲಿರುವ ಭಾವೀ ದಾಳಿಯ ಬಗ್ಗೆ ಕಳುಹಿಸುವ ಸಂದೇಶ ಅಥವಾ ವಿಮಾನ ಅಪಹರಣಕಾರರು ತಾವು ವಿಮಾನವನ್ನು ಹೈಜಾಕ್ ಮಾಡುತ್ತೇವೆಂದು ಸಂದೇಶದ ಸೋರಿಕೆ ಶಾಂತಿ ಪ್ರಿಯ ಜನರ ಮನಸ್ಸಿನಲ್ಲಿ ನಡುಕ ಹುಟ್ಟಿಸುತ್ತದೆ.

ಈಗ, ಹೀಗೆ ಶಬ್ದಗಳ ಬಳಕೆಯಲ್ಲೇ ತಮ್ಮ ಎದುರಾಳಿಗಳನ್ನು ಮಣಿಸುವ ತಂತ್ರದಲ್ಲಿ ನಮ್ಮ ಹಲವಾರು ರಾಜಕಾರಣಿಗಳು ಮಗ್ನರಾಗಿದ್ದಾರೆ. ಪ್ರಜಾಪ್ರಭುತ್ವವೊಂದರಲ್ಲಿ ನಾಗರಿಕರು ಬಳಸಬಹುದಾದ ಸುಸಂಸ್ಕೃತ ಹಾಗೂ ಸ್ವೀಕಾರಾರ್ಹ ಪದಗಳ ಎಲ್ಲೆಯನ್ನು ಮೀರಿ, ‘ಹೊಡಿ ಬಡಿ ಕೊಲ್ಲು’ ಎನ್ನುವ ಪದಗಳನ್ನು ಬಳಸದೆ ಪರೋಕ್ಷವಾಗಿ ಇವುಗಳಿಗಿಂತಲೂ ಹೆಚ್ಚು ಹಿಂಸಾತ್ಮಕವಾದ ಹಾಗೂ ಸಭ್ಯತೆಯನ್ನು ಮೀರಿದ ಪದಗಳ ಹಾಗೂ ಮಾತುಗಳ ಸರಣಿಗೆ ಮೊರೆ ಹೋಗುತ್ತಿದ್ದಾರೆ.

ಕಳೆದ ಕೆಲವು ವಾರಗಳಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ, ರಾಜಕಾರಣಿಗಳು ತಮ್ಮ ಚುನಾವಣಾ ಪ್ರತಿಸ್ಪರ್ಧಿಗಳನ್ನು ಟೀಕಿಸಲು, ಖಂಡಿಸಲು, ಹಳಿಯಲು, ಬೆದರಿಸಲು ಬಳಸುತ್ತಿರುವ ಪದಪುಂಜಗಳನ್ನು ಗಮನಿಸುತ್ತಿರುವವರಿಗೆ ಈ ದೇಶದ ರಾಜಕಾರಣದಲ್ಲಿ ಯಾವ ರೀತಿಯ ರಾಜಕೀಯ ಪರಿಭಾಷೆ ಅಸ್ತಿತ್ವಕ್ಕೆ ಬಂದಿದೆ ಎಂಬುದು ಸ್ವಯಂವೇದ್ಯ.

ವಿಚಾರವಾದಿಗಳಿಗೆ, ಬುದ್ಧಿಜೀವಿಗಳಿಗೆ ಸಂಬಂಧಿಸಿದಂತೆ ‘‘ಈ ನನ್‌ಮಕ್ಳಿಗೆ ಇವರ ಅಪ್ಪ ಅಮ್ಮ ಯಾರು ಅಂತ ಗೊತ್ತಿದೆಯೇ?’’ ಎನ್ನುವಲ್ಲಿಂದ ಆರಂಭಿಸಿ, ‘‘ನೆಗೆದು ಬಿದ್ದು ಹೋಗುತ್ತಾರೆ’’ ಎನ್ನುವಲ್ಲಿಯವರೆಗೆ ಅಸಾಂವಿಧಾನಿಕವಷ್ಟೇ ಅಲ್ಲ, ಅವಾಚ್ಯ, ಅಸಭ್ಯ, ಅಶ್ಲೀಲ ಪದ ಪುಂಜಗಳವರೆಗೆ ಹಿಂಸಾತ್ಮಕವೂ ಹೊಲಸೂ ಎನ್ನಬಹುದಾದ ಹತ್ತಾರು ‘ನಲ್ನುಡಿ’ಗಳು ನಮ್ಮ ರಾಜಕಾರಣಿಗಳ ಬೇಕಾಬಿಟ್ಟಿ ಬಾಯಿಯಿಂದ ಹೊರಬಂದಿವೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್.ಅನಂತಮೂರ್ತಿಯವರಿಗೆ ‘ಪಾಕಿಸ್ತಾನಕ್ಕೆ ಹೋಗಿ’ ಎಂದದ್ದಷ್ಟೇ ಅಲ್ಲದೆ ಅವರಿಗೆ ವಿಮಾನ ಟಿಕೆಟ್ ಕಳುಹಿಸುವ ಹಂತಕ್ಕೂ ಹೋದ ಮತಾಂಧರು ಮತ್ತು ಅವರ ಪರಿವಾರದವರು ವಿವಿಧ ಸಂದರ್ಭಗಳಲ್ಲಿ ತಮ್ಮ ಎದುರಾಳಿಗಳ ಕೈ ಕಾಲು ಕತ್ತರಿಸುವ, ಸಮುದ್ರಕ್ಕೆ ಎಸೆಯುವ, ನೇಣಿಗೇರಿಸುವ, ಗಾಂಧಿಯನ್ನು ಕೊಲ್ಲುವ, ತಲೆ ಕತ್ತರಿಸುವ, ಗುಂಡು ಹಾರಿಸುವ ಅಥವಾ ಗುಂಡು ಹೊಡೆಯಿರಿ ಎಂದು ಆಜ್ಞೆ ಮಾಡುವ ಉತ್ಸಾಹ ತೋರಿದ್ದಾರೆ. ನಮ್ಮ ನಾಯಕ ಶಿಖಾಮಣಿಗಳು ಮತ್ತು ಅವರ ವಿವಿಧ ‘ಮಠ’ಗಳ ‘ಮಾಣಿ’ಗಳು ಬಳಸಿರುವ ಇಂತಹ ಸುಮಾರು ಇಪ್ಪತ್ತು ಅಪರೂಪದ ಹಿಂಸಾತ್ಮಕ ಪದ ಪುಂಜಗಳ ಒಂದು ಮಿನಿ ಪದಕೋಶವನ್ನೇ ಇತ್ತೀಚೆಗೆ ದಲಿತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಕನ್ನಡದ ಓದುಗರ ಮುಂದೆ ಇಟ್ಟಿದ್ದಾರೆ.

