ಮೋದಿ ಹೆಲಿಕಾಪ್ಟರ್ ತಪಾಸಣೆ: ಚುನಾವಣಾ ವೀಕ್ಷಕ ಅಮಾನತು
ಹೊಸದಿಲ್ಲಿ, ಎ.17: ಒಡಿಶಾದ ಸಂಬಲಪುರ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಮುಹಮ್ಮದ್ ಮುಹ್ಸಿನ್ ಅವರನ್ನು ಚುನಾವಣಾ ಆಯೋಗವು ಮುಂದಿನ ಆದೇಶದವರೆಗೆ ಅಮಾನತುಗೊಳಿಸಿದೆ.
ಸೋಮವಾರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಬಲಪುರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಫ್ಲೈಯಿಂಗ್ ಸ್ಕ್ವಾಡ್ ತಂಡವೊಂದು ಅವರ ಹೆಲಿಕಾಪ್ಟರ್‌ನ್ನು ತಪಾಸಣೆಗೊಳಪಡಿಸಿದ್ದ ಹಿನ್ನೆಲೆಯಲ್ಲಿ ಆಯೋಗದ ಈ ಆದೇಶ ಹೊರಬಿದ್ದಿದೆ.
ಎಸ್‌ಪಿಜಿ ರಕ್ಷಣೆಯಲ್ಲಿರುವ ಗಣ್ಯರ ಕುರಿತು ನಿರ್ದೇಶಗಳಿಗೆ ಅನುಸಾರವಾಗಿ ಮುಹ್ಸಿನ್ ಕಾರ್ಯ ನಿರ್ವಹಿಸಿಲ್ಲ, ಹೀಗಾಗಿ ಅವರು ಕರ್ತವ್ಯಲೋಪವನ್ನೆಸ ಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆಯೋಗವು ತಿಳಿಸಿದೆ. ಅಮಾನತು ಆದೇಶವು ತಕ್ಷಣದಿಂದಲೇ ಜಾರಿಗೊಂಡಿದೆ.
ಮೋದಿ ಹೆಲಿಕಾಪ್ಟರ್‌ನ ತಪಾಸಣೆ ನಡೆದಿದ್ದನ್ನು ಬಿಜೆಪಿ ನಾಯಕರೋರ್ವರು ದೃಢಪಡಿಸಿದ್ದಾರೆ. ತಪಾಸಣೆಯಲ್ಲಿ ಮುಹ್ಸಿನ್ ಪಾತ್ರವೇನಿತ್ತು ಎನ್ನುವುದು ಸ್ಪಷ್ಟವಾಗಿಲ್ಲ.
ಘಟನೆಯ ಬಳಿಕ ಉಪ ಚುನಾವಣಾ ಆಯುಕ್ತರು ಸಂಬಲಪುರಕ್ಕೆ ತೆರಳಿ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭಂ ಸಕ್ಸೇನಾ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ.
ಚುನಾವಣಾ ಆಯೋಗವು ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುವಂತಾಗಲು ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಸಾಮಾನ್ಯ ವೀಕ್ಷಕರನ್ನು ನೇಮಕಗೊಳಿಸುತ್ತದೆ.