ಕಾಂಗ್ರೆಸ್‌ನವರಿಂದ ಕೀಳು ಮಟ್ಟದ ರಾಜಕಾರಣ: ಬಿ.ಎಸ್.ಯಡಿಯೂರಪ್ಪ

Update: 2019-04-16 17:39 GMT

ಬೆಂಗಳೂರು, ಎ.16: ಕಾಂಗ್ರೆಸ್‌ನವರು ಚುನಾವಣೆಯನ್ನು ಗೆಲ್ಲಲು ಎಂತಹ ಕೀಳು ಮಟ್ಟಕ್ಕಾದರು ಇಳಿಯುತ್ತಾರೆ ಎಂದು ತೋರಿಸಿಕೊಟ್ಟಿದೆ. 2018ರ ಮೊದಲು ಕಾಂಗ್ರೆಸ್‌ನವರಿಗೆ ಒಂದೇ ಗುರಿ ಇತ್ತು. ಅದೇನೆಂದರೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಮತ್ತು ನನ್ನನ್ನು ಮುಖ್ಯಮಂತ್ರಿ ಆಗಲು ಬಿಡಬಾರದು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದು ರಾಜ್ಯ ಮಟ್ಟದ ಪಿತೂರಿ ಎಂದು ಅನಿಸುತ್ತಿದ್ದರೂ ಇದು ರಾಷ್ಟ್ರಮಟ್ಟದ ಪಿತೂರಿಯಾಗಿದೆ. ಬಿಜೆಪಿ ದಕ್ಷಿಣದಲ್ಲಿ ಬೆಳೆಯಬಾರದು ಎಂಬ ಒಂದೇ ಉದ್ದೇಶ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರಿಗಿದೆ ಎಂದು ದೂರಿದ್ದಾರೆ.

ಎಂ.ಬಿ.ಪಾಟೀಲ್ ಅವರು ಸೋನಿಯಾಗಾಂಧಿಗೆ ಬರೆದ ಪತ್ರದ ಮೊದಲನೆ ಸಾಲಿನಲ್ಲೇ ‘ನೀವು ಸಲಹೆ ಕೊಟ್ಟಂತೆ’ ಎಂದು ಪ್ರಾರಂಭವಾಗುತ್ತದೆ. ಅಂದರೆ, ಕಾಂಗ್ರೆಸ್ ರಾಷ್ಟ್ರ ನಾಯಕರು ಈ ಸಂಚಿನ ಒಂದು ಭಾಗವಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ದೇಶದ ಅಖಂಡತೆ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು, ಈ ರೀತಿ ಒಂದು ಜನಾಂಗವನ್ನು ಒಡೆದು ಆಳುವ ನೀತಿಗೆ ಕೈ ಹಾಕುವುದು ಎಂತಹ ದೇಶದ್ರೋಹ ನೀವೆ ಊಹಿಸಿ. ಇದೆಲ್ಲದಕ್ಕೂ ಮಿಗಿಲಾಗಿ ಕಾಂಗ್ರೆಸ್ ಈ ವಿಷಯದಲ್ಲಿ ಬೇರೆ ಧರ್ಮದ ಸಂಸ್ಥೆಗಳ ಸಹಾಯ ಪಡೆಯುವುದು ಎಷ್ಟರ ಮಟ್ಟಿಗೆ ಇವರಿಗೆ ರಾಷ್ಟ್ರೀಯತೆ ಇದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ರಾಜ್ಯ ನಾಯಕರು, ರಾಜ್ಯದಲ್ಲಿ ಬಿಜೆಪಿಗೆ ವಿಧಾನಸಭೆ ಚುನಾವಣಾ ಪೂರ್ವ ಬೆಂಬಲ ನೋಡಿ ಗಾಬರಿಯಾಗಿದ್ದರು. ಅವರ ಅಭಿವೃದ್ಧಿಯ ಪೊಳ್ಳು ಭರವಸೆಗಳು ಜನರನ್ನು ರೊಚ್ಚಿಗೆಬ್ಬಿಸಿದ್ದವು. ‘ನಮ್ಮ ಸೋಲು ನಿಶ್ಚಿತ’ ಎಂದು ಅರಿತ ಕಾಂಗ್ರೆಸ್ ನಾಯಕರು, ಈ ಧರ್ಮ ಒಡೆಯುವ ಹೀನ ಕೆಲಸಕ್ಕೆ ಕೈ ಹಾಕಿದ್ದರು. ಆದರೆ, ನಮ್ಮ ಮೇಲಿರುವ ಜನರ ವಿಶ್ವಾಸ, ಕಾಂಗ್ರೆಸ್‌ನ್ನು ಸೋಲುವಂತೆ ಮಾಡಿತ್ತು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದ ಜನ ಕಾಂಗ್ರೆಸ್ ಕುತಂತ್ರ ರಾಜಕೀಯವನ್ನು ಅರಿತಿದ್ದಾರೆ. ನಮ್ಮ ಕರ್ನಾಟಕದ ಜನ ಎಂದೂ ಕಾಂಗ್ರೆಸ್ ಕುತಂತ್ರಗಳಿಗೆ ಬಲಿಯಾಗುವುದಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ ಮತ್ತು ಈ ಲೋಕಸಭಾ ಚುನಾವಣೆಯಲ್ಲಿ ಸಹ ಸಾಬೀತುಪಡಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಯಾವಾಗಲೂ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದು, ಹಿಂದು, ಕ್ರಿಶ್ಚಿಯನ್, ಮುಸ್ಲಿಂ ಎಲ್ಲರೂ ಒಂದೇ ಎಂಬುದು ನನ್ನ ನಿಲುವು, ಅದರಂತೆ ಹಿಂದೆ ಆಡಳಿತ ಕೊಟ್ಟಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಸಿದ್ದರಾಮಯ್ಯನವರಿಂದ ಹಿಡಿದು ಎಲ್ಲ ಕಾಂಗ್ರೆಸ್ ನಾಯಕರು, ತಮ್ಮ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಳ್ಳಲಿ. ಇನ್ನು ಮುಂದೆ ದೇವರು, ಅವರುಗಳಿಗೆ ಈ ಒಡೆದಾಳುವ ನೀತಿಯನ್ನು ಕೈ ಬಿಟ್ಟು, ಎಲ್ಲ ಸಮಾಜದವರು ನಮ್ಮವರು, ಎಲ್ಲರೂ ಒಂದೇ ಎನ್ನುವ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News