ಭಾರೀ ಪ್ರಮಾಣದ ಸ್ಫೋಟಕ ಪತ್ತೆ: ಇಬ್ಬರ ಬಂಧನ

Update: 2019-04-17 17:03 GMT

ಬಂಡಾ (ಉತ್ತರಪ್ರದೇಶ), ಎ. 17: 200 ಡಿಟೋನೇಟರ್ ಹಾಗೂ 1200 ಜಿಲೆಟಿನ್ ಕಡ್ಡಿ ಸಹಿತ ಭಾರೀ ಪ್ರಮಾಣದ ಸ್ಫೋಟಕಗಳನ್ನು ಜಿಲ್ಲೆಯ ಎರಡು ಮನೆಗಳಿಂದ ವಶಪಡಿಸಿಕೊಳ್ಳಲಾಗಿದೆ ಹಾಗೂ ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬರುವಾ ಸೋಯಾಗಢ ಹಾಗೂ ಚಂದ್ರನಗರ ಗ್ರಾಮಗಳ ಎರಡು ಮನೆಗಳ ಮೇಲೆ ದಾಳಿ ನಡೆಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಾಲ್ ಭರತ್ ಕುಮಾರ್ ಪಾಲ್ ಹೇಳಿದ್ದಾರೆ.

ಈ ಮನೆಗಳಿಂದ 200 ಡಿಟೋನೇಟರ್, 2 ಕ್ವಿಂಟಾಲ್ ಅಮೋನಿಯಂ ನೈಟ್ರೇಟ್, 1200 ಜಿಲೆಟಿನ್ ಕಡ್ಡಿ, ಸ್ಫೋಟಕ ಹಾಗೂ ಸ್ಫೋಟಕಕ್ಕೆ ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅನುರಾಗಿ ಹಾಗೂ ವಿಜಯ್ ಶಂಕರ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇವರಿಬ್ಬರೂ ಸ್ಫೋಟಕ ಸಾಮಗ್ರಿಗಳನ್ನು ದಾಸ್ತಾನು ಮಾಡುವ ಯಾವುದೇ ಪರವಾನಿಗೆ ಹೊಂದಿಲ್ಲ. ಗಣಿಗಾರಿಕೆಗಳಲ್ಲಿ ಸ್ಫೋಟ ನಡೆಸಲು ಇವರು ಈ ಸಾಮಗ್ರಿಗಳನ್ನು ಬಳಸುತ್ತಿದ್ದರು. ಇವರಿಬ್ಬರು ಗಣಿಯನ್ನು ಲೀಸ್‌ಗೆ ಪಡೆದುಕೊಂಡಿದ್ದರು ಎಂದು ಪಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News