ಬಿಜೆಪಿ-ಬಿಎಸ್‌ವೈ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ: ದಿನೇಶ್ ಗುಂಡೂರಾವ್

Update: 2019-04-16 17:54 GMT

ಬೆಂಗಳೂರು, ಎ.16: ಕಾಂಗ್ರೆಸ್ ಪಕ್ಷವು ಧರ್ಮವನ್ನು ಒಡೆಯಲು ಅಂದಿನ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾಗಾಂಧಿ ಸಲಹೆಯಂತೆ ಮುಂದಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿರುವುದು ಅವರ ಘನತೆಗೆ ತಕ್ಕುದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಚಿವ ಎಂ.ಬಿ.ಪಾಟೀಲ್ ಅಧೀನದಲ್ಲಿರುವ ಬಿಎಲ್‌ಇಡಿ ವಿದ್ಯಾಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಎಂ.ಬಿ.ಪಾಟೀಲ್, ಸೋನಿಯಾಗಾಂಧಿಗೆ ಬೇರೆ ಧರ್ಮದ ಸಂಸ್ಥೆಗಳ ಸಹಾಯದಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭ ದೊರೆಯುವಂತೆ ವೀರಶೈವ ಲಿಂಗಾಯತ ಧರ್ಮವನ್ನು ತಾವು ಮತ್ತು ತಮ್ಮ ಸ್ನೇಹಿತರು ಸೇರಿ ಒಡೆಯುತ್ತೇವೆಂದು ಮತ್ತು ರಾಜ್ಯದಲ್ಲಿ ಹೋರಾಟವನ್ನು ಮಾಡುತ್ತೇವೆಂದು ಬರೆದ ಪತ್ರ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಈ ಪತ್ರವು ನೈಜವಲ್ಲವೆಂದು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕಳಂಕ ಬರುವಂತೆ ಚುನಾವಣಾ ಪೂರ್ವದಲ್ಲಿ ಮಾಡಿದ ದುರುದ್ದೇಶಪೂರ್ವಕ ಪ್ರಯತ್ನವೆಂದು ಕಾಂಗ್ರೆಸ್ ಪಕ್ಷ ಯಡಿಯೂರಪ್ಪ ಹೇಳಿಕೆಯನ್ನು ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಎಂ.ಬಿ.ಪಾಟೀಲ್ ಈ ವಿಚಾರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ. ಬೋಗಸ್ ಪತ್ರಗಳನ್ನು ಸೃಷ್ಟಿಸಿ ಅತ್ಯಂತ ಹಳೆಯದಾದ ರಾಷ್ಟ್ರೀಯತೆಯನ್ನೂ ಮತ್ತು ಜಾತ್ಯತೀತ ನಿಲುವನ್ನು ತನ್ನ ಕಾರ್ಯವೈಖರಿಯಿಂದ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಇಂತಹ ಕೀಳುಮಟ್ಟದ ಅಪಪ್ರಚಾರಗಳನ್ನು ಹಬ್ಬಿಸುತ್ತಿರುವ ಬಿಜೆಪಿ ಮತ್ತು ಯಡಿಯೂರಪ್ಪ ಬಗ್ಗೆ ಕಾನೂನು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷ ಎಂ.ಬಿ.ಪಾಟೀಲ್‌ಗೆ ಸೂಚಿಸಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಯಡಿಯೂರಪ್ಪ ತಾವು ಮುಖ್ಯಮಂತ್ರಿ ಆಗುವುದನ್ನು ಕಾಂಗ್ರೆಸ್ ಪಕ್ಷವು ಅಡ್ಡಿಪಡಿಸಲು ಎಂತಹ ಹೆಜ್ಜೆಯನ್ನಾದರೂ ಇಡುವುದೆಂದು ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ರಾಜ್ಯದ ಜನತೆ ಬಹುಮತ ನೀಡಿಲ್ಲವಾದ್ದರಿಂದ ಯಡಿಯೂರಪ್ಪ ಹತಾಶರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣಾ ಪೂರ್ವದಲ್ಲಿ ಅವರೂ ಮತ್ತು ಅವರ ಪಕ್ಷದ ನಾಯಕರು, ಚುನಾವಣಾ ನಂತರ ಯಡಿಯೂರಪ್ಪನವರೇ ಮುಖ್ಯಮಂತ್ರಿ ಎಂದು ಘೋಷಿಸುವುದರ ಮೂಲಕ ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಹೋರಾಡುವುದು ಅವರ ಹಕ್ಕು. ಆದರೆ, ಒಮ್ಮೆ ಜನತೆ ತೀರ್ಪುಕೊಟ್ಟ ನಂತರ ಅನೈತಿಕ ದಾರಿಯಿಂದ ಅಧಿಕಾರಕ್ಕೆ ಬರುವ ಆಸೆಗಳನ್ನು ಹೊಂದಿರುವುದು ರಾಜಕೀಯ ವ್ಯಭಿಚಾರ. ಬಿಜೆಪಿಗೆ ಜನತೆ ಬರುವ ಚುನಾವಣೆಯಲ್ಲಿ ಸೂಕ್ತ ಉತ್ತರವನ್ನು ಕೊಡುತ್ತಾರೆಂದು ಕಾಂಗ್ರೆಸ್ ಪಕ್ಷ ಎಚ್ಚರಿಕೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಯಡಿಯೂರಪ್ಪ ಉನ್ನತ ಹುದ್ದೆಯಲ್ಲಿ ಇದ್ದವರು, ಮತ್ತು ವಿಚಾರಗಳನ್ನು ಪೂರ್ಣ ಅರಿಯದೆ ದುಡುಕಿನಿಂದ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಬೇಕೆಂದು ಸಲಹೆ ನೀಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಪತ್ರಿಕಾ ಹೇಳಿಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News