ತಮಿಳುನಾಡಿನ 10 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಮುಖ್ಯ ಚುನಾವಣಾಧಿಕಾರಿ ಶಿಫಾರಸು

Update: 2019-04-21 15:56 GMT

ಚೆನ್ನೈ, ಎ. 21: ತಮಿಳುನಾಡಿನಾದ್ಯಂತದ 10 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ತಮಿಳುನಾಡಿನ ಮುಖ್ಯ ಚುನಾವಣಾ ಆಯುಕ್ತ ಸತ್ಯಪ್ರಭ ಸಾಹು ರವಿವಾರ ಶಿಫಾರಸು ಮಾಡಿದ್ದಾರೆ.

 ಧರ್ಮಪುರಿ ಲೋಕಸಭಾ ಕ್ಷೇತ್ರದ ಪಾಪಿರೆಡ್ಡಿ, ಕುಡಲೂರು ಲೋಕಸಭಾ ಕ್ಷೇತ್ರದ ಪನ್ರುಟ್ಟಿ ಹಾಗೂ ತಿರುವಲ್ಲೂರ್‌ನ ಪೂನಾಮಲ್ಲೀಯಲ್ಲಿ ಮರು ಲೋಕಸಭಾ ಹಾಗೂ ಉಪ ಚುನಾವಣೆ ನಡೆಸಲಾಗುವುದು. ಈ ಬಗ್ಗೆ ಭಾರತದ ಚುನಾವಣಾ ಆಯೋಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ರಾಜ್ಯದ 18 ವಿಧಾನ ಸಭಾ ಸ್ಥಾನಗಳಿಗೆ ಉಪ ಚುನಾವಣೆ ಹಾಗೂ 38 ಲೋಕಸಭಾ ಸ್ಥಾನಗಳಿಗೆ ಚುನಾವಣೆ ಎಪ್ರಿಲ್ 18ರಂದು ನಡೆಯಲಿದೆ. ನಾವು 6 ಬಾರಿ ಮತದಾನ ಮಾಡಿದ್ದೇವೆ ಎಂದು ಮತದಾರರು ಹೇಳಿದ ಬಳಿಕ ಧರ್ಮಪುರಿಯ 10 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಪ್ರತಿಪಕ್ಷ ಡಿಎಂಕೆ ಆಗ್ರಹಿಸಿತ್ತು.

ಹಲವು ಮತಗಟ್ಟೆಗಳನ್ನು ಪಿಎಂಕೆ ವಶಪಡಿಸಿಕೊಂಡಿತ್ತು ಎಂದು ಡಿಎಂಕೆ ಆರೋಪಿಸಿತ್ತು. ಧರ್ಮಪುರಿಯಲ್ಲಿ ಪಿಎಂಕೆ ಪದಾಧಿಕಾರಿಗಳು ಮತಗಟ್ಟೆ ವಶಪಡಿಸಿಕೊಳ್ಳುತ್ತಿರುವುದರ ವೀಡಿಯೊ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು. ಪಿಎಂಕೆ ಹಾಗೂ ಎಡಿಎಂಕೆ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆಸಿದೆ ಎಂದು ಆರೋಪಿಸಿದ ವಿಸಿಕೆ ಚಿದಂಬರಂನಲ್ಲಿ ಮರು ಚುನಾವಣೆ ನಡೆಸುವಂತೆ ಆಗ್ರಹಿಸಿತ್ತು. ವಿಲ್ಲುಪುರಂ ಲೋಕಸಭಾ ಕ್ಷೇತ್ರದ ಟಿಂದುವನಮ್ ಪಟ್ಟಣದ ಮತದಾರರ ಪಟ್ಟಿಯಲ್ಲಿ 500 ಮುಸ್ಲಿಮರು ಹಾಗೂ ದಲಿತರ ಹೆಸರುಗಳು ನಾಪತ್ತೆಯಾಗಿದ್ದವು ಎಂದು ವಿಸಿಕೆ ನಾಯಕ ಡಿ. ರವಿಕುಮಾರ್ ಆರೋಪಿಸಿದ್ದರು.

 ರಾಜ್ಯದಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಯ ಒಂದು ಭಾಗ ವಿಸಿಕೆ. ಮತದಾರರ ಪಟ್ಟಿ ನಾಪತ್ತೆಯಾದ ಬಗ್ಗೆ ಸ್ವೀಕರಿಸಲಾದ ಹಲವು ದೂರುಗಳ ಬಗ್ಗೆ ಕನ್ಯಾಕುಮಾರಿಯ ಜಿಲ್ಲಾಧಿಕಾರಿ ಹಾಗೂ ಉಪ ಜಿಲ್ಲಾಧಿಕಾರಿಯಿಂದ ವರದಿಯನ್ನು ಇನ್ನಷ್ಟೇ ಸ್ವೀಕರಿಸಬೇಕಿದೆ. ಈ ವರದಿ ಆಧಾರದಲ್ಲಿ ಕನ್ಯಾಕುಮಾರಿಯಲ್ಲಿ ಮರು ಚುನಾವಣೆ ನಡೆಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸಾಹು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News