ಶ್ರೇಯಸ್, ಸ್ಮಿತ್‌ ಮಿಂಚು:ರಾಜಸ್ಥಾನಕ್ಕೆ ಗೆಲುವು

Update: 2019-04-20 18:06 GMT

ಜೈಪುರ, ಎ.20: ಶ್ರೇಯಸ್ ಗೋಪಾಲ್ ಪಡೆದ ಎರಡು ವಿಕೆಟ್ ಹಾಗೂ ಸ್ಟೀವನ್ ಸ್ಮಿತ್‌ರ ಅರ್ಧಶತಕದ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡ ಶನಿವಾರ ಇಲ್ಲಿ ಮುಂಬೈಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 5 ವಿಕೆಟ್‌ಗಳ ಜಯಭೇರಿ ಬಾರಿಸಿದೆ.

ಮುಂಬೈ ನೀಡಿದ 162 ರನ್ ಸಾಧಾರಣ ಗುರಿ ಬೆನ್ನಟ್ಟಿದ ಸ್ಮಿತ್ ನಾಯಕತ್ವದ ರಾಜಸ್ಥಾನ ಪಡೆ 19.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ರಾಜಸ್ಥಾನ ಪರ ಬ್ಯಾಟಿಂಗ್ ಆರಂಭಿಸಿದ ಅಜಿಂಕ್ಯ ರಹಾನೆ (12, 12 ಎಸೆತ, 2 ಬೌಂಡರಿ) ಹಾಗೂ ಸಂಜು ಸ್ಯಾಮ್ಸನ್ (35, 19 ಎಸೆತ, 6 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ಜೊತೆಯಾಟದಲ್ಲಿ 39 ರನ್ ಸೇರಿಸಿದರು. ಈ ವೇಳೆ ರಹಾನೆ ಅವರು ರಾಹುಲ್ ಚಹಾರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಗೂಡಿದ ಸ್ಯಾಮ್ಸನ್ ಹಾಗೂ ನಾಯಕಸ್ಮಿತ್ (ಅಜೇಯ 59, 48 ಎಸೆತ, 5 ಬೌಂಡರಿ, 1 ಸಿಕ್ಸರ್) ಮುಂಬೈ ಬೌಲರ್‌ಗಳನ್ನು ದಂಡಿಸತೊಡಗಿದರು. ಈ ಹಂತದಲ್ಲಿ ಸ್ಯಾಮ್ಸನ್ ವಿಕೆಟ್ ಕೈಚೆಲ್ಲಿದರು.

ಆ ಬಳಿಕ ಬಂದ ಬೆನ್ ಸ್ಟೋಕ್ಸ್ ಸೊನ್ನೆ ಸುತ್ತಿದರು. ರಿಯಾನ್ ಪರಾಗ್ (43, 29 ಎಸೆತ, 5 ಬೌಂಡರಿ, 1 ಸಿಕ್ಸರ್ ) ಹಾಗೂ ಸ್ಮಿತ್ ತಮ್ಮ ತಂಡದ ಗೆಲುವಿಗೆ ಬಲ ತುಂಬಿದರು. 4ನೇ ವಿಕೆಟ್ ಆಗಿ ಪರಾಗ್ ರನೌಟ್ ಆದಾಗ ರಾಜಸ್ಥಾನದ ಮೊತ್ತ 147. ಅಶ್ಟನ್ ಟರ್ನರ್(0) ವಿಫಲರಾದರು. ಅಂತಿಮವಾಗಿ ಸ್ಟುವರ್ಟ್ ಬಿನ್ನಿ (ಅಜೇಯ 7) ಹಾಗೂ ಸ್ಮಿತ್ತಂಡದ ಗೆಲುವನ್ನು ಖಚಿತಪಡಿಸಿದರು.

ಮುಂಬೈ ಪರ ರಾಹುಲ್ ಚಹಾರ್ (29ಕ್ಕೆ 3) ಬೌಲಿಂಗ್‌ನಲ್ಲಿ ಮತ್ತೊಮ್ಮೆ ಮಿಂಚಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಕ್ವಿಂಟನ್ ಡಿ ಕಾಕ್‌ರ ಜವಾಬ್ದಾರಿಯುತ ಅರ್ಧಶತಕದ (65, 47 ಎಸೆತ, 6 ಬೌಂಡರಿ, 2 ಸಿಕ್ಸರ್)ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತ್ತು. ಸೂರ್ಯಕುಮಾರ್ ಯಾದವ್ (34, 33 ಎಸೆತ, 1 ಬೌಂಡರಿ, 1 ಸಿಕ್ಸರ್), ಹಾರ್ದಿಕ್ಪಾಂಡ್ಯ (23, 15 ಎಸೆತ, 2 ಬೌಂಡರಿ, 1 ಸಿಕ್ಸರ್) ತಂಡದ ಪರ ಉತ್ತಮ ಮೊತ್ತ ಗಳಿಸಿದರು.

ನಾಯಕ ರೋಹಿತ್ ಶರ್ಮಾ (5), ಕೀರನ್ ಪೊಲಾರ್ಡ್ (10) ವಿಫಲರಾದರು. ಬೆನ್ ಕಟಿಂಗ್ (ಅಜೇಯ 13, 9 ಎಸೆತ, 1 ಬೌಂಡರಿ, 1 ಸಿಕ್ಸರ್) ಕೊನೆಯಲ್ಲಿ ಸ್ವಲ್ಪ ಮಿಂಚಿದರು.

ರಾಜಸ್ಥಾನ ಪರ ಶ್ರೇಯಸ್ (21ಕ್ಕೆ 2), ಸ್ಟುವರ್ಟ್ ಬಿನ್ನಿ (19ಕ್ಕೆ 1) ಹಾಗೂ ಜೋಫ್ರಾ ಅರ್ಚರ್ (22ಕ್ಕೆ 1) ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News