ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೂ ಮತ ಚಲಾಯಿಸಬಹುದೇ?: ಇಲ್ಲಿದೆ ವೈರಲ್ ಸಂದೇಶದ ಹಿಂದಿನ ವಾಸ್ತವ

Update: 2019-04-16 17:22 GMT

ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಹೆಸರಿನಲ್ಲಿ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಂದೇಶವು ಈ ರೀತಿಯಿದೆ:

“►ನೀವು ಮತಗಟ್ಟೆಗೆ ತೆರಳಿದಾಗ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿರುವುದನ್ನು ಗಮನಿಸುತ್ತೀರಿ. ಆಗ ನಿಮ್ಮ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ತೋರಿಸಿ ಸೆಕ್ಷನ್ 49ಎ ಪ್ರಕಾರ ‘ಚಾಲೆಂಜ್ ವೋಟ್’ಗೆ ಅವಕಾಶ ಕೇಳಿ ನಿಮ್ಮ ಮತ ಚಲಾಯಿಸಿ.

►ಈಗಾಗಲೇ ನಿಮ್ಮ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎನ್ನುವುದು ತಿಳಿದುಬಂದರೆ ‘ಟೆಂಡರ್ ವೋಟ್’ಗೆ ಅವಕಾಶ ಕೇಳಿ ಮತ ಚಲಾಯಿಸಿ.

►ಯಾವುದಾದರೂ ಮತಗಟ್ಟೆಯಲ್ಲಿ 14 ಶೇ.ಕ್ಕಿಂತ ಹೆಚ್ಚು ‘ಟೆಂಡರ್ ವೋಟ್’ಗಳು ದಾಖಲಾದರೆ ಅಂತಹ ಮತಗಟ್ಟೆಗಳಲ್ಲಿ ಮರುಮತದಾನ ನಡೆಯಲಿದೆ.

►ಈ ಮಹತ್ವದ ಸಂದೇವನ್ನು ಸಾಧ್ಯವಾದಷ್ಟು ಗ್ರೂಪ್ ಗಳಿಗೆ ಮತ್ತು ಗೆಳೆಯರೊಂದಿಗೆ ಹಂಚಿಕೊಳ್ಳಿ. ತಮ್ಮ ತಮ್ಮ ಮತದಾನದ ಹಕ್ಕಿನ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲಿ”.

ಸಂದೇಶ ಸುಳ್ಳೇ?, ಸತ್ಯವೇ?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸಂದೇಶ ಸ್ವಲ್ಪ ಮಟ್ಟಿಗೆ ಸರಿಯಾಗಿದೆ.

“ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ನಿಮ್ಮ ಆಧಾರ್ ಕಾರ್ಡ್ ವೋಟರ್ ಐಡಿ ತೋರಿಸಿ 49ಎ ಪ್ರಕಾರ ಮತ ಚಲಾಯಿಸಿ” ಎಂದು ಸಂದೇಶದಲ್ಲಿ ಬರೆಯಲಾಗಿದೆ. ಆದರೆ ಇದು ಸುಳ್ಳು.

ಮತದಾರರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಇಲ್ಲದಿದ್ದಲ್ಲಿ, ಆತನಿಗೆ ಮತ ಚಲಾಯಿಸಲು ಸಾಧ್ಯವಿಲ್ಲ. ಮತದಾರರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಸೇರ್ಪಡೆಗೊಂಡ ನಂತರವಷ್ಟೇ ಭಾರತೀಯ ಚುನಾವಣಾ ಆಯೋಗವು ಒಬ್ಬ ನಾಗರಿಕನಿಗೆ ವೋಟರ್ ಐಡಿ ನೀಡುತ್ತದೆ. ಒಬ್ಬ ವ್ಯಕ್ತಿಯ ಬಳಿ ವೋಟರ್ ಐಡಿ ಇದ್ದ ಮಾತ್ರಕ್ಕೆ ಆತ ಮತ ಚಲಾಯಿಸಲು ಸಾಧ್ಯ ಎಂದರ್ಥವಲ್ಲ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿರುವುದು ಕಡ್ಡಾಯ.

