ಗುರುಗ್ರಾಮ ಹಿಂಸಾಚಾರದ ಅಪರಾಧಿಗಳಿಗೆ ಯಾಕೆ ಶಿಕ್ಷೆಯಿಲ್ಲ?

Update: 2019-04-17 18:31 GMT

ಘೋರ ಅಪರಾಧಗಳನ್ನು ಎಸಗಿದರೂ, ಪ್ರಭಾವಿ ದುಷ್ಕರ್ಮಿಗಳಿಗೆ ಶಿಕ್ಷೆಯಾಗುತ್ತಿಲ್ಲ ಹಾಗೂ ಅವರಿಗೆ ಕಾನೂನು ಅನುಷ್ಠಾನ ಸಂಸ್ಥೆಗಳು ಸಂಪೂರ್ಣವಾಗಿ ಶರಣಾಗುತ್ತಿವೆಯೆಂಬುವುದಕ್ಕೆ ಈ ಘಟನೆಯು ನಿದರ್ಶನವಾಗಿದೆ. ಒಂದು ವೇಳೆ ಮುಹಮ್ಮದ್ ಸಾಜಿದ್ ಕುಟುಂಬಕ್ಕೆ ಬೆದರಿಕೆಯೊಡ್ಡಿ, ಅವರನ್ನು ವೌನವಾಗಿಸಿದಲ್ಲಿ ಅಥವಾ ಅವರು ಬಲವಂತವಾಗಿ ಮನೆಯನ್ನು ತೊರೆದು ಹೋಗುವಂತಾದಲ್ಲಿ, ಒಂದು ವೇಳೆ ಆರೋಪಿಗಳ ವಿರುದ್ಧ ಸ್ಪಷ್ಟವಾದ ಪುರಾವೆಗಳಿದ್ದ ಹೊರತಾಗಿಯೂ ಅವರಿಗೆ ಶಿಕ್ಷೆಯಾಗದೆ ಹೋದಲ್ಲಿ ನಮ್ಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಪ್ರಜಾತಾಂತ್ರಿಕ ಹಾಗೂ ಜಾತ್ಯತೀತ ಸ್ವರೂಪಕ್ಕೆ ಭಾರೀ ಹೊಡೆತ ಬೀಳಲಿದೆ. 

ಈ ವರದಿಯನ್ನು ‘ಯುನೈಟೆಡ್ ಎಗೇಯಿನ್‌ಸ್ಟ್ ಹೇಟ್’ ತಂಡದ ಸದಸ್ಯರಾದ ಸೌರಭ್ ಮಿಶ್ರಾ, ಬನೋಜ್ಯೋತ್ಸ್ನಾ ಲಾಹಿರಿ, ಫರ್ಹಾ ಶಕೀಬ್, ಸೈಯದ್ ಫರ್ಮಾನ್ ಅಹ್ಮದ್, ನಿಕಿತಾ ಚತುರ್ವೇದಿ, ತಮನ್ನಾ ಪಂಕಜ್ ಹಾಗೂ ಶಹೀದ್ ಚೌಧರಿ ಅವರನ್ನೊಳಗೊಂಡ ತಂಡವು ರಚಿಸಿದೆ. ತಂಡವು 2019ರ ಮಾರ್ಚ್27ರಂದು ಸಂತ್ರಸ್ತ ಮುಹಮ್ಮದ್ ಸಾಜಿದ್ ಹಾಗೂ ಅವರ ಕುಟುಂಬವನ್ನು ಸಂದರ್ಶಿಸಿತ್ತು.

ಗುರುಗ್ರಾಮ ಸಮೀಪದ ಭೊಂಡ್ಸಿ ಗ್ರಾಮದ ನಿವಾಸಿಗಳಾದ ಮುಹಮ್ಮದ್ ಸಾಜಿದ್ ಹಾಗೂ ಅವರ ಕುಟುಂಬಿಕರ ಬದುಕು, ಮಾರ್ಚ್ 21ರಂದು ಸಂಜೆ ಅನಿರೀಕ್ಷಿತವಾದ ತಿರುವನ್ನು ಪಡೆದುಕೊಂಡಿತು. ಇಲ್ಲದೆ ಹೋದಲ್ಲಿ, ಅದೊಂದು ಹೋಳಿ ಹಬ್ಬದ ದಿನದ ಆರಾಮದಾಯಕವಾದ ಮಧ್ಯಾಹ್ನವಾಗಿರುತ್ತಿತ್ತು. ಸಾಜಿದ್, ಅವರ ಪುತ್ರರು ಹಾಗೂ ಅವರ ಮನೆಗೆ ಭೇಟಿ ನೀಡಿದ್ದ ಕೆಲವು ಬಂಧುಗಳು, ಮನೆಯ ಮುಂದಿನ ಖಾಲಿ ಗದ್ದೆಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆ ಹೊತ್ತಿಗೆ ನಯಾಗಾಂವ್‌ನ ನಿವಾಸಿಗಳಾದ ಇಬ್ಬರು ಹದಿಹರೆಯದ ಯುವಕರು, ಬೈಕ್‌ನಲ್ಲಿ ಬಂದು, ತಮ್ಮಿಂದಿಗೆ ಆಡುವಂತೆ ಅವರನ್ನು ಒತ್ತಾಯಿಸಿದರು. ಆದರೆ ಸಾಜಿದ್ ಕುಟುಂಬಿಕರ ಕ್ರಿಕೆಟ್ ಆಟ ಮಧ್ಯದ ಹಂತದಲ್ಲಿತ್ತು. ಹೀಗಾಗಿ ಅವರಿಗೆ ಅದನ್ನು ಅರ್ಧದಲ್ಲೇ ನಿಲ್ಲಿಸುವುದು ಬೇಕಿರಲಿಲ್ಲ. ಹೀಗಾಗಿ ಅವರು ನಿರಾಕರಿಸಿಬಿಟ್ಟರು. ತರುವಾಯ ಈ ವಿಷಯವಾಗಿ ಎರಡೂ ಕಡೆಯವರಿಗೆ ವಾಗ್ವಾದ ನಡೆಯಿತು. ಸಾಜಿದ್ ಹೇಳುವ ಪ್ರಕಾರ ಅವರ ಮೇಲೆ ಯುವಕರು, ಕೋಮುವಾದಿ ನಿಂದನೆಗಳನ್ನು ಮಾಡಿದರು. ‘‘ನೀವು ಮುಲ್ಲಾಗಳು, ಪಾಕಿಸ್ತಾನಕ್ಕೆ ಹೋಗಿ ಯಾಕೆ ಕ್ರಿಕೆಟ್ ಆಡಬಾರದು’’ ಎಂದು ಬೈಯತೊಡಗಿದರು. ಇದಾದ ಬಳಿಕ ಆ ಯುವಕರು ಸ್ಥಳದಿಂದ ನಿರ್ಗಮಿಸಿದರು. ಕೆಲವೇ ನಿಮಿಷಗಳಲ್ಲಿ ಅವರಿಬ್ಬರು ಎರಡು ಬೈಕ್‌ಗಳಲ್ಲಿ ಆರು ಮಂದಿಯೊಂದಿಗೆ ಮತ್ತೆ ಬಂದರು. ಅವರೆಲ್ಲರೂ ಲಾಠಿಗಳು, ಕಬ್ಬಿಣದ ರಾಡ್‌ಗಳು ಹಾಗೂ ಭರ್ಚಿಗಳೊಂದಿಗೆ ಆಗಮಿಸಿದ್ದರು.
  ಸಾಜಿದ್ ಅವರ ಮನೆಯೊಳಗೆ ನುಗ್ಗಿದ ಗುಂಪು, ಅಲ್ಲಿದ್ದ ಪ್ರತಿಯೊಬ್ಬರಿಗೂ ಹಿಗ್ಗಾಮಗ್ಗಾ ಥಳಿಸತೊಡಗಿತು. ದುಷ್ಕರ್ಮಿಗಳು ನಡೆಸಿದ ಹಲ್ಲೆಯ ಕೆಲವು ದೃಶ್ಯಗಳನ್ನು ಸಾಜಿದ್ ಕುಟುಂಬದ ಸದಸ್ಯರು ಅದರಲ್ಲೂ ಬಹುತೇಕವಾಗಿ ಮನೆಯ ತಾರಸಿಯಲ್ಲಿ ರಕ್ಷಣೆ ಪಡೆದುಕೊಂಡಿದ್ದ ಮಹಿಳೆಯರು ಸೆರೆಹಿಡಿದಿದ್ದರು.
ಅದೇ ವೀಡಿಯೊಗಳು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಮ್ಮ ವೀಡಿಯೊ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ದಾಳಿಕೋರರು ಭರ್ಚಿಗಳು ಹಾಗೂ ರಾಡ್‌ಗಳನ್ನು ಬಳಸಿಕೊಂಡು, ತಾರಸಿಯ ಬಾಗಿಲನ್ನು ಒಡೆಯಲು ಯತ್ನಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. ತಮ್ಮ ದುಷ್ಕೃತ್ಯಗಳು ವೀಡಿಯೊದಲ್ಲಿ ರೆಕಾರ್ಡ್ ಆಗಿರುವುದರಿಂದ ತೊಂದರೆಗೆ ಸಿಲುಕಿಕೊಳ್ಳಬಹುದೆಂಬುದನ್ನು ಗ್ರಹಿಸಿದ ಅವರು ಸ್ಥಳದಿಂದ ಕಾಲ್ಕಿತ್ತರು. ಆದರೆ ವೀಡಿಯೊದಲ್ಲಿ ಸೆರೆಹಿಡಿದಿರುವುದಕ್ಕಿಂತಲೂ ಈ ದಾಳಿಯು ಅತ್ಯಂತ ಗಂಭೀರ ಸ್ವರೂಪದ್ದಾಗಿತ್ತು.
 ಇಡೀ ಮನೆಯನ್ನು ಸುತ್ತುವರಿದ ಗುಂಪು ಕಲ್ಲುಗಳನ್ನು ಎಸೆದು ಕಿಟಕಿ ಗಾಜುಗಳನ್ನ್ನು ಒಡೆದುಹಾಕಿದರು. ಒಂದೇ ಸಮನೆ ಧಾರ್ಮಿಕ ನಿಂದನೆಗಳನ್ನು ಮಾಡತೊಡಗಿದರು. ಮಕ್ಕಳು ಸೇರಿದಂತೆ ಕೆಳಗಿನ ಮಹಡಿಯಲ್ಲಿದ್ದ ಕುಟುಂಬದ ಸದಸ್ಯರಿಗೆ ಹಿಗ್ಗಾಮುಗ್ಗಾ ಥಳಿಸಿದರು. ಕಪಾಟಿನೊಳಗೆ ಹಾಗೂ ಮಂಚದಡಿಯಲ್ಲಿ ಅವಿತುಕೊಂಡಿದ್ದ ಭಯಭೀತರಾದ ಮಕ್ಕಳನ್ನು ಹೊರಗೆಳೆದು, ಅವರ ಚರ್ಮ ಸುಲಿದುಹೋಗುವಂತೆ ಥಳಿಸಿದರು. ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಹಾಗೂ ನಗದನ್ನು ಗೂಂಡಾಗಳು ಅಪಹರಿಸಿದರು. ಮುಹಮ್ಮದ್ ಸಾಜಿದ್, ಮುಹಮ್ಮದ್ ಇರ್ಶಾದ್, ಮುಹಮ್ಮದ್ ಶದಾಬ್, ಶ್ರೀಮತಿ ಶಕ್ರೀನ್, ಆಬಿದ್, ಶಾರುಖ್, ಸಮೀನಾ, ದಿಲ್‌ಶಾದ್, ನರ್ಗೀಸ್, ಅಫೀಫಾ ಹಾಗೂ ಅಮೀರ್ ಅವರಿಗೂ ದುಷ್ಕರ್ಮಿಗಳು ಮಾರಣಾಂತಿಕವಾಗಿ ಥಳಿಸಿದರು. ವಾಸ್ತವಿಕವಾಗಿ ತಮ್ಮ ಏಟುಗಳಿಂದಾಗಿ ಅವರೆಲ್ಲ ಸತ್ತುಹೋಗಿದ್ದಾರೆಂದು ದಾಳಿಕೋರರು ಭಾವಿಸಿದ್ದರು.
 ದಾಳಿಕೋರರು ಪರಾರಿಯಾದ ಬಳಿಕ ಭಯಗ್ರಸ್ತಗೊಂಡ ಕುಟುಂಬವು 100 ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಪೊಲೀಸರನ್ನು ಸಂಪರ್ಕಿಸಲು ಯತ್ನಿಸಿತು. ಆದರೆ ಅವರಿಗೆ ಅದು ಸಾಧ್ಯವಾಗಲಿಲ್ಲ. ಕೊನೆಗೂ ಗಾಯಾಳುಗಳನ್ನು ಅವರು ಖಾಸಗಿ ಕಾರಿನಲ್ಲಿ ಏಮ್ಸ್ ಆಸ್ಪತ್ರೆಗೆ ಕೊಂಡೊಯ್ದರು. ಇನ್ನೋರ್ವ ವ್ಯಕ್ತಿ ಪೊಲೀಸರಿಗೆ ವಿಷಯ ತಿಳಿಸಲು ಪೊಲೀಸ್ ಠಾಣೆಗೆ ಧಾವಿಸಿದರು.
  ಮಾನವಹಕ್ಕುಗಳ ಸಂಘಟನೆಯಾದ ದ್ವೇಷದ ವಿರುದ್ಧ ಏಕತೆ(ಯುಎಎಚ್)ಯ ಸದಸ್ಯರು ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು 2019ರ ಮಾರ್ಚ್ 25ರಂದು ಭೇಟಿ ಮಾಡಿದರು. ಕೆಲವು ದಿನಗಳ ಬಳಿಕ ತಂಡವು ಸಂತ್ರಸ್ತರನ್ನು ಅವರ ಮನೆಯಲ್ಲಿ ಭೇಟಿ ಮಾಡಿತು. ಇಡೀ ಮನೆಯು ರಣರಂಗದಲ್ಲಿರುವ ಆಸ್ಪತ್ರೆಯಂತೆ ಕಾಣುತ್ತಿತ್ತು. ಕಿಟಕಿಯ ಗಾಜು ಒಡೆದು ಎಲ್ಲೆಡೆಯೂ ಚೆಲ್ಲಾಪಿಲ್ಲಿಯಾಗಿ ಚದುರಿಬಿದ್ದಿದ್ದವು ಹಾಗೂ ಗೋಡೆಗಳ ಮೇಲೆ ಕಬ್ಬಿಣದ ರಾಡ್‌ಗಳು ಹಾಗೂ ಭರ್ಚಿಗಳಿಂದಾದ ಗುರುತುಗಳಿದ್ದವು. ಗೂಂಡಾಗಳು ಬಲವಂತವಾಗಿ ಒಳನುಗ್ಗಿದ್ದರಿಂದ ಕಿಟಕಿ, ಬಾಗಿಲುಗಳು ಮುರಿದುಹೋಗಿದ್ದವು. ಮನೆಯ ಪ್ರತಿಯೊಂದು ಕೊಠಡಿಯಲ್ಲಿಯೂ, ಪ್ರತಿಯೊಂದು ಹಾಸಿಗೆಯಲ್ಲೂ ಒಬ್ಬ ಅಥವಾ ಇಬ್ಬರು ಗಾಯಾಳುಗಳು ಮಲಗಿರುವುದನ್ನು ಕಂಡರು. ಇನ್ನು ಕೆಲವರು ಮನೆಯೊಳಗೆ ಅತ್ತ ಇತ್ತ ಸುತ್ತಾಡುತ್ತಿದ್ದು, ಅವರು ತೀವ್ರವಾದ ಒತ್ತಡ ಹಾಗೂ ಅಪಘಾತಕ್ಕೊಳಗಾದವರಂತೆ ಕಂಡುಬರುತ್ತಿದ್ದರು. ಮನೆಯ ಪ್ರತಿಯೊಬ್ಬ ಕುಟುಂಬ ಸದಸ್ಯರನ್ನೂ ಭೀತಿಯು ಆವರಿಸಿರುವುದು ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ‘‘ಆ ದಿನದಿಂದಲೂ ಮಕ್ಕಳು ಪ್ರತಿದಿನವೂ ಅಳುತ್ತಿರುತ್ತಾರೆ. ‘ವೋ ರಂಗ್‌ವಾಲೆ ಲೋಗ್ ಫಿರ್ ಸೆ ಆಜಾಯೇಂಗೆ ಅಬ್ಬು. ಭಾಗ್ ಚಲ್ತೆ ಹೈ ಯಹಾ ಸೇ’ ಎಂದವರು ಭಯದಿಂದ ಕೂಗುತ್ತಿರುತ್ತಾರೆ’’ ಎಂದು ಮನೆಯವರು ದುಗುಡದಿಂದ ಹೇಳುತ್ತಾರೆ.
 ಬೆಳಗ್ಗೆ ಹೋಲಿ ಆಡಿದ ದಾಳಿಕೋರರು, ಸಂಜೆಯ ಹೊತ್ತಿಗೆ ಲಾಠಿಗಳು ಹಾಗೂ ಭರ್ಚಿಗಳೊಂದಿಗೆ ತಮ್ಮನ್ನು ಕೊಲ್ಲಲು ಬಂದಿರುವುದು ಈ ಮುಗ್ಧ ಮಕ್ಕಳ ಮನಸ್ಸಿಗೆ ಆಘಾತವನ್ನುಂಟು ಮಾಡಿತ್ತು. ಒಂದನ್ನು ಬಿಟ್ಟು ಮನೆಯ ಉಳಿದೆಲ್ಲ ಬಾಗಿಲುಗಳನ್ನು ಅವರು ಒಡೆದುಹಾಕಿದ್ದರು. ಮಹಿಳೆಯರು ಹಾಗೂ ಬಾಲಕಿಯರು ಮತ್ತು ಓರ್ವ ಸಣ್ಣ ವಯಸ್ಸಿನ ಹುಡುಗ ರಕ್ಷಣೆ ಪಡೆದುಕೊಂಡಿದ್ದ ತಾರಸಿಗೆ ಹೋಗುವ ಬಾಗಿಲನ್ನು ಒಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ತಾರಸಿಯಿಂದ ದಾನಿಶ್ತಾ ಹಾಗೂ ಇನ್ನೋರ್ವ ಬಾಲಕಿ ವೀಡಿಯೊದಲ್ಲಿ ದಾಳಿಯ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಆಕ್ರಮಣಕಾರರು ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದಕ್ಕೆ ಪುರಾವೆಯಾಗಿ ತಾರಸಿಯ ಬಾಗಿಲಿನ ಮೇಲೆ ಭರ್ಚಿ ಹಾಗೂ ರಾಡ್‌ಗಳಿಂದಾದ ಗುರುತುಗಳು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದಾಗ್ಯೂ, ಗೂಂಡಾಗಳಿಗೆ ಬಾಗಿಲನ್ನು ಒಡೆಯಲು ಸಾಧ್ಯವಾಗಲಿಲ್ಲ. ‘‘ ಅಲ್ಲಾಹು ನಮ್ಮಿಂದಿಗಿದ್ದು, ಬಾಗಿಲನ್ನು ಒಡೆಯದಂತೆ ನೋಡಿಕೊಂಡ’’ ಎಂದು ಸಾಜಿದ್ ಅವರ ಕಿರಿಯ ಸೊಸೆ ನರ್ಗೀಸ್ ಭಾವುಕರಾಗಿ ಹೇಳುತ್ತಾರೆ.
 ಸ್ಥಳೀಯ ನೆರೆಹೊರೆಯವರು ಕೂಡಾ ಕುಟುಂಬದ ರಕ್ಷಣೆಗೆ ಧಾವಿಸಲಿಲ್ಲವೆಂದು ಸಾಜಿದ್ ಹೇಳುತ್ತಾರೆ. ಹೋಲಿ ಹಬ್ಬವಾದದ್ದರಿಂದ ಅವರಲ್ಲಿ ಹೆಚ್ಚಿನವರು ಮನೆಯಲ್ಲಿದ್ದಿರಲಿಲ್ಲ. ಉಳಿದವರು ನಾವು ದಾಳಿಗೊಳಗಾಗುವುದನ್ನು ಹಾಗೂ ಥಳಿತಕ್ಕೊಳಗಾದುದನ್ನು ದೂರದಿಂದಲೇ ನೋಡಿದರು. ಬಹುಶಃ ಅವರು ಕೂಡಾ ಭಯಭೀತರಾಗಿರಬೇಕು ಎಂದವರು ಊಹಿಸುತ್ತಾರೆ. ವಾಸ್ತವಿಕವಾಗಿ ಭೂಪ್‌ಸಿಂಗ್ ಕಾಲನಿಯು, ಹಳೆಯ ಬಡಾವಣೆಯೇನೂ ಅಲ್ಲ. ಅದೊಂದು ಹೊಸದಾಗಿ ಅಭಿವೃದ್ಧಿಪಡಿಸಿದ ವಿರಳ ಜನಸಂಖ್ಯೆಯಿರುವ ಕಾಲನಿಯಾಗಿದೆ. ಇಲ್ಲಿನ ನಿವಾಸಿಗಳಲ್ಲಿ ಹೆಚ್ಚಿನವರು ಗುರುಗ್ರಾಮದ ವಿಶಾಲವಾದ ಕೈಗಾರಿಕಾ ವಲಯದಲ್ಲಿ ದುಡಿಯುವ ವಲಸಿಗ ಕಾರ್ಮಿಕರಾಗಿದ್ದು, ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ.
ಅವರು ಹೊರಗಿನವರಾಗಿದ್ದರಿಂದ ಮತ್ತು ಖಾಯಂ ನಿವಾಸಿಗಳಲ್ಲವಾದ್ದರಿಂದ ಆಸುಪಾಸಿನವರೊಂದಿಗೆ ಹೆಚ್ಚು ಸಂಪರ್ಕವನ್ನು ಹೊಂದಿಲ್ಲ. ಹೀಗಾಗಿ ಇಲ್ಲಿ ಯಾವುದೇ ನೆರೆಹೊರೆಯ ಬಾಂಧವ್ಯ ಕಾಣಸಿಗುವುದು ತೀರಾ ವಿರಳವಾಗಿದೆ.
ದಾಳಿಕೋರರೆಲ್ಲರೂ ನಯಾಗಾಂವ್‌ನಿಂದ ಬಂದವರಾಗಿದ್ದಾರೆ. ನಯಾಗಾಂವ್ ಹೆಚ್ಚುಕಮ್ಮಿ ಹಳೆಯ ಬಡಾವಣೆಯಾಗಿದ್ದು, ಗುಜ್ಜರ್ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಸ್ಥಳೀಯವಾಗಿ ಗುಜ್ಜರರು ಪ್ರಬಲ ಸಮುದಾಯವಾಗಿದ್ದಾರೆ.
ಆದರೂ ದಾಳಿ ನಡೆಸಿದವರನ್ನು ಸ್ಥಳೀಯ ಪ್ರಭಾವಿ ಗೂಂಡಾಗಳೆಂದು ನೆರೆಹೊರೆಯವರು ಗುರುತಿಸಿದ್ದರು ಹಾಗೂ ಅವರು ಮಧ್ಯಪ್ರವೇಶಿಸಲು ಹಿಂದೇಟುಹಾಕಿದ್ದಾರೆ.
ಪೊಲೀಸರ ಪಾತ್ರ
 ಸಾಜಿದ್ ಹಾಗೂ ಅವರ ಕುಟುಂಬಿಕರನ್ನು ಥಳಿಸಿದ ಗುಂಪಿನಲ್ಲಿದ್ದವರನ್ನು ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಈ ಘಟನೆಯ ವೀಡಿಯೊದಲ್ಲಿ ಸುಲಭವಾಗಿ ಗುರುತಿಸಬಹುದಾಗಿದೆ. ಆದಾಗ್ಯೂ, ಪೊಲೀಸರು ದುಷ್ಕರ್ಮಿಗಳ ಗುಂಪಿನಲ್ಲಿದ್ದ ವ್ಯಕ್ತಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರ್ಪಡೆಗೊಳಿಸಿರಲಿಲ್ಲ.
ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ. ಹಲವು ದಿನಗಳಾದ ಬಳಿಕವೂ, ಆರೋಪಿಗಳ ಗುರುತುಪತ್ತೆಹಚ್ಚುವ ಪರೇಡ್‌ನ್ನು ಇನ್ನೂ ನಡೆಸಲಾಗಿಲ್ಲ.
ಈ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿರುವ ಪ್ರತಿಯೊಬ್ಬರೂ ತುಟಿಬಿಗಿಹಿಡಿದುಕೊಂಡಿದ್ದು, ಏನನ್ನೂ ಹೇಳಲು ಇಚ್ಛಿಸುತ್ತಿಲ್ಲವೆನ್ನಲಾಗಿದೆ. ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಬೊಕೆನ್ ಮಾತ್ರವೇ ಈ ವಿಷಯದ ಬಗ್ಗೆ ಮಾತನಾಡುವಂತೆ ಅಕೀಲ್ ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಅವರು ಹೇಳುತ್ತಾರೆ.
ಎಫ್‌ಐಆರ್ ದಾಖಲಿಸಲು ನಿರಾಕರಣೆ
ಪ್ರಕರಣಕ್ಕೆ ಸಂಬಂಧಿಸಿ ಸಾಜಿದ್ ಕುಟುಂಬದ ವಿರುದ್ಧವೇ ಪ್ರತಿ ದೂರು ದಾಖಲಾಗಿದೆ. ಏಳು ದಿನಗಳ ಬಳಿಕ ಆರೋಪಿಗಳು ಬಾಲಕನೊಬ್ಬನನ್ನು ಪ್ರದರ್ಶಿಸಿ, ಆತನ ತಲೆಗೆ ಸಾಜಿದ್ ಕುಟುಂಬದ ಸದಸ್ಯರು ಬಲವಾಗಿ ಹೊಡೆದಿದ್ದಾರೆಂದು ಆರೋಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಆತನ ತಲೆಗೆ ಹಲವಾರು ಹೊಲಿಗೆಗಳನ್ನು ಹಾಕಬೇಕಾಯಿತೆಂದು ಅವರು ಹೇಳಿಕೊಂಡಿದ್ದಾರೆ. ಕುತೂಹಲಕರವರೆಂದರೆ ಆರೋಪಿಗಳು ಉಲ್ಲೇಖಿಸಿರುವ ಬಾಲಕನು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ದಾಳಿ ಘಟನೆಯ ವೀಡಿಯೋದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಪ್ರಕರಣವನ್ನು ಕೋರ್ಟ್ ಮೆಟ್ಟಿಲೇರದಂತೆ ಮಾಡುವುದಕ್ಕಾಗಿ ಸಂತ್ರಸ್ತ ಕುಟುಂಬವನ್ನು ಬೆದರಿಸುವ ಉದ್ದೇಶದಿಂದ, ಅವರ ವಿರುದ್ಧ ಕೌಂಟರ್ ಎಫ್‌ಐಆರ್ ದಾಖಲಿಸಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಸಂತ್ರಸ್ತ ಕುಟುಂಬದ ಮನವಿಯ ಹೊರತಾಗಿಯೂ ಈ ಕೌಂಟರ್ ಎಫ್‌ಐಆರ್‌ನ ಪ್ರತಿಯನ್ನು ಪೊಲೀಸರು ಒದಗಿಸಿಲ್ಲ. ಯುಎಎಚ್ ಸಂಘಟನೆಯ ಸದಸ್ಯರು ಕೆಲವು ಮಾಧ್ಯಮ ವ್ಯಕ್ತಿಗಳ ನೆರವಿನೊಂದಿಗೆ ಅದರ ಪ್ರತಿಯೊಂದನ್ನು ಪಡೆಯಲು ಯತ್ನಿಸಿದರೂ ಅದು ಸಾಧ್ಯವಾಗಿಲ್ಲ.
 ಎಪ್ರಿಲ್ 1ರಂದು ಸಂತ್ರಸ್ತ ಸಾಜಿದ್ ಅವರ ಕುಟುಂಬವು ಪತ್ರಿಕಾಗೋಷ್ಠಿಯೊಂದನ್ನು ಏರ್ಪಡಿಸಿ, ತಮಗೆ ಎದುರಾಗಿರುವ ಬೆದರಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿತು ಹಾಗೂ ತಮಗೆ ನ್ಯಾಯ ದೊರೆಯದಿದ್ದರೆ, ಬೇರೆ ದಾರಿಯಿಲ್ಲದೆ ಸಾಮೂಹಿಕ ಅತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ತನ್ನ ಅಳಲು ತೋಡಿಕೊಂಡಿತು.
 ಈ ಮಧ್ಯೆ ಗುಜ್ಜರ ಸಮುದಾಯದ ಕೆಲವರು ಸಭೆ ನಡೆಸಿ, ಈ ವಿವಾದವನ್ನು ಕೋರ್ಟ್ ಮೆಟ್ಟಲೇರದೆ ಬಗೆಹರಿಸುವಂತೆ ಮಾಡುವ ನಿಟ್ಟಿನಲ್ಲಿ ಸಂತ್ರಸ್ತ ಕುಟುಂಬಕ್ಕೆ ಬೆದರಿಕೆ ಹಾಕಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆನ್ನಲಾಗಿದೆ.
 ಸಂಕ್ಷಿಪ್ತವಾಗಿ ಹೇಳುವುದಾದರೆ ಗುರುಗ್ರಾಮದಲ್ಲಿ ನಡೆದ ಘಟನೆಯು ಮುಸ್ಲಿಮರ ವಿರುದ್ಧ ದ್ವೇಷ ಹಾಗೂ ಕೋಮುವಾದವು ಇಂತಹ ಭಯಾನಕವಾದ ಹಿಂಸಾಚಾರದ ಘಟನೆಗಳು ಮರುಕಳಿಸುವುದಕ್ಕೆ ಪ್ರಚೋದನೆ ನೀಡುತ್ತವೆ.
ಘೋರ ಅಪರಾಧಗಳನ್ನು ಎಸಗಿದರೂ, ಪ್ರಭಾವಿ ದುಷ್ಕರ್ಮಿಗಳಿಗೆ ಶಿಕ್ಷೆಯಾಗುತ್ತಿಲ್ಲ ಹಾಗೂ ಅವರಿಗೆ ಕಾನೂನು ಅನುಷ್ಠಾನ ಸಂಸ್ಥೆಗಳು ಸಂಪೂರ್ಣವಾಗಿ ಶರಣಾಗುತ್ತಿವೆಯೆಂಬುವುದಕ್ಕೆ ಈ ಘಟನೆಯು ನಿದರ್ಶನವಾಗಿದೆ. ಒಂದು ವೇಳೆ ಮುಹಮ್ಮದ್ ಸಾಜಿದ್ ಕುಟುಂಬಕ್ಕೆ ಬೆದರಿಕೆಯೊಡ್ಡಿ, ಅವರನ್ನು ವೌನವಾಗಿಸಿದಲ್ಲಿ ಅಥವಾ ಅವರು ಬಲವಂತವಾಗಿ ಮನೆಯನ್ನು ತೊರೆದು ಹೋಗುವಂತಾದಲ್ಲಿ, ಒಂದು ವೇಳೆ ಆರೋಪಿಗಳ ವಿರುದ್ಧ ಸ್ಪಷ್ಟವಾದ ಪುರಾವೆಗಳಿದ್ದ ಹೊರತಾಗಿಯೂ ಅವರಿಗೆ ಶಿಕ್ಷೆಯಾಗದೆ ಹೋದಲ್ಲಿ ನಮ್ಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಪ್ರಜಾತಾಂತ್ರಿಕ ಹಾಗೂ ಜಾತ್ಯತೀತ ಸ್ವರೂಪಕ್ಕೆ ಭಾರೀ ಹೊಡೆತ ಬೀಳಲಿದೆ.

Writer - ಕೃಪೆ: twocircles.net

contributor

Editor - ಕೃಪೆ: twocircles.net

contributor

Similar News

ಜಗದಗಲ
ಜಗ ದಗಲ