ಶಾಂತಿ ಸೌಹಾರ್ದ ಸಾಮರಸ್ಯದಿಂದ ವಿವಿಧ ಜಾತಿ, ಮತ, ಧರ್ಮಗಳು ನಮ್ಮ ಸಂವಿಧಾನ ನೀಡಿರುವ ಗ್ಯಾರಂಟಿಗಳ ಆಧಾರದಲ್ಲಿ ತಮ್ಮ ಪಾಡಿಗೆ ತಾವು ಬದುಕುತ್ತಿರುವ ಭಾರತದಂತಹ ಒಂದು ಬಹುಮುಖಿ ಸಂಸ್ಕೃತಿಯಲ್ಲಿ ‘‘ನಾವು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸುತ್ತೇವೆ’’ ಎನ್ನುವಂತಹ, ತೋರಿಕೆಗೆ ಯಾವುದೇ ಹಿಂಸಾತ್ಮಕ ಪದಕೋಶ, ವ್ಯಾಕರಣ ಇಲ್ಲದ ಒಂದು ವಾಕ್ಯ ಕೂಡ ದೇಶದ ಕೋಟಿಗಟ್ಟಲೆ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಬೆಚ್ಚಿ ಬೀಳುವಂತೆ ಮಾಡುತ್ತದೆ. ಯಾಕೆಂದರೆ ಈ ವಾಕ್ಯದಲ್ಲಿರುವ ತುಂಬ ಸರಳವಾದ ‘ಬದಲಿಸು’ ಎನ್ನುವ ಶಬ್ದ ಕಾರ್ಯಗತಗೊಂಡಾಗ ಯಾವ್ಯಾವ ರೀತಿಯ ಹಿಂಸೆ, ರಕ್ತಪಾತ, ಮಾರಣ ಹೋಮಗಳು ನಡೆಯಬಹುದೆನ್ನುವುದನ್ನು ಕಲ್ಪಿಸಿಕೊಳ್ಳಬಲ್ಲವರಿಗೆ ಈ ವಾಕ್ಯ ಶಾಬ್ದಿಕ ಭಯೋತ್ಪಾದನೆಯ ಪರಾಕಾಷ್ಠೆಯಾಗಿ ಕಾಣಿಸುತ್ತದೆ. ಒಂದು ರಾಷ್ಟ್ರ, ಒಬ್ಬ ನಾಯಕ, ಒಂದು ಭಾಷೆ, ಒಂದು ಆಜ್ಞೆ ಎಂಬುದನ್ನು ಸಾಕಾರಗೊಳಿಸ ಹೊರಟ ಹಿಟ್ಲರ್ ಅರುವತ್ತು ಲಕ್ಷ ಯಹೂದಿಗಳ ನರಮೇಧ ನಡೆಸಿದ್ದು ವಿಶ್ವದ ಇತಿಹಾಸದ ಮುಂದೆ ಇರುವಾಗ ಸಾವಿರಾರು ಜಾತಿ, ನೂರಾರು ಭಾಷೆ, ಹತ್ತಾರು ಧರ್ಮ, ನಂಬಿಕೆಯ ಕ್ರಮಗಳಿರುವ ವಿವಿಧತೆಯ, ಬಹುಮುಖತೆಯ ಒಂದು ದೇಶದಲ್ಲಿ ‘ಸರ್ವರಿಗೂ ಸಮಪಾಲು ಸಮಬಾಳು’ ನೀಡುವ ಒಂದು ಸಂವಿಧಾನವನ್ನೇ ಬದಲಿಸಿಬಿಟ್ಟರೆ ಏನೇನು ಅನಾಹುತ ಸಂಭವಿಸಬಹುದೆಂಬುದು ಊಹಾತೀತ. ಆದ್ದರಿಂದಲೇ ಚುನಾವಣೆಯ ವೇಳೆ ಸಂವಿಧಾನ ಬದಲಾವಣೆಯ ಪರಿಕಲ್ಪನೆಯೇ ದೇಶದ ಹಲವು ಸಮುದಾಯಗಳಿಗೆ ಭಾವೀ ಭಯೋತ್ಪಾದನೆಯ ಮುನ್ಸೂಚನೆಯಾಗಿ ಕಾಣಬಹುದು. ನಯನುಡಿಯನ್ನು ಬಳಸಿ ಒಂದು ಪ್ರಭುತ್ವ ಯಾವ ರೀತಿಯಲ್ಲಿ ಜನತೆಯನ್ನು ದಮನಿಸಿಬಹುದೆಂಬುದನ್ನು ಜಾರ್ಜ್ ಆರ್ವೆಲ್ ತನ್ನ ‘ಪಾಲಿಟಿಕ್ಸ್ ಆ್ಯಂಡ್ ದಿ ಇಂಗ್ಲಿಷ್ ಲ್ಯಾಂಗ್ವೇಜ್’ ಎಂಬ ಪ್ರಬಂಧದಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾನೆ.

ಚುನಾವಣೆಯೊಂದರ ಸಂದರ್ಭದಲ್ಲಿ ರಾಜಕಾರಣಿಗಳು, ರಾಜಕೀಯ ನಾಯಕರು ಬಳಸುವ ಭಾಷೆ ಅವರ ಬದುಕಿನ ಹಿನ್ನೆಲೆ, ಅವರ ಶಿಕ್ಷಣದ ಮಟ್ಟ, ಸಂಸ್ಕೃತಿಯನ್ನಷ್ಟೇ ಹೇಳುವುದಲ್ಲ. ಅದು ಅವರ ಪಕ್ಷದ ಧೋರಣೆ ಮತ್ತು ಒಟ್ಟು ಸಿದ್ಧಾಂತವನ್ನೂ ಪ್ರತಿಫಲಿಸುತ್ತದೆ. ಇದಕ್ಕೆ ಒಂದು ಉದಾಹರಣೆ ಕೊಡಬಹುದು. ಮೂರು ದಶಕಗಳ ಹಿಂದೆ ಚುನಾವಣೆಯೊಂದರ ಸಂದರ್ಭ ರಾಜಕೀಯ ಮುತ್ಸದ್ದಿ, ‘ವೌಲ್ಯಾಧಾರಿತ ರಾಜಕೀಯ’ದ ರೂವಾರಿ ದಿವಂಗತ ರಾಮಕೃಷ್ಣ ಹೆಗಡೆಯವರು ಉಡುಪಿಯ ರಥಬೀದಿಯಲ್ಲಿ ಭಾಷಣ ಮಾಡುತ್ತ, ವಿಪಕ್ಷವೊಂದು ತಾನು ಬಳಸಿದೆನೆಂದು ಆಪಾದಿಸಿದ ಆಕ್ಷೇಪಾರ್ಹ ಪದವನ್ನು ತಾನು ಬಳಸಿಲ್ಲ ಎಂದು ಹೇಳುತ್ತ ಆಡಿದ ಮಾತು: ‘‘ಅದು ನನ್ನ ಭಾಷೆ ಅಲ್ಲ’’.

ಬೇರೆ ಮಾತಿನಲ್ಲಿ ಹೇಳುವುದಾದರೆ, ಅದು ನನ್ನಂತಹ ಸುಸಂಸ್ಕೃತ ಜವಾಬ್ದಾರಿಯುತ ನಾಯಕ ಬಳಸುವ ಭಾಷೆಯಲ್ಲ. ಅಂತಹ ಪದದ ಬಳಕೆ, ಭಾಷಾ ಪ್ರಯೋಗ ನನ್ನ ರಾಜಕೀಯ ಸಂಸ್ಕೃತಿಯಲ್ಲ ಎಂದು ಅವರ ಆ ಮಾತು ಧ್ವನಿಸುತ್ತಿತ್ತು. ನಮ್ಮ ಇಂದಿನ ಎಷ್ಟು ಮಂದಿ ಕೊಳಕು ಭಾಷಾಪ್ರಿಯ, ಶಾಬ್ದಿಕ ಭಯೋತ್ಪಾದಕ ರಾಜಕಾರಣಿಗಳು ಹೀಗೆ ‘ಅದು ನನ್ನ ಭಾಷೆ ಅಲ್ಲ’ ಎಂದು ಹೇಳಬಲ್ಲರು?

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News