ಸಂದೇಶದಲ್ಲಿ ‘ಚಾಲೆಂಜ್ ವೋಟ್’ ಎಂದು ಬರೆಯಲಾಗಿದೆ ಹಾಗು 49ಎ ಸೆಕ್ಷನ್ ಅನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ.

“ನಿಮ್ಮ ಮತವನ್ನು ಅದಾಗಲೇ ಯಾರೋ ಚಲಾಯಿಸಿದ್ದಾರೆ ಎನ್ನುವುದು ತಿಳಿದುಬಂದರೆ ‘ಟೆಂಡರ್ ವೋಟ್’ ಅವಕಾಶ ಕೇಳಿ ಮತ ಚಲಾಯಿಸಿ ಎಂದು ಮತ್ತೊಂದು ವಾಕ್ಯದಲ್ಲಿದೆ. ಇದು ಸತ್ಯ.

ಚುನಾವಣಾ ನಿಯಮಗಳ ಪ್ರಕಾರ ಈಗಾಗಲೇ ತಮ್ಮ ಮತ ಚಲಾಯಿಸಲಾಗಿದೆ ಎಂದು ಮತಗಟ್ಟೆ ಅಧಿಕಾರಿ ಓರ್ವ ವ್ಯಕ್ತಿಗೆ ಮಾಹಿತಿ ನೀಡಿದರೆ, ಕೂಡಲೇ ಈ ವಿಚಾರವನ್ನು ಚುನಾವಣಾಧಿಕಾರಿಯ ಗಮನಕ್ಕೆ ತರಬೇಕು. ಈ ಸಂದರ್ಭದಲ್ಲಿ ಅಧಿಕಾರಿಯು ಗುರುತನ್ನು ಖಚಿತಪಡಿಸಿಕೊಳ್ಳಲು ಕಲೆ ಪ್ರಶ್ನೆಗಳನ್ನು ಕೇಳಬಹುದು.

ವ್ಯಕ್ತಿಯ ಗುರುತು ಪತ್ತೆ ಖಚಿತಗೊಂಡಲ್ಲಿ ಅಧಿಕಾರಿಯು ಟೆಂಡರ್ ವೋಟಿಂಗ್ ಗೆ ಅವಕಾಶ ನೀಡುತ್ತಾರೆ. ವ್ಯಕ್ತಿಗೆ ಟೆಂಡರ್ಡ್ ಬ್ಯಾಲೆಟ್ ಪೇಪರ್ ನೀಡಲಾಗುತ್ತದೆ.

ಯಾವುದಾದರೂ ಮತಗಟ್ಟೆಯಲ್ಲಿ 14 ಶೇ.ಕ್ಕಿಂತ ಹೆಚ್ಚು ‘ಟೆಂಡರ್ ವೋಟ್’ಗಳು ದಾಖಲಾದರೆ ಅಂತಹ ಮತಗಟ್ಟೆಗಳಲ್ಲಿ ಮರುಮತದಾನ ನಡೆಯಲಿದೆ ಎನ್ನುವುದು ಸಂದೇಶದ ಕೊನೆಯ ಅಂಶವಾಗಿದೆ. ಇದು ಸುಳ್ಳು. ಈ ಬಗ್ಗೆ ಜೊತೆ ಮಾತನಾಡಿದ ಭಾರತೀಯ ಚುನಾವಣಾ ಆಯೋಗದ ನಿರ್ದೇಶಕರಾದ ಪದ್ಮಾ ಆಂಗ್ಮೋ, “ಹೈಕೋರ್ಟ್ ನಿರ್ದೇಶನದ ನಂತರವಷ್ಟೇ ಟೆಂಡರ್ಡ್ ಮತಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News