ಕರ್ಕರೆ ಕುರಿತು ಪ್ರಜ್ಞಾ ಸಿಂಗ್ ಹೇಳಿಕೆಯಿಂದ ಬಿಜೆಪಿಯ ನಿಜಬಣ್ಣ ಬಯಲು: ಕೇಜ್ರಿವಾಲ್

Update: 2019-04-19 15:22 GMT

ಹೊಸದಿಲ್ಲಿ,ಎ.19: ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಆಗಿನ ಮುಂಬೈ ಎಟಿಎಸ್ ವರಿಷ್ಠ  ಹೇಮಂತ್ ಕರ್ಕರೆ ಕುರಿತು ಅವಮಾನಕಾರಿ  ಹೇಳಿಕೆಯನ್ನು ನೀಡಿದ್ದಕ್ಕಾಗಿ ಭೋಪಾಲ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಇದು ಬಿಜೆಪಿಯ ನಿಜಬಣ್ಣವನ್ನು ತೋರಿಸಿದೆ ಎಂದು ಹೇಳಿದ್ದಾರೆ.

ಕರ್ಕರೆ ತನ್ನನ್ನು ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಿದ್ದರು,ಆದ್ದರಿಂದ ‘ತನ್ನ ಕರ್ಮ’ದಿಂದಾಗಿ ಅವರು ಸಾವನ್ನಪ್ಪಿದರು ಎಂದು ಠಾಕೂರ್ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ.

26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕರ್ಕರೆ ಕುರಿತು ಬಿಜೆಪಿ ಅಭ್ಯರ್ಥಿ ಠಾಕೂರ್ ಅವರ ಈ ಅವಮಾನಕಾರಿ ಹೇಳಿಕೆಯನ್ನು ಅತ್ಯಂತ ಕಟುವಾದ ಶಬ್ದಗಳಲ್ಲಿ ಖಂಡಿಸಬೇಕಿದೆ. ಬಿಜೆಪಿಯು ತನ್ನ ನಿಜವಾದ ಬಣ್ಣವನ್ನು ಪ್ರದರ್ಶಿಸುತ್ತಿದೆ ಮತ್ತು ಅದಕ್ಕೀಗ ಅದರ ಸ್ಥಾನವನ್ನು ತೋರಿಸಬೇಕಿದೆ ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾರತ ಮಾತೆಯ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ತೆತ್ತ ಕರ್ಕರೆಯವರ ತ್ಯಾಗವನ್ನು  ಬಿಜೆಪಿ ಪ್ರಶ್ನಿಸುತ್ತಿದೆ. ಇದು ಬಿಜೆಪಿಯ ರಾಷ್ಟ್ರಪ್ರೇಮವಾಗಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News