‘ಜೀವದಾನ’ಕ್ಕೆ ಬ್ಯಾಂಕುಗಳ ನಕಾರ: ತಾತ್ಕಾಲಿಕವಾಗಿ ಕಾರ್ಯಾಚರಣೆಗಳನ್ನು ನಿಲ್ಲಿಸಿದ ಜೆಟ್ ಏರ್‌ವೇಸ್

Update: 2019-04-17 16:31 GMT

ಮುಂಬೈ, ಎ.17: ಕಳೆದ ನಾಲ್ಕು ತಿಂಗಳುಗಳಿಂದಲೂ ಆರ್ಥಿಕ ಮುಗ್ಗಟ್ಟಿನ ಸುಳಿಯಲ್ಲಿ ಸಿಲುಕಿದ್ದ,ಕಳೆದ 25 ವರ್ಷಗಳಿಂದಲೂ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದ್ದ ಜೆಟ್ ಏರ್‌ವೇಸ್‌ನ ಆಟ ಹೆಚ್ಚುಕಡಿಮೆ ಮುಗಿದಂತಾಗಿದೆ. 400 ಕೋ.ರೂ.ಗಳ ‘ಜೀವದಾನ’ದ  ತನ್ನ ಕೋರಿಕೆಯನ್ನು ಎಸ್‌ಬಿಐ ನೇತೃತ್ವದ ಸಾಲದಾತ ಬ್ಯಾಂಕುಗಳು ತಿರಸ್ಕರಿಸಿದ ಬಳಿಕ ಅದು ಬುಧವಾರದಿಂದಲೇ ತನ್ನೆಲ್ಲ ಅಂತರರಾಷ್ಟ್ರೀಯ ಮತ್ತು ದೇಶಿಯ ಯಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ತನ್ನ ಕೊನೆಯ ವಿಮಾನಯಾನವನ್ನು ರಾತ್ರಿ 10:30ಕ್ಕೆ ಅಮೃತಸರ ಮತ್ತು ದಿಲ್ಲಿ ನಡುವೆ ನಿರ್ವಹಿಸಿದೆ.

ಸಾಲದಾತ ಬ್ಯಾಂಕುಗಳು ಅಥವಾ ಇತರ ಯಾವುದೇ ಮೂಲಗಳಿಂದ ತುರ್ತು ಹಣಕಾಸು ನೆರವು ಲಭ್ಯವಾಗುತ್ತಿಲ್ಲ. ಕಾರ್ಯಾಚರಣೆಗಳನ್ನು ನಡೆಸಲು ಅಗತ್ಯವಾಗಿರುವ ಇಂಧನ ಮತ್ತು ಇತರ ಪ್ರಮುಖ ಸೇವೆಗಳಿಗೆ ಹಣ ಪಾವತಿಸಲು ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣದಿಂದಲೇ ಎಲ್ಲ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಜೆಟ್ ಏರ್‌ವೇಸ್ ತಿಳಿಸಿದೆ.

ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯು 400 ಕೋ.ರೂ.ಗಳ ತುರ್ತು ನೆರವಿಗಾಗಿ ಸಾಲದಾತ ಬ್ಯಾಂಕುಗಳಿಗೆ ಅಂತಿಮ ಮನವಿಯನ್ನು ಮಾಡಿಕೊಳ್ಳಲು ಮತ್ತು ಬೇಡಿಕೆಯು ಈಡೇರದಿದ್ದರೆ ಬುಧವಾರ ಸಂಸ್ಥೆಯ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರವೊಂದನ್ನು ಕೈಗೊಳ್ಳಲು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಯ ದುಬೆ ಅವರಿಗೆ ಅಧಿಕಾರ